ಕುತ್ತಾರಿನಿಂದ ಮುಡಿಪು ರಸ್ತೆ ಬದಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

Update: 2022-06-25 15:52 GMT

ಕೊಣಾಜೆ : ಒಂದು ಗ್ರಾಮಕ್ಕೆ ಘನತ್ಯಾಜ್ಯ ವಿಲೇವಾರಿ ಘಟಕ ಬಂದಾಗ ಅದರ ಅನುಷ್ಠಾನಕ್ಕೆ ಎಲ್ಲರ ಸಹಕಾರ ಅಗತ್ಯ, ಸ್ಥಳೀಯ ಸಂಸ್ಥೆಗಳ ಮಾರ್ಗಸೂಚಿಯನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದು ಭಾವಿಸುವುದರಿಂದ ಅದಕ್ಕೆ ಸಮನಾಗಿ ಘಟಕ ನಿರ್ವಾಹಕರು ಕಾರ್ಯ ನಿರ್ವಹಿಸಿದಾಗ ನಮ್ಮ ಪರಿಸರ ಅತ್ಯುತ್ತಮವಾಗಿರುತ್ತದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು‌

ಕುತ್ತಾರಿನಿಂದ ಮುಡಿಪು ತನಕ ರಸ್ತೆಬದಿ ಸ್ವಚ್ಚಗೊಳಿಸುವ‌‌ ಸ್ವಚ್ಛತಾ ಅಭಿಯಾನಕ್ಕೆ ಶನಿವಾರ  ಕುತ್ತಾರು ಶಾಲಾ ಪಕ್ಕದ ರಸ್ತೆಯ ಬದಿಯಲ್ಲಿ ಹಣ್ಣಿನ ಗಿಡವನ್ನು ನೆಡುವುದರ ಮೂಲಕ‌ ಚಾಲನೆ ನೀಡಿ ಮಾತನಾಡಿದರು.

ಈ ಪ್ರಪಂಚದಲ್ಲಿ ಒಂದು ವಿಚಿತ್ರವಾದರೂ ಸತ್ಯ ಎಲ್ಲರ ಮನೆ ಪರಿಸರ ಸ್ವಚ್ಛ ಇರಬೇಕು, ಆದರೆ ಅವರ ಮನೆಯ ತ್ಯಾಜ್ಯ ರಸ್ತೆಗೆ ಎಸೆಯುತ್ತಾರೆ, ಎಲ್ಲರಿಗೂ ತ್ಯಾಜ್ಯ ವಿಲೇವಾರಿ ಘಟಕ ಬೇಕು, ಆದರೆ ತಮ್ಮ ಮನೆಯ ಪರಿಸರದಲ್ಲಿ ನಿರ್ಮಾಣವಾದರೆ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ, ಇಂತಹ ಸಂದಿಗ್ಧತೆಯಲ್ಲಿ ಪರಿಸರ ನೈರ್ಮಲ್ಯ ಕಾಪಾಡುವುದು ಹೇಗೆ ಸಾಧ್ಯ ಎಂದು ಹೇಳಿದರು.

ಬೆಂಗಳೂರಿನಿಂದ ಮಹಾನಗರದಲ್ಲಿ ದೂರದೃಷ್ಟಿಯಲ್ಲಿ ಕಾರ್ಯನಿರ್ವಹಿಸಿದ್ದರೂ ಜನಸಂಖ್ಯೆ ಏರುತ್ತಾ ಹೋದಂತೆ ವಿಲೇವಾರಿ ಕಷ್ಟವಾಗುತ್ತಿದೆ, ಸಮಸ್ಯೆ ಇನ್ನೂ ನಿವಾರಣೆ ಆಗಿಲ್ಲ. ಹಾಗಾಗಿ ಉಳ್ಳಾಲ ತಾಲೂಕು ಅಭಿವೃದ್ಧಿ ಆಗುತ್ತಿ ರುವಾಗಲೇ ದೂರದೃಷ್ಟಿ ಯೋಜನೆ ಹಮ್ಮಿಕೊಳ್ಳಲಾಗುತ್ತಿದ್ದು ಎಲ್ಲರ ಸಹಕಾರ ಇದ್ದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಎಚ್ಚರಿಸಿದರು.

