ಪ್ರತಿಬಂಧಕ ಬಂಧನ ಕಾನೂನನ್ನು ಬೇಕಾಬಿಟ್ಟಿ ಬಳಸುವಂತಿಲ್ಲ: ಸುಪ್ರೀಂ

Update: 2022-06-26 17:48 GMT

ಹೊಸದಿಲ್ಲಿ, ಜೂ.26: ಪ್ರತಿಬಂಧಕ ಬಂಧನ ಕಾನೂನಿನ ಅಡಿಯಲ್ಲಿ ಅಧಿಕಾರವನ್ನು ಅಸಾಧಾರಣ ಸಂದರ್ಭಗಳಲ್ಲಿ ಬಳಸಬೇಕೇ ಹೊರತು ಮಾಮೂಲು ರೀತಿಯಲ್ಲಿ ಅಲ್ಲ. ಹಾಗೆ ಮಾಡುವುದರಿಂದ ಅದು ವ್ಯಕ್ತಿಯ ಸ್ವಾತಂತ್ರದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ಪ್ರತಿಬಂಧಕ ಬಂಧನ ಕಾನೂನಿನಡಿ ವ್ಯಕ್ತಿಯನ್ನು ಆತ ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆಗೆ ವಿರುದ್ಧವಾಗಿರುವ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಶಂಕೆಯಿಂದ ಯಾವುದೇ ವಿಚಾರಣೆಯಿಲ್ಲದೆ ಬಂಧನದಲ್ಲಿ ಇರಿಸಬಹುದು.

ಸರಗಳಗಳ್ಳತನ ಅಪರಾಧಗಳಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿತರಾಗಿರುವ ಇಬ್ಬರು ತೆಲಂಗಾಂಣ ನಿವಾಸಿಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ತೆಲಂಗಾಣ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆ ಸಂದರ್ಭ ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಆರೋಪಿಗಳು 30ಕ್ಕೂ ಅಧಿಕ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರೂ ಕೇವಲ ನಾಲ್ಕು ಪ್ರಕರಣಗಳನ್ನು ಅವರ ಬಂಧನಕ್ಕೆ ಆಧಾರವೆಂದು ಪರಿಗಣಿಸಲಾಗಿದೆ. ಈ ನಾಲ್ಕೂ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಳೆದ ವರ್ಷ ಅವರಿಗೆ ಜಾಮೀನು ನೀಡಿದೆ ಎನ್ನುವುದನ್ನು ಗಮನಿಸಿದ ಸರ್ವೋಚ್ಚ ನ್ಯಾಯಾಲಯವು ಅವರ ಬಂಧನ ಆದೇಶವನ್ನು ತಳ್ಳಿಹಾಕಿತು.

ಭವಿಷ್ಯದಲ್ಲಿ ಅವರು ಇಂತಹುದೇ ಅಪರಾಧಗಳನ್ನು ಎಸಗುವ ಸಾಧ್ಯತೆಯಿರುವುದರಿಂದ ಅವರನ್ನು ಪ್ರತಿಬಂಧಕ ಕಾನೂನಿನಡಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಆದಾಗ್ಯೂ ನಾಲ್ಕು ಪ್ರಕರಣಗಳಲ್ಲಿ ಅವರಿಗೆ ಜಾಮೀನು ನೀಡಿದ ಕಾರಣವನ್ನು ಉಲ್ಲೇಖಿಸಿಲ್ಲ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು, 60 ದಿನಗಳ ನಿಗದಿತ ಗಡುವಿನೊಳಗೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸುವಲ್ಲಿ ಪ್ರಾಸಿಕ್ಯೂಷನ್ ವೈಫಲ್ಯದಿಂದಾಗಿ ಅವರಿಗೆ ನಾಲ್ಕು ಪ್ರಕರಣಗಳಲ್ಲಿ ಜಾಮೀನು ನೀಡಲಾಗಿತ್ತು. ಹೀಗಾಗಿ ಇಲ್ಲಿ ಪ್ರಾಸಿಕ್ಯೂಷನ್ ತಪ್ಪು ಮಾಡಿದೆ.

ಪ್ರತಿಬಂಧಕ ಬಂಧನ ಆದೇಶದಲ್ಲಿ ಹೇಳಲಾಗಿರುವ ಪ್ರಕರಣದ ಅಂಶಗಳು ಮತ್ತು ಸಂದರ್ಭಗಳು 

ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಮತ್ತು ಇದನ್ನು ಪೊಲೀಸರು ನಿಭಾಯಿಸಬಹುದು. ಇಲ್ಲಿ ಪ್ರತಿಬಂಧಕ ಕಾನೂನನ್ನು ಹೇರುವ ಏನೇನೂ ಅಗತ್ಯವಿರಲಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತಿಳಿಸಿತು. ಪ್ರಾಸಿಕ್ಯೂಷನ್ ಆರೋಪಿಗಳ ಜಾಮೀನು ರದ್ದುಗೊಳಿಸಲು ಕೋರಬೇಕು ಮತ್ತು/ಅಥವಾ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಬೇಕು ಎಂದು ಅದು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News