ಉಡುಪಿ: ರಾಷ್ಟ್ರೀಯ ಲೋಕ್ ಅದಾಲತ್; ಒಂದೇ ದಿನದಲ್ಲಿ ಒಟ್ಟು 30,773 ಪ್ರಕರಣ ಇತ್ಯರ್ಥ

Update: 2022-06-25 15:44 GMT

ಉಡುಪಿ : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ  ನಿರ್ದೆಶನದ ಮೇರೆಗೆ ಶನಿವಾರ ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತನ್ನು ಆಯೋಜಿಸಿದ್ದು,  ಒಂದೇ ದಿನ ಒಟ್ಟು 30,773  ಪ್ರಕರಣಗಳನ್ನು ಇತ್ಯರ್ಥ ಗೊಳಿಸಲಾಗಿದೆ.

ಇವುಗಳಲ್ಲಿ ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ -೨೬, ಚೆಕ್ಕು ಅಮಾನ್ಯ ಪ್ರಕರಣ-೨೨೫, ಬ್ಯಾಂಕ್/ಹಣ ವಸೂಲಾತಿ ಪ್ರಕರಣ-೧೯, ಎಂ.ವಿ.ಸಿ ಪ್ರಕರಣ-೧೮೫, ಕಾರ್ಮಿಕ ನಷ್ಟ ಪರಿಹಾರ ಪ್ರಕರಣ-೧, ಎಂ.ಎಂ.ಆರ್.ಡಿ ಆಕ್ಟ್ ಪ್ರಕರಣ-೧೬, ವೈವಾಹಿಕ ಪ್ರಕರಣ-೩, ಸಿವಿಲ್ ಪ್ರಕರಣ-೧೭೦, ಇತರೇ ಕ್ರಿಮಿನಲ್ ಪ್ರಕರಣ- ೨೦೪೯ ಹಾಗೂ ವ್ಯಾಜ್ಯ ಪೂರ್ವ ದಾವೆ-೨೮,೦೭೯ನ್ನು ರಾಜೀ ಮುಖಾಂತರ ಇತ್ಯರ್ಥಪಡಿಸಿ ಒಟ್ಟು ೨೦,೫೦,೧೩,೩೫೮ (೨೦.೫೦ಕೋಟಿ ರೂ.) ರೂ.ಗಳ ಪರಿಹಾರ ಮೊತ್ತವನ್ನು ಘೋಷಿಸಲಾಯಿತು. 

ಲೋಕ ಅದಾಲತ್‌ನ ಪ್ರಮುಖ ಅಂಶಗಳು

ಪ್ರಧಾನ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯದಲ್ಲಿ ಮೂರು ವರ್ಷಗಳ ಹಿಂದೆ ವೈಮನಸ್ಸಿನಿಂದ ದೂರವಾಗಿದ್ದ 4 ದಂಪತಿಗಳನ್ನು ಮತ್ತೆ ಒಂದುಗೂಡಿಸಿದ್ದಾರೆ. ಕಾರ್ಕಳದ ನ್ಯಾಯಾಲದಲ್ಲಿ ೯೮ ಜನ ಪ್ರತಿವಾದಿಗಳ ಹಾಗೂ ಇಬ್ಬರು ವಾದಿಗಳಿದ್ದ ಅಸಲು ದಾವೆಯಲ್ಲಿ ಉಭಯಪಕ್ಷಗಾರರು ಪಾಲು ದಾವೆಯನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡಿದ್ದಾರೆ.

ಒಂದೇ ದಿನ ೨ ವಾಜ್ಯ ಇತ್ಯರ್ಥಪಡಿಸಿಕೊಂಡ ಅತ್ತೆ ಮತ್ತು ಸೊಸೆ: ೨ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಹಾಗೂ ೪ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಮುಂದಿದ್ದ ಎರಡೂ ದಾವೆಗಳಲ್ಲಿ ಅತ್ತೆ ಮತ್ತು ಸೊಸೆ ಹಾಗೂ ಇತರರು ಭಾಗಿಯಾಗಿ ವ್ಯಾಜ್ಯ ಇತ್ಯರ್ಥಪಡಿಸಿಕೊಂಡಿದ್ದು ಈ ಅದಾಲತ್‌ನ ವಿಶೇಷವಾಗಿತ್ತು.

