ತುರ್ತು ಪರಿಸ್ಥಿತಿ ಸಂದರ್ಭ ಪ್ರಜಾಪ್ರಭುತ್ವವನ್ನು ತುಳಿಯಲು ಪ್ರಯತ್ನಿಸಲಾಯಿತು: ಪ್ರಧಾನಿ ಮೋದಿ

Update: 2022-06-26 17:57 GMT

ಹೊಸದಿಲ್ಲಿ, ಜೂ. 26: ಭಾರತದಲ್ಲಿ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭ ಪ್ರಜಾಪ್ರಭುತ್ವವನ್ನು ತುಳಿದು ಹಾಕುವ ಪ್ರಯತ್ನ ಮಾಡಲಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿದ್ದಾರೆ.

ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆಗಿನ ಇಂದಿರಾ ಗಾಂಧಿ ಸರಕಾರ ಹೇರಿದ್ದ ತುರ್ತು ಪರಿಸ್ಥಿತಿಯನ್ನು ನೆನಪಿಸಿದರು. ಅಲ್ಲದೆ, ಈ ಸಂದರ್ಭ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು ಎಂದು ತಿಳಿಸಿದರು.

‘‘ತುರ್ತುಪರಿಸ್ಥಿತಿ ಸಂದರ್ಭ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ಇದರಲ್ಲಿ ಸಂವಿಧಾನದ ವಿಧಿ 21ರ ಅಡಿಯಲ್ಲಿ ಖಾತರಿ ನೀಡಲಾದ ಬದುಕುವ ಹಾಗೂ ವೈಯುಕ್ತಿಕ ಸ್ವಾತಂತ್ರ್ಯದ ಹಕ್ಕುಗಳು ಕೂಡ ಇದ್ದುವು.  ಈ ಸಂದರ್ಭ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ಪ್ರಯತ್ನಿಸಲಾಗಿತ್ತು. ದೇಶದ ನ್ಯಾಯಾಲಯ, ಪ್ರತಿ ಸಾಂವಿಧಾನಿಕ ಸಂಸ್ಥೆ, ಪತ್ರಿಕೋದ್ಯಮ ಹಾಗೂ ಪ್ರತಿಯೊಂದನ್ನು ಕೂಡ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಯಿತು’’ ಎಂದು ಮೋದಿ ಹೇಳಿದ್ದಾರೆ.

ಕಠಿಣ ನಿರ್ಬಂಧ ವಿಧಿಸಲಾಗಿತ್ತು. ಅನುಮತಿ ಇಲ್ಲದೆ, ಯಾವುದನ್ನೂ ಪ್ರಕಟಿಸುವಂತೆ ಇರಲಿಲ್ಲ. ‘‘ಜನಪ್ರಿಯ ಗಾಯಕ ಕಿಶೋರ್ ಕುಮಾರ್ ಜಿ  ಅವರು ಸರಕಾರವನ್ನು ಪ್ರಶಂಸಿಸಲು ನಿರಾಕರಿಸಿದ್ದರು. ಅದಕ್ಕಾಗಿ ಅವರಿಗೆ ನಿಷೇಧ ವಿಧಿಸಲಾಗಿತ್ತು. ರೇಡಿಯೊದಲ್ಲಿ ಅವಕಾಶ ನೀಡಲಿಲ್ಲ ಎಂಬುದು ನನಗೆ ನೆನಪಿದೆ’’ ಎಂದು ಪ್ರಧಾನಿ ಅವರು ಹೇಳಿದರು.

ಹಲವು ಪ್ರಯತ್ನಗಳು, ಸಾವಿರಾರು ಬಂಧನಗಳು ಹಾಗೂ ಲಕ್ಷಾಂತರ ಜನರ ಮೇಲೆ ದೌರ್ಜನ್ಯದ ಹೊರತಾಗಿಯೂ ಪ್ರಜಾಪ್ರಭುತ್ವದ ಕುರಿತ ಭಾರತೀಯರ ನಂಬಿಕೆ ಅಲುಗಾಡಲಿಲ್ಲ ಎಂದು ಅವರು ಪ್ರತಿಪಾದಿಸಿದರು.

ಶತಮಾನಗಳಿಂದ ನಮ್ಮಲ್ಲಿ ಬೇರೂರಿರುವ ಪ್ರಜಾಪ್ರಭುತ್ವ ಮೌಲ್ಯಗಳು, ನಮ್ಮ ರಕ್ತನಾಳಗಳಲ್ಲಿ ಹರಿಯುವ ಪ್ರಜಾಪ್ರಭುತ್ವದ ಚೈತನ್ಯ ಅಂತಿಮವಾಗಿ ವಿಜಯಶಾಲಿಯಾಗಿದೆ. ಪ್ರಜಾಪ್ರಭುತ್ವದ ಮೂಲಕ ಜನರು ತುರ್ತು ಪರಿಸ್ಥಿತಿಯನ್ನು ತೊಡೆದು ಹಾಕಿದರು ಹಾಗೂ ಪ್ರಜಾಪ್ರಭುತ್ವನ್ನು ಮರು ಸ್ಥಾಪಿಸಿದರು ಎಂದು ಅವರು ಹೇಳಿದರು.

ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಸರ್ವಾಧಿಕಾರಿ ಮನಸ್ಥಿತಿಯನ್ನು ಸೋಲಿಸುವ ಇಂತಹ ಉದಾಹರಣೆ ಜಗತ್ತಿನಲ್ಲಿ ಕಂಡು ಬರುವುದು ಕಷ್ಟ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News