ಹಲಸು - ಹಣ್ಣು ಮೇಳ; ಹಲಸು ಬೆಳೆಸಿ ಪರಂಪರೆ ಉಳಿಸುವ ಕೆಲಸವಾಗಲಿ: ಶಾಸಕ ಸಂಜೀವ ಮಠಂದೂರು

Update: 2022-06-25 16:03 GMT

ಪುತ್ತೂರು: ಹಲಸನ್ನು ತಿನ್ನುವ ಜೊತೆಗೆ ಅವುಗಳನ್ನು ಬೆಳೆಸುವ ಮೂಲಕ ಪರಂಪರೆ ಉಳಿಸುವ ಕೆಲಸವಾಗ ಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. 

ಅವರು ಶನಿವಾರ ನವತೇಜ ಪುತ್ತೂರು ಮತ್ತು ಜೆಸಿಐ ಪುತ್ತೂರು ಇವುಗಳ ಜಂಟೀ ಆಯೋಜನೆಯಲ್ಲಿ ಜೂ.25 ಮತ್ತು 26ರಂದು ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಕಲಾ ಮಂದಿಯಲ್ಲಿ ನಡೆಯಲಿರುವ ಹಲಸು ಮತ್ತು ಹಣ್ಣು ಮೇಳದ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು. 

ನಮ್ಮ ಹಿರಿಯರು ಹಲಸಿನ ಹಣ್ಣುಗಳ ವಿವಿಧ ತಿನಿಸುಗಳನ್ನು ಮಾಡಿ ಅ ಮೂಲಕ ಜೀವನ ಸಾಗಿಸಿದವರು. ಮೌಲ್ಯವರ್ಧನೆಯ ಮೂಲಕ ಹಲಸು ಎಂಬ ಬಹು ಉಪಯೋಗಿ ಹಣ್ಣು ಇಂದು ಜಗತ್ತಿನೆಲ್ಲೆಡೆ ಗುರುತಿಸಿಕೊಂಡಿದೆ ಎಂದರು.

ಈಶ್ವರಮಂಗಲದ ಕೃಷಿಕ, ಹಲಸುಪ್ರೇಮಿ ಕತ್ರಿಬೈಲು ವೆಂಕಟೇಶ್ವರ ಶರ್ಮ ಅವರು ಶಾಸಕರ ಜೊತೆಗೆ ಮೇಳದ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಅವರು ಸಭಾ ಕಾರ್ಯಕ್ರಮದಲ್ಲಿ ತಿಪಟೂರಿನ ಕೆಂಪು ಹಲಸಿನ ಹಣ್ಣು ತುಂಡು ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮೀಯಪದವು ಕೃಷಿಕ ಡಾ. ಚಂದ್ರಶೇಖರ ಚೌಟ ಅಧ್ಯಕ್ಷತೆ ವಹಿಸಿದ್ದರು.

ಜೆಸಿಐ ಸೆನೆಟರ್ ರೋಯನ್ ಉದಯ ಕ್ರಾಸ್ತಾ, ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತೋಡಿ, ನವತೇಜ ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ, ಕಾರ್ಯದರ್ಶಿ ಸುಹಾಸ್ ಮರಿಕೆ, ಜೇಸಿ ಅಧ್ಯಕ್ಷ ಶಶಿರಾಜ್ ರೈ, ಪತ್ರಕರ್ತ ಸಂಪಾದಕ ನಾ. ಕಾರಂತ ಪೆರಾಜೆ ಮತ್ತಿತರರು ಉಪಸ್ಥಿತರಿದ್ದರು.

ಕೃಷಿ ಬರಹಗಾರ ನಾ. ಕಾರಂತ ಪೆರಾಜೆ ಸ್ವಾಗತಿಸಿ, ಪುತ್ತೂರು ಜೇಸಿ ಅಧ್ಯಕ್ಷ ಜೇಸಿ ಶಶಿರಾಜ್ ರೈ ವಂದಿಸಿದರು. 
ವಿಶೇಷ ಆಕರ್ಷಣೆಯಾದ ಕೆಂಪು ಹಲಸು 

ಮೇಳದಲ್ಲಿ ತಿಪಟೂರಿನ ಪ್ರಸಿದ್ದ ಕೆಂಪು ಹಲಸು ವಿಶೇಷ ಆಕರ್ಷಣೆಯಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಈ ಕೆಂಪು ಹಲಸು ಕತ್ತರಿಸಿ ಗಣ್ಯರು ಮೇಳಕ್ಕೆ ಚಾಲನೆಯನ್ನು ನೀಡಿದರು. ಅಲ್ಲದೆ ವಿವಿಧ ವಿಶೇಷ ತಳಿಗಳ ಹಲಸಿನ ಗಿಡಗಳು ಮತ್ತು ಹಲಸಿನ ಕಾಯಿ ತುಂಡರಿಸುವ ಸಾಧನವನ್ನು ಮಾರಾಟಕ್ಕಿಡಲಾಗಿತ್ತು. ವಿವಿಧ ಮಳಿಗೆಗಳಲ್ಲಿ ಹಲಸಿನ ಹಣ್ಣಿನ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಹಲಸಿನ ವಿವಿಧ ಖಾದ್ಯಗಳಾದ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ. ಗುಜ್ಜೆ ಮಂಚೂರಿ, ಕಬಾಬ್, ಮುಳುಕ್ಕ, ಗಾರಿಗೆ, ಜೂಸ್, ಸೊಳೆರೊಟ್ಟಿ, ಬೀಜದ ಹೋಳಿಗೆ, ಹಣ್ಣಿನ ಹೋಳಿಗೆ, ಕೇಕ್, ಹಲ್ವ, ಹಣ್ಣಿನ ದೋಸೆ, ಐಸ್‍ಕ್ರೀಂ, ಪಾಯಸ, ಕಾಯಿಸೋಂಟೆ, ಪೋಡಿ, ಮಾಂಬಳ ಹೀಗೆ ಹತ್ತು ಹಲವು ಬಗೆಯ ತಿನಿಸುಗಳು ಹಲಸು ಪ್ರಿಯರನ್ನು ಆಕರ್ಷಿಸುತ್ತಿದ್ದವು.

ಜೂ. 26ರಂದು ಮೇಳದಲ್ಲಿ ಹಲಸಿನ ಮೌಲ್ಯವರ್ಧನೆಯ ಕುರಿತು ಮಾತುಕತೆ ನಡೆಯಲಿದೆ. ನವನೀತ ನರ್ಸರಿಯ ವೇಣುಗೋಪಾಲ ಶಿಬರ, ಬಿಸಿರೋಡು ಹಲಸಿನಂಗಡಿಯ ಮೌನೀಶ್ ಮಲ್ಯ, ಕೇಪು-ಉಬರು ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ ಹಾಗೂ ನಿಧಿ ಫುಡ್ ಪ್ರಾಡೆಕ್ಟ್‍ನ ರಾಧಾಕೃಷ್ಣ ಇಟ್ಟಿಗುಂಡಿ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ.

ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನವನೀತ ಸರ್ಸರಿಯ ಸ್ಥಾಪಕ ಶಿಬರ ಜಯರಾಮ ಕೆದಿಲಾಯ ವಹಿಸಲಿದ್ದಾರೆ. ವಿಟ್ಲ ಪಿಂಗಾರ ಸಂಸ್ಥೆಯ ರಾಮ್‍ಕಿಶೋರ್ ಮಂಚಿ ಸಮಾರೋಪ ಭಾಷಣ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News