ಭಯೋತ್ಪಾದಕರ ಗುರುತಿಸುವಿಕೆಯಲ್ಲಿ ರಾಜಕೀಯ ಸಲ್ಲದು: ನರೇಂದ್ರ ಮೋದಿ

Update: 2022-06-25 15:35 GMT

ಹೊಸದಿಲ್ಲಿ, ಜೂ.25: ಭಯೋತ್ಪಾದಕರ ಗುರುತಿಸುವಿಕೆಯನ್ನು ರಾಜಕೀಯಗೊಳಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಲಷ್ಕರೆ ತೈಯಬ ಸಂಘಟನೆಯ ಉಗ್ರಗಾಮಿಗಳನ್ನು ವಿಶ್ವಸಂಸ್ಥೆ ಭದ್ರತಾ ಸಮಿತಿ ನೇತೃತ್ವದಲ್ಲಿ ನಿರ್ಬಂಧಿತರ ಪಟ್ಟಿಗೆ ಸೇರಿಸುವ ಪ್ರಯತ್ನಕ್ಕೆ ಚೀನಾದ ಆಕ್ಷೇಪವನ್ನು ಪರೋಕ್ಷವಾಗಿ ಉಲ್ಲೇಖಿಸಿದರು ಎಂದು ಮಾಧ್ಯಮಗಳು ವರದಿ ಮಾಡಿದೆ.

ವರ್ಚುವಲ್ ವೇದಿಕೆಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಬ್ರಿಕ್ಸ್ ಸದಸ್ಯರಾಗಿ ನಾವು ಪರಸ್ಪರರ ಭದ್ರತಾ ಕಾಳಜಿಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಭಯೋತ್ಪಾದಕರನ್ನು ಗುರುತಿಸುವ ಪ್ರಕ್ರಿಯೆಗೆ ಪರಸ್ಪರ ಬೆಂಬಲ ನೀಡಬೇಕು. ಈ ಸೂಕ್ಷ್ಮ ವಿಷಯವನ್ನು ರಾಜಕೀಯಗೊಳಿಸಬಾರದು ಎಂದರು. ಪಾಕಿಸ್ತಾನ ಮೂಲದ ಉಗ್ರಗಾಮಿ ಅಬ್ದುಲ್ ರೆಹ್ಮಾನ್ ಮಕ್ಕಿಯನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ವಿಶ್ವಸಂಸ್ಥೆ ಭದ್ರತಾ ಸಮಿತಿಯ ಉಪಕ್ರಮಗಳಿಗೆ ಚೀನಾವು ಅಂತಿಮ ಕ್ಷಣದಲ್ಲಿ ತಡೆನೀಡಿತ್ತು. ಇದು ಅತ್ಯಂತ ದುರದೃಷ್ಟಕರ ಮತ್ತು ಎರಡು ಮಾನದಂಡದ ಧೋರಣೆಯಾಗಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಚೀನಾದ ಅಧ್ಯಕ್ಷತೆಯಲ್ಲಿ ನಡೆದ 2 ದಿನಗಳ ಬ್ರಿಕ್ಸ್ ಶೃಂಗಸಭೆ ಶುಕ್ರವಾರ ಸಮಾರೋಪಗೊಂಡಿದೆ.

