ತ್ರಿಪುರಾ: ಕಾಂಗ್ರೆಸ್-ಬಿಜೆಪಿ ಬೆಂಬಲಿಗರ ಮಧ್ಯೆ ಘರ್ಷಣೆ

Update: 2022-06-26 17:22 GMT

ಅಗರ್ತಲಾ, ಜೂ.26: ತ್ರಿಪುರಾದ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶಗಳು ರವಿವಾರ ಪ್ರಕಟಗೊಂಡ ಬಳಿಕ ಅಗರ್ತಲಾದ ಕಾಂಗ್ರೆಸ್ ಭವನದ ಎದುರು ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆಗಳು ನಡೆದಿದ್ದು,ರಾಜ್ಯ ಕಾಂಗ್ರೆಸ್ ಅಧ್ಯಕ್ಷ ವೀರಜಿತ ಸಿನ್ಹಾ ಸೇರಿದಂತೆ ಕನಿಷ್ಠ 19 ಜನರು ಗಾಯಗೊಂಡಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.

ಘಟನೆಯ ಬಳಿಕ ಕಾಂಗ್ರೆಸ್ ಭವನವಿರುವ ಪ್ರದೇಶವು ಸಂಪೂರ್ಣವಾಗಿ ನಿರ್ಜನಗೊಂಡಿತ್ತು. ‘ಕಾಂಗ್ರೆಸ್ ಕಾರ್ಯಕರ್ತರು ಅಗರ್ತಲಾ ಕ್ಷೇತ್ರದಲ್ಲಿ ಗೆದ್ದ ಪಕ್ಷದ ಅಭ್ಯರ್ಥಿ ಸುದೀಪ ರಾಯ್ ಬರ್ಮನ್ ಅವರೊಂದಿಗೆ ಕಾಂಗ್ರೆಸ್ ಭವನಕ್ಕೆ ಮರಳಿದ್ದರು. ನಾವು ಊಟಕ್ಕೆ ಸಜ್ಜಾಗುತ್ತಿದ್ದಾಗ ಬಿಜೆಪಿ ಬೆಂಬಲಿಗರು ದಾಳಿ ನಡೆಸಿದ್ದರು. ಸಿನ್ಹಾ ಅವರ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದರೆ ಕಾರ್ಯಕರ್ತನೋರ್ವನಿಗೆ ಚೂರಿಯಿಂದ ಇರಿಲಾಗಿದೆ ಎಂದು ಕಾಂಗೆಸ್‌ನ ಮಾಧ್ಯಮ ಉಸ್ತುವಾರಿ ಆಶಿಷ್ ಕುಮಾರ ಸಹಾ ತಿಳಿಸಿದರು.

ಬಿಜೆಪಿ ಬೆಂಬಲಿಗರು ಕಟ್ಟಡದ ಮೇಲೆ ಕಲ್ಲು ತೂರಾಟ ನಡೆಸಿ ಹಲವಾರು ಬೈಕುಗಳಿಗೆ ಹಾನಿಯುಂಟು ಮಾಡಿದ್ದಾರೆ. ದಾಳಿ ನಡೆಯುತ್ತಿರುವಾಗ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂದು ಅವರು ಆರೋಪಿಸಿದರು.

ಬೆಳಿಗ್ಗೆ ಕಾಂಗ್ರೆಸ್ ಬೆಂಬಲಿಗರು ಅಗರ್ತಲಾ ಮಹಾನಗರ ಪಾಲಿಕೆಯ ಬಿಜೆಪಿ ಕಾರ್ಪೊರೇಟರ್ ಶಿಲ್ಪಿ ಸೇನ್ ಅವರತ್ತ ಇಟ್ಟಿಗೆಗಳನ್ನು ತೂರಿದ್ದರು ಮತ್ತು ಇದು ಪಕ್ಷದ ಬೆಂಬಲಿಗರನ್ನು ಕುಪಿತಗೊಳಿಸಿತ್ತು ಎಂದು ವಾರ್ತಾ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಷಾಂತ ಚೌಧರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News