ಪ್ರದಾನ ಹಿರಿಯ ಸಿವಿಲ್ ನ್ಯಾಯಾಧೀಶರು ನ್ಯಾಯಾಲಯದಲ್ಲಿ ೨೦೧೪ ರಲ್ಲಿ ಅಣ್ಣ ಮತ್ತು ತಂಗಿಯ ನಡುವೆ ದಾಖಲಾದ  ಪಾಲು ವಿಭಾಗದ ದಾವೆಯನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದ್ದಾರೆ. ಅದೇ ರೀತಿ ೨೦೦೪ ರಲ್ಲಿ ದಾಖಲಾದ ಅಸಲು ದಾವೆ ಪ್ರಕರಣ ಉಭಯ ಪಕ್ಷಗಾರರ ನಡುವೆ ಸೌಹಾರ್ದಯುತವಾಗಿ ಇತ್ಯರ್ಥಗೊಂಡಿದೆ.

ಕುಂದಾಪುರದಲ್ಲಿ 31 ವರ್ಷಗಳ ಹಿಂದೆ ಶುರುವಾದ ವೈಮನಸ್ಸು ಈ ಬಾರಿಯ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು, ವಕೀಲರು ಹಾಗೂ ಸಂಧಾನಕಾರರ ಮಧ್ಯಸ್ಥಿಕೆಯಿಂದ ರಾಜೀ ಸಂಧಾನದ ಮೂಲಕ ಇತ್ಯರ್ಥ ವಾಗಿದೆ.

೨೦೧೧ರ ಅಸಲು ದಾವೆ ಪ್ರಕರಣದಲ್ಲಿ ಲೋಕ್ ಅದಾಲತ್‌ನಲ್ಲಿ ಭಾಗಿಯಾಗಲು ಆಟೋರಿಕ್ಷಾದಲ್ಲಿ ಬಂದ ೮೧ ವರ್ಷದ ವೃದ್ಧೆ ದೇವಕಿ ಶೆಡ್ತಿ ತಮ್ಮ ಮಗಳಾದ ಜಯಂತಿಗೆ ಜಿ.ಪಿ.ಎ. ನೀಡಿದ್ದರು. ಅವರು ನ್ಯಾಯಾಲಯದ ಮೆಟ್ಟಿಲುಗಳನ್ನು ಹತ್ತಲಾಗದೇ ಆಟೋದಲ್ಲಿ ಕುಳಿತಿದ್ದು ಆ ಸಂದರ್ಭದಲ್ಲಿ ೪ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ  ಜೀತು ಆರ್.ಎಸ್., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಸಂಧಾನ ಕಾರರಾದ ನ್ಯಾಯವಾದಿ ಮಿತೇಶ್ ಶೆಟ್ಟಿ ಹಾಗೂ ಉಭಯ ಪಕ್ಷಗಾರರ ವಕೀಲರು ದೇವಕಿ ಶೆಡ್ತಿ ಅವರ ಬಳಿ ಬಂದು ಜಿ.ಪಿ.ಎ. ನೀಡಿದ್ದರ ಬಗ್ಗೆ ಪರಿಶೀಲಿಸಿ ತದನಂತರ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮುಂಬೈನಲ್ಲಿದ್ದ ನಾಲ್ಕು ಜನ ಪಕ್ಷಗಾರರು ಭಾಗಿಯಾದ ನಂತರ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು.

ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ,  ವಕೀಲರ ಸಂಘ ಉಡುಪಿ, ಕುಂದಾಪುರ ಹಾಗೂ ಕಾರ್ಕಳ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್, ಕಕ್ಷಿಗಾರರು ಹಾಗೂ ಇತರ ಸರ್ಕಾರಿ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಇಂದಿನ ಲೋಕ್ ಅದಾಲತ್‌ನ್ನು ಯಶಸ್ವಿ ಗೊಳಿಸಲಾಯಿತು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News