ಸ್ವಚ್ಛತಾ ಅಭಿಯಾನದಲ್ಲಿ ಕುತ್ತಾರಿನಿಂದ ಮುಡಿಪು ಪೇಟೆ, ನವೋದಯ  ವಿದ್ಯಾಲಯ ತನಕ ರಸ್ತೆಬದಿಯಲ್ಲಿದ್ದ ಕಸ, ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ಸ್ವಚ್ಛಗೊಳಿಸಕಾಯಿತು.

ಅಭಿಯಾನದಲ್ಲಿ ಮುಡಿಪಿನ ಜನಶಿಕ್ಷಣ ಟ್ರಸ್ಟ್, ಮುನ್ನೂರು, ಬೆಳ್ಮ, ಮಂಜನಾಡಿ, ಕೊಣಾಜೆ, ಪಜೀರು, ಕುರ್ನಾಡು ಗ್ರಾಮ ಪಂ. ವ್ಯಾಪ್ತಿಯ ಸ್ವಯಂ ಸೇವಕರು, ಪಂಚಾಯಿತಿ ಪ್ರತಿನಿಧಿಗಳು, ನಿಟ್ಟೆ ಫಿಸಿಯೋಥೆರಪಿ ಕಾಲೇಜು,  ಯೆನೆಪೋಯ ದಂತ ಮಗಾವಿದ್ಯಾಲಯ, ಫಾ. ಮುಲ್ಲರ್ ಹೋಮಿಯೋಪಥಿಕ್ ಕಾಲೇಜು, ಕಣಚೂರು ವೈದ್ಯಕೀಯ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಮುನ್ನೂರು ಮುಡಿಪು ವ್ಯಾಪ್ತಿಯ ಖಾಸಗಿ ಶಿಕ್ಷಣ  ಸಂಸ್ಥೆಗಳ ವಿದ್ಯಾರ್ಥಿಗಳು, ಸಂಸ್ಥೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ತ್ಯಾಜ್ಯ ನಿರ್ಮೂಲನೆ ಜತೆಗೆ ಆಯ್ದ ಆರು ಪ್ರದೇಶಗಳಲ್ಲಿ ಹಣ್ಣಿನ ಗಿಡ ನೆಡಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಹುಲ್ಲು ಕಟಾವು, ಜೆಸಿಬಿಯಲ್ಲಿ ರಸ್ತೆಬದಿ ಚರಂಡಿ ಸ್ವಚ್ಚಗೊಳಿಸುವುದು, ಅಂಗಡಿ, ವ್ಯಾಪಾರ ಕೇಂದ್ರದಲ್ಲಿ ಜಾಗೃತಿ ಮೂಡಿಸಲಾಯಿತು.

ಶಾಸಕರ ಸಭೆಯ ಬಳಿಕ ಪ್ರಥಮ ಹಂತದ ಕಾರ್ಯಕ್ರಮ ಇದಾಗಿದ್ದು, ಮುಂದಿನ ದಿನಗಳಲ್ಲಿ ಮೂರು ತಿಂಗಳಿಗೊಮ್ಮೆ ಎಲ್ಲ ಪಂಚಾಯಿತಿಗಳು, ಖಾಸಗಿ ಸಂಸ್ಥೆಗಳು, ಜನಶಿಕ್ಷಣ ಟ್ರಸ್ಟ್ ಜೊತೆ ಸಭೆ ನಡೆಸಿ ರಾಜ್ಯದಲ್ಲೇ ಮಾದರಿ ರಸ್ತೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವ ಪಡೆಯಿತು.

ಕಣಚೂರು ವೈದ್ಯಕೀಯ ಮಹಾ ವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಚೇರ್ ಮೆನ್ ಯು.ಕೆ. ಮೋನು, ಯೆನೆಪೋಯ ದಂತ ಮಹಾವಿದ್ಯಾಲಯದ ಡೀನ್ ಡಾ. ಅಖ್ತರ್ ಹುಸೈನ್, ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಡಾ. ಧಾನೇಶ್ ಕುಮಾರ್, ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ್ ನಾಯಕ್, ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂಚಲಾಕ್ಷಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಶೆಟ್ಟಿ ಹಾಗೂ ಕೃಷ್ಣ ಮೂಲ್ಯ, ವಿವಿಧ ಇಲಾಖೆಯ ಅಧಿಕಾರಿ ಗಳಾದ ವಿಶ್ವನಾಥ ಬೈಲಮೂಲೆ, ಚಂದ್ರಶೇಖರ ಪಾತೂರು ಹಾಗೂ ಡೊಂಬಯ ಇಡ್ಕಿದು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News