ಅಂತಿಮ ದಿನದಂದು ಹೊರಡಿಸಲಾದ ಜಂಟಿ ಹೇಳಿಕೆಯಲ್ಲೂ ವಿಶ್ವಸಂಸ್ಥೆ ಭದ್ರತಾ ಸಮಿತಿಯ ನಿರ್ಬಂಧ ಸಮಿತಿಯ ಕಾರ್ಯಗಳನ್ನು ರಾಜಕೀಯಗೊಳಿಸುವುದನ್ನು ತಪ್ಪಿಸುವ ಅಗತ್ಯದ ಬಗ್ಗೆ ಉಲ್ಲೇಖಿಸಲಾಗಿದೆ. ‘ಭಯೋತ್ಪಾದನಾ ನಿಗ್ರಹ ಸಹಕಾರವನ್ನು ಮತ್ತಷ್ಟು ಆಳಗೊಳಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ ಮತ್ತು ನಿರ್ಬಂಧನೆ ವಿಧಿಸುವ ವಿಷಯದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಏಕೈಕ ಅಧಿಕಾರವನ್ನು ಪುನರುಚ್ಚರಿಸುತ್ತೇವೆ. ಪರಿಣಾಮಕಾರಿತ್ವ, ಸ್ಪಂದಿಸುವಿಕೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿಯ ಕಾರ್ಯ ವಿಧಾನಗಳನ್ನು ಮತ್ತಷ್ಟು ಬಲಪಡಿಸಲು , ಸಾಕ್ಷ್ಯಾಧಾರಿತ ಮಾನದಂಡಗಳ ಮೇಲೆ ವಸ್ತುನಿಷ್ಟವಾಗಿ ಪ್ರಸ್ತಾವನೆಗಳನ್ನು ಪಟ್ಟಿಮಾಡುವುದು ಸೇರಿದಂತೆ ಯಾವುದೇ ಪ್ರಕ್ರಿಯೆಗಳನ್ನು ರಾಜಕೀಯಗೊಳಿಸುವುದನ್ನು ತಪ್ಪಿಸಬೇಕೆಂದು ಕರೆ ನೀಡುತ್ತೇವೆ’ ಎಂದು ಹೇಳಿಕೆ ತಿಳಿಸಿದೆ. ಈ ಹಿಂದೆ, ಎಲ್ಇಟಿ ಮುಖ್ಯಸ್ಥ ಮಸೂದ್ ಅಝರ್ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ವಿಶ್ವಸಂಸ್ಥೆ ಭದ್ರತಾ ಸಮಿತಿ ನಿರ್ಣಯಕ್ಕೂ ಚೀನಾ ಆಕ್ಷೇಪ ಸಲ್ಲಿಸಿ ತಡೆಯೊಡ್ಡಿತ್ತು. ಆದರೆ 2019ರ ಮೇ ತಿಂಗಳಿನಲ್ಲಿ ಆಕ್ಷೇಪಣೆ ಹಿಂಪಡೆದ ಕಾರಣ ಅಝರ್ ಮೇಲೆ ನಿರ್ಬಂಧ ಜಾರಿಯಾಗಿದ್ದು ಪ್ರಯಾಣದ ಮೇಲೆ ನಿಷೇಧ, ಶಸ್ತ್ರಾಸ್ತ್ರ ನಿರ್ಬಂಧ, ಆಸ್ತಿಯ ಮುಟ್ಟುಗೋಲು ಮುಂತಾದ ಕ್ರಮ ಕೈಗೊಳ್ಳಲು ಸಾಧ್ಯವಾಗಿದೆ.

ಶುಕ್ರವಾರ ಬ್ರಿಕ್ಸ್ ಮುಖಂಡರು ಜಾಗತಿಕ ಬೆಳವಣಿಗೆಯ ವಿಷಯದಲ್ಲಿ 13 ಅತಿಥಿ ದೇಶಗಳೊಂದಿಗೆ ಸಂವಾದ ನಡೆಸಿದರು. ಮುಕ್ತ, ನಿರ್ಬಂಧರಹಿತ, ಅಂತರ್ಗತ ಮತ್ತು ನಿಯಮ ಆಧಾರಿತ ಸಮುದ್ರವ್ಯಾಪ್ತಿಯ ಬಗ್ಗೆ, ಮತ್ತು ಹಿಂದೂ ಮಹಾಸಾಗರ ಪ್ರದೇಶದಿಂದ ಪೆಸಿಫಿಕ್ ಸಾಗರದವರೆಗೆ ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಭಾರತದ ಧೋರಣೆಯನ್ನು ಮೋದಿ ಒತ್ತಿಹೇಳಿದರು ಎಂದು ಭಾರತದ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News