ರಾಮದಾಸ ಇಲ್ಲದ ಮೆಸೂರಿನಲ್ಲಿ ಒಂದು ದಿನ

Update: 2022-06-26 19:30 GMT

ಅದು ಎಪ್ಪತ್ತರ ದಶಕ. ಸ್ವಾತಂತ್ರ ಬಂದು ಕಾಲು ಶತಮಾನವಾಗಿತ್ತು. ಆದರೆ ಈ ಸ್ವಾತಂತ್ರ ನಿಜವಾದ ಸ್ವಾತಂತ್ರವಲ್ಲ. ಸಮಾನತೆಯ ಸಮಾಜ ಕಟ್ಟಬೇಕೆಂಬ ಹೋರಾಟದ ಜ್ವಾಲೆಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದವು.

ಆಗ ನಾನು ನನ್ನ ಜಿಲ್ಲೆ ಬಿಜಾಪುರದಲ್ಲಿದ್ದೆ. ವಯಸ್ಸು ಇಪ್ಪತ್ತು ದಾಟಿರಲಿಲ್ಲ. ಬಾಲ್ಯದಿಂದಲೂ ನಮ್ಮ ಮನೆತನದೊಂದಿಗೆ ಇದ್ದ ಇಂಚಗೇರಿ ಮಠದ ಮುರಗೋಡ ಮಹಾದೇವರ ಸಂಪರ್ಕ ನನ್ನನ್ನು ಕಮ್ಯುನಿಸ್ಟ್ ಚಳವಳಿಯ ಬಾಗಿಲಿಗೆ ತಂದು ನಿಲ್ಲಿಸಿತ್ತು. ಅದು ಚಳವಳಿಗಳ ಕಾಲ.ಮೈಸೂರಿನಲ್ಲಿ ತೇಜಸ್ವಿ, ನಂಜುಂಡಸ್ವಾಮಿ, ಕೆ.ರಾಮದಾಸ, ಬೆಂಗಳೂರಿನಲ್ಲಿ ಪಿ.ಲಂಕೇಶ್, ಕಲ್ಲೆ ಶಿವೊತ್ತಮರಾವ, ಕಾಳೇಗೌಡ ನಾಗವಾರ,ಧಾರವಾಡದಲ್ಲಿ ಚಂಪಾ (ಚಂದ್ರಶೇಖರ ಪಾಟೀಲ), ಕೆ.ಎಸ್. ಶರ್ಮಾ, ಸಿದ್ದಲಿಂಗ ಪಟ್ಟಣಶೆಟ್ಟಿ ಹೆಸರು ಗಳನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೆ. ಈ ಎಲ್ಲ ಹೆಸರುಗಳಲ್ಲಿ ಮುಂದೆ ನನ್ನ ಗಮನ ಸೆಳೆದಿದ್ದು ಕೆ.ರಾಮದಾಸ ಅವರ ಹೆಸರು.ಅನ್ಯಾಯದ ವಿರುದ್ಧ ನಿರಂತರ ಸಂಘರ್ಷಕ್ಕೆ ಇನ್ನೊಂದು ಹೆಸರು ರಾಮದಾಸ.

ಅನ್ಯಾಯ,ಅಸಮಾನತೆ ವಿರುದ್ಧ ಸಿಡಿದೇಳುವ ಜಗತ್ತಿನ ಎಲ್ಲರೂ ನನ್ನ ಒಡನಾಡಿಗಳು ಎಂದು ಹೇಳುತ್ತಲೇ ಬಲಿ ವೇದಿಕೆ ಏರಿದ ಚೆಗವೇರಾ ಅವರಂತೆ ಕೆ.ರಾಮದಾಸ ಕೂಡ ದಣಿವಿಲ್ಲದ, ರಾಜಿ ಮಾಡಿಕೊಳ್ಳದ ಹೋರಾಟಗಾರ. ರಾಮದಾಸ ಹೆಚ್ಚೇನೂ ಬರೆಯಲಿಲ್ಲ. ಎಲ್ಲರ ಬರಹಗಳ ಸ್ಫೂರ್ತಿಯ ಸೆಲೆಯಾದರು. ಮುಂದೆ ನಿಂತು ನೂರಾರು ಜಾತಿ ರಹಿತ ಮದುವೆಗಳನ್ನು ಮಾಡಿಸಿದರು.ಮೂಢ ನಂಬಿಕೆ, ಕಂದಾಚಾರಗಳು ಎಲ್ಲೇ ಕಂಡುಬಂದರೂ ಉರಿದೇಳುತ್ತಿದ್ದರು. ಅವರ ಜೊತೆಗೆ ನಂಜುಂಡಸ್ವಾಮಿ, ತೇಜಸ್ವಿ, ಲಂಕೇಶ್, ಅನಂತ ಮೂರ್ತಿ ಅವರಂಥ ದೊಡ್ಡ ಬಳಗವಿತ್ತು.ರಾಮದಾಸರದು ಚೆ ಗವೇರಾ ಮತ್ತು ಚಾರ್ವಾಕರನ್ನು ಎರಕ ಹೊಯ್ದ ವ್ಯಕ್ತಿತ್ವ ಎಂದು ಮೈಸೂರಿನ ಗೆಳೆಯ ಹೊಸಳ್ಳಿ ಶಿವು ಸರಿಯಾಗಿ ವ್ಯಾಖ್ಯಾನಿಸಿದ್ದಾರೆ.

ಇಂಥ ರಾಮದಾಸ ನಮ್ಮನ್ನಗಲಿ ಹದಿನೈದು ವರ್ಷಗಳಾದವು.ಆದರೆ ಮೈಸೂರು ಮಾತ್ರವಲ್ಲ ಕರ್ನಾಟಕ ಅವರನ್ನು ಮರೆತಿಲ್ಲ.ಅವರ ಶಿಷ್ಯರು ವಿಶೇಷವಾಗಿ ಕೃಷ್ಣ ಜನಮನ ಮತ್ತು ಅವರ ದೇಸಿರಂಗ ತಂಡದ ಗೆಳೆಯರು ಕಳೆದ ಜೂನ್ 19 ರಂದು ಮೈಸೂರಿನಲ್ಲಿ ಅವರ ನೆನಪಿನ ಕಾರ್ಯಕ್ರಮ ಏರ್ಪಡಿಸಿದ್ದರು.ಅದರಲ್ಲಿ ಪಾಲ್ಗೊಳ್ಳುವ ಅಪೂರ್ವ ಅವಕಾಶವನ್ನು ಅಲ್ಲಿನ ಗೆಳೆಯರು ಕಲ್ಪಿಸಿದ್ದರು.ಅದೊಂದು ಅಪೂರ್ವ ಸಮಾವೇಶ. ಹಿರಿಯ ನ್ಯಾಯವಾದಿ ರವಿವರ್ಮ ಕುಮಾರ್, ದಲಿತ ಸಂಘರ್ಷ ಸಮಿತಿಯ ಇಂದಿರಾ ಕೃಷ್ಣಪ್ಪ, ಡಾ.ವಸುಂಧರಾ ಭೂಪತಿ, ಕಾಳೇಗೌಡ ನಾಗವಾರ ಹೀಗೆ ಅನೇಕ ಗೆಳೆಯರು ಸೇರಿದ್ದೆವು. ಹಿಂದೆ ಮತ್ತು ಇತ್ತೀಚೆಗೆ ಮದುವೆಯಾದ ಅಂತರ್ಜಾತಿ ಮತ್ತು ಅಂತರ್ಧರ್ಮೀಯ ಜೋಡಿ ಗಳು ಬಂದಿದ್ದವು. ಎಲ್ಲರೂ ತಮ್ಮ ನೆನಪುಗಳನ್ನು ಹಂಚಿಕೊಂಡರು.

ಜಾತ್ಯತೀತ ಎಂದು ಹೇಳಿಕೊಳ್ಳುವವರು ಮೊದಲು ತಮ್ಮ ಜಾತಿಗಳ ವಿರುದ್ಧ ಹೋರಾಟ ಮಾಡಬೇಕೆಂದು ಪ್ರತಿಪಾದಿಸುತ್ತಿದ್ದ ರಾಮದಾಸ ಯಾರೇ ಬರಲಿ ಬರದಿರಲಿ ಒಂಟಿ ಸಲಗದಂತೆ ಏಕಾಂಗಿಯಾಗಿ ನಿಂತು ಸೆಣಸುತ್ತಿದ್ದರು. ಮೈಸೂರಿನ ಪ್ರತಿಷ್ಠಿತ ಮಹಾರಾಜಾ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ರಾಮದಾಸ ಪಾಠ ಮಾಡುವ ಜೊತೆ ಜೊತೆಗೆ ಜಾತಿ ಮತ್ತು ವರ್ಗ ಇಲ್ಲದ ಸಮಾಜದ ಬಗ್ಗೆ, ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಪ್ರೀತಿಸುವ ಬಗ್ಗೆ ಪ್ರತಿಪಾದಿಸುತ್ತಿದ್ದರು. ಅಂತಲೇ ಅವರ ಕಾಲದಲ್ಲಿ ಮೈಸೂರಿನಲ್ಲಿ ವ್ಯಾಸಂಗ ಮಾಡಿದ ಬಹುತೇಕ ಯುವಕರು ಮುಂದೆ ವಿಚಾರವಾದಿಗಳಾಗಿ, ಹೋರಾಟಗಾರರಾಗಿ, ಉತ್ತಮ ಪ್ರಾಧ್ಯಾಪಕರಾಗಿ, ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮೈಸೂರಿಗೆ ಹೋದಾಗ ರಾಮದಾಸ ಮುಂದೆ ನಿಂತು ಮದುವೆ ಮಾಡಿಸಿದ ಜೋಡಿಗಳು ಆಡಿದ ಮಾತುಗಳನ್ನು ಕೇಳಿ ಅವರ ಮೇರು ವ್ಯಕ್ತಿತ್ವದ ಬಗ್ಗೆ ಇನ್ನಷ್ಟು ಗೌರವ ಮೂಡಿತು. ದೂರದ ಬಿಜಾಪುರ ಮತ್ತು ಹುಬ್ಬಳ್ಳಿಯಲ್ಲಿ ಇದ್ದ ನನಗೆ ರಾಮದಾಸರ ಒಡನಾಟ ತುಂಬ ಕಡಿಮೆ ಇತ್ತು. ಬರಹಗಾರರ ಕಲಾವಿದರ ಒಕ್ಕೂಟವನ್ನು ಮೈಸೂರಿನ ಸಮಾಜವಾದಿ ಗೆಳೆಯರು ಮಾಡಿದಾಗ ನಾನು ಭಾಗವಹಿಸಬಹುದೇ ಎಂದು ಪೂರ್ಣಚಂದ್ರ ತೇಜಸ್ವಿಯವರಿಗೆ ಪತ್ರ ಬರೆದೆ. ಅವರು ಎರಡೇ ದಿನಗಳಲ್ಲಿ ಕೆ.ರಾಮದಾಸ ಅವರನ್ನು ಸಂಪರ್ಕಿಸುವಂತೆ ಪತ್ರ ಬರೆದರು. ರಾಮದಾಸರಿಗೆ ಪತ್ರ ಬರೆದೆ. ಅವರು ತಕ್ಷಣ ಉತ್ತರ ಬರೆದರು. ಯಾರೇ ಪತ್ರ ಬರೆಯಲಿ ತಕ್ಷಣ ಪ್ರತ್ಯುತ್ತರ ಬರೆಯುವ ಸೌಜನ್ಯ ಅಂದಿನ ಹೆಸರಾಂತ ಸಾಹಿತಿಗಳಿಗಿತ್ತು. ನಿರಂಜನ, ಬಸವರಾಜ ಕಟ್ಟೀಮನಿ, ಪಾಟೀಲ ಪುಟ್ಟಪ್ಪ, ಹಾ.ಮಾ.ನಾಯಕ, ಲಂಕೇಶ್, ಖಾದ್ರಿ ಶಾಮಣ್ಣ ಹೀಗೆ ಅನೇಕ ಹಿರಿಯರೊಂದಿಗೆ ನನಗೆ ಪತ್ರ ವ್ಯವಹಾರವಿತ್ತು. ನಾನಿನ್ನೂ ಚಿಕ್ಕ ಹುಡುಗನಾಗಿದ್ದರೂ ಗೌರವಿಸಿ ಅವರು ಉತ್ತರ ಬರೆಯುತ್ತಿದ್ದರು. ಆದರೆ ಈಗಿನ ಕೆಲವು ಹೆಸರು ಮಾಡಿದ ಸಾಹಿತಿಗಳು ಹಾಗಿಲ್ಲ.

ಮೈಸೂರು ಕರ್ನಾಟಕ ಉಳಿದ ಜಿಲ್ಲೆಗಳಿಗಿಂತ ಭಿನ್ನ. ರಾಷ್ಟ್ರ ಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶ ಇಲ್ಲಿ ಬರೀ ಸಂದೇಶವಾಗಿ ಉಳಿದಿಲ್ಲ.‘ಬದಲಾವಣೆ ಎನ್ನುವುದು ನನ್ನ ಮನೆಯಿಂದಲೇ ಆರಂಭವಾಗಲಿ’ ಎಂದು ಕುವೆಂಪು ಅವರು ಆಡಂಬರದ, ರಾಹುಕಾಲ, ಗುಳಿಕ ಕಾಲದ ಗೊಡವೆ ಇಲ್ಲದ ಸರಳ ಅಂತರ್ಜಾತಿ ಮದುವೆಯನ್ನು ತಮ್ಮ ಮನೆಯಲ್ಲೇ ಮಾಡಿದರು. ಹಿರಿಯ ಮಗ ಪೂರ್ಣಚಂದ್ರ ತೇಜಸ್ವಿ, ರಾಜೇಶ್ವರಿ ಅವರ ವಿವಾಹವನ್ನು 27-11-1966ರಂದು ಕೇವಲ 36 ಆತ್ಮೀಯರ ಸಮ್ಮುಖದಲ್ಲಿ ಮಾಡಿದರು.

ತೇಜಸ್ವಿ ಮದುವೆಯಲ್ಲಿ ಸಸ್ಯಾಹಾರ ಮತ್ತು ಬಾಡೂಟ ಎರಡೂ ಇದ್ದವು. ಮಂತ್ರ ಮಾಂಗಲ್ಯದ ಹೊಸ ಪರಿಕಲ್ಪನೆಯಲ್ಲಿ ಮಾಡಿದರು.ಕುವೆಂಪು ನೀಡಿದ ಮಂತ್ರ ಮಾಂಗಲ್ಯ ಸೂತ್ರದಂತೆ ಮೈಸೂರು ಭಾಗದಲ್ಲಿ ನೂರಾರು ಜನ ಮದುವೆಯಾಗಿ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಕೆ.ರಾಮದಾಸ ಕೂಡ 1975 ಆಗಸ್ಟ್ 15 ರಂದು ನಿರ್ಮಲಾ ಅವರ ಕೈ ಹಿಡಿದರು. ಇದೇ ರೀತಿ ಉಗ್ರ ನರಸಿಂಹೇ ಗೌಡ, ಹೊಸಹಳ್ಳಿ ಶಿವು, ಅಪ್ಪಾಜಿ ಗೌಡ, ಗೋವಿಂದಯ್ಯ ಹೀಗೆ ಅನೇಕರು ಜನರು ಜಾತಿ ರಹಿತ ವಿವಾಹವಾಗಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನವರು ಕೂಡ ಮೈಸೂರಿನ ಸಮಾಜವಾದಿ ಬಳಗದಿಂದ ಬಂದವರು. ಪ್ರೊ,ನಂಜುಂಡಸ್ವಾಮಿ ಅವರ ಗರಡಿಯಲ್ಲಿ ಬೆಳೆದ ಸಿದ್ದರಾಮಯ್ಯನವರಿಗೆ ಕೆ.ರಾಮದಾಸ ಅತ್ಯಂತ ಆತ್ಮೀಯ ಮಿತ್ರ ಮತ್ತು ಸಲಹೆಗಾರರಾಗಿದ್ದರು. ಮೈಸೂರು ಅಂದಾಗ ದೇವನೂರ ಮಹಾದೇವ ನೆನಪಿಗೆ ಬರುತ್ತಾರೆ. ದೇವನೂರು ಕೂಡ ಅಲ್ಲಿನ ಎಲ್ಲ ಜೀವಪರ, ಜನಪರ, ಜಾತಿ ವಿರೋಧಿ ಚಳವಳಿಗಳ ಮುಂಚೂಣಿಯಲ್ಲಿರುವರು. ಅದೇ ರೀತಿ ಡಾ.ಲಕ್ಷ್ಮೀನಾರಾಯಣ, ಕಡಿದಾಳ ಶಾಮಣ್ಣ, ಪೋಲಂಕಿ ರಾಮಮೂರ್ತಿ, ರಾಮಚಂದ್ರೇ ಗೌಡ, ಭಗವಾನ್, ಹೀಗೆ ಬೌದ್ಧಿಕ ಸಂಘರ್ಷದ ಬಹುದೊಡ್ಡ ಸೇನೆಯೇ ಮೈಸೂರಿನಲ್ಲಿ ಹೆಸರು ಮಾಡಿತ್ತು. ಈಗಲೂ ಆ ಮಣ್ಣಿನಲ್ಲಿ ಹೋರಾಟದ ಸೆಲೆಗಳು ಪ್ರತಿರೋಧದ ಧ್ವನಿಯನ್ನು ಜೀವಂತವಾಗಿಟ್ಟಿವೆ.

ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ಒಂದು ಜಾತಿ ರಹಿತ ಮದುವೆ ಮಾಡಲು ಹೋಗಿ ದೊಡ್ಡ ರಕ್ತಪಾತವೇ ಆಯಿತು. ಆ ಮದುವೆಯನ್ನು ಬಸವಣ್ಣನವರು ನೇರವಾಗಿ ಮುಂದೆ ನಿಂತು ಮಾಡಿದರಾ ಅಥವಾ ಅವರ ಆವೇಶದ ಅನುಯಾಯಿಗಳು ಮಾಡಿದರಾ ಖಚಿತವಿಲ್ಲ. ಅದೇನೇ ಇರಲಿ ಬಸವಣ್ಣನವರ ನಂತರ ಜಾತಿ ರಹಿತ ಮದುವೆಯನ್ನು ಲಿಂಗಾಯತ ಸಮುದಾಯ ದೊಡ್ಡದಾಗಿ ಕೈಗೆತ್ತಿಗೊಳ್ಳಲಿಲ್ಲ. ಜಾತಿ ಐಡೆಂಟಿಟಿಗೆ ಮಾತ್ರ ಬಸವಣ್ಣನವರನ್ನು ಬಳಸಿಕೊಂಡರು. ಆದರೆ ಉತ್ತರ ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಾತಿ ರಹಿತ, ಮತ ರಹಿತ ಮದುವೆಗಳನ್ನು ಮಾಡಿಸಿದವರು ಬಿಜಾಪುರ ಜಿಲ್ಲೆಯ ಇಂಚಗೇರಿ ಮಠದ ಮುರಗೋಡ ಮಹಾದೇವರು. ಆದರೆ ಅವರಾಗಲಿ ಅವರ ಮಠವಾಗಲಿ ಯಾವುದೇ ಜಾತಿ ಮತದ ಜೊತೆ ಗುರುತಿಸಿಕೊಂಡಿರಲಿಲ್ಲ. ಯಾವುದೇ ಧಾರ್ಮಿಕ ಸಂಕೇತಗಳನ್ನು ಧರಿಸುತ್ತಿರಲಿಲ್ಲ. ಮಹಾರಾಷ್ಟ್ರದ ಸಂತರ ಪ್ರಭಾವ ಬಿಟ್ಟರೆ ಯಾವುದೇ ಮೂಢ ನಂಬಿಕೆ, ಕಂದಾಚಾರಗಳು ಈ ಮಠದ ಭಕ್ತರಿಗಿಲ್ಲ. ಮಹಾದೇವಪ್ಪನವರು ಎಡಪಂಥೀಯರಿಗೆ ಹತ್ತಿರವಾಗಿದ್ದರು. ಅವರ ಜೀವಿತಾವಧಿಯಲ್ಲಿ ಸುಮಾರು ಇಪ್ಪತ್ತು ಸಾವಿರ ಅಂತರ್ಜಾತಿ ಮತ್ತು ಅಂತರ್ಧರ್ಮೀಯ ಮದುವೆಗಳನ್ನು ಮಾಡಿಸಿದ್ದಾರೆ. ಈಗಲೂ ಇಂಚಗೇರಿ ಸಂಪ್ರದಾಯದಲ್ಲಿ ಇಂಥ ಮದುವೆಗಳು ನಡೆಯುತ್ತವೆ.ಆದರೆ ಮೈಸೂರು ಭಾಗದಲ್ಲಿ ಕುವೆಂಪು ಪ್ರಭಾವದಿಂದ ನೂರಾರು ಸಂಖ್ಯೆಯಲ್ಲಿ ಜಾತಿ ರಹಿತ ಮಂತ್ರ ಮಾಂಗಲ್ಯದ ಮದುವೆಗಳು ನಡೆದಂತೆ ಉತ್ತರ ಕರ್ನಾಟಕದ ಲಿಂಗಾಯತ ಮಠಗಳಲ್ಲಿ ನಡೆಯಲಿಲ್ಲ. ಅಂತಲೇ ಮೈಸೂರು ಇಂದಿಗೂ ವೈಚಾರಿಕ ಮನಸ್ಸುಗಳ ತಾಣವಾಗಿದೆ.

ಎರಡನೆಯದಾಗಿ ಎಪ್ಪತ್ತರ ದಶಕದ ಸಮಾಜ ವಾದಿಗಳು ಅಂತರ್ಜಾತಿ, ಅಂತರ್ಧರ್ಮೀಯ ಮದುವೆಗಳನ್ನು ಒಂದು ಆಂದೋಲನದಂತೆ ನಡೆಸಿದರು. ಆಗ ನೂರಾರು ಮಂದಿ ಜಾತಿ ಬೇಲಿ ದಾಟಿ ಮದುವೆಯಾದರು. ಹೈಕೋರ್ಟಿನ ಹಿರಿಯ ನ್ಯಾಯಾಲಯ ರವಿವರ್ಮ ಕುಮಾರ್ ಆಗ ಸಮಾಜವಾದಿ ಯುವಜನ ಸಭಾದ ನಾಯಕ. ಅವರು ಸ್ವತಃ ಜಾತಿ ರಹಿತ ಮದುವೆಯಾದರು. ಅವರ ಮಗಳು ಬೆಳ್ಳಿ ಶಿವಮೊಗ್ಗದ ಸೋಷಿಯಲಿಸ್ಟ್ ನಿಸಾರ್ ಅಹ್ಮದ್ ಅವರ ಮಗನನ್ನು ಮದುವೆಯಾದರು. ಸ್ವತಃ ರವಿವರ್ಮಕುಮಾರ್ ಮುಂದೆ ನಿಂತು ಮದುವೆ ಮಾಡಿಸಿದರು. ಅದೇ ಕಾಲ ಘಟ್ಟದಲ್ಲಿ ದಸಂಸ ಸಂಸ್ಥಾಪಕ ಕೃಷ್ಣಪ್ಪ, ಕವಿ ಗೋಪಾಲಕೃಷ್ಣ ಅಡಿಗರ ಸಂಬಂಧಿಕರಾದ ಇಂದಿರಾ ಅವರ ಕೈ ಹಿಡಿದರು. ರುದ್ರಪ್ಪಹನಗವಾಡಿ, ಶಿವರಾಮು ಕಾಡನಕುಪ್ಪೆ ಹೀಗೆ ಅನೇಕರು ಜಾತಿ ರಹಿತ ವಿವಾಹವಾದರು.ಕಮ್ಯುನಿಸ್ಟ್ ಚಳವಳಿಯಲ್ಲಿ ಇಂಥ ಮದುವೆಗಳು ನಡೆದರೂ ಜಾತಿ ರಹಿತ ಮದುವೆಗಳನ್ನು ಕಮ್ಯುನಿಸ್ಟರು ಒಂದು ಆಂದೋಲನವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಅದೇ ಚಳವಳಿಯಿಂದ ಬಂದ ನನ್ನಂಥ ಅನೇಕರು ಮುಂದೆ ಜಾತಿ ರಹಿತ ಮದುವೆಗಳನ್ನು ಮಾಡಿಕೊಂಡೆವು. ಡಾ.ವಸುಂಧರಾ ಮುತಾಲಿಕ ಅವರು ಉಪ್ಪಾರ ಸಮಾಜದ ಭೂಪತಿ ಅವರನ್ನು, ಜ್ಯೋತಿ ಅನಂತಸುಬ್ಬರಾವ ಸಾತಿ ಸುಂದರೇಶರನ್ನು ವಿವಾಹವಾದರು.

ಆದರೆ ಜಾಗತೀಕರಣ, ಕೋಮುವಾದೀಕರಣದ ಈ ಕಾಲಘಟ್ಟದಲ್ಲಿ ಜಾತಿ ರಹಿತ ಮದುವೆಗಳು ಹೊಸ ಸವಾಲನ್ನು ಎದುರಿಸುತ್ತಿವೆ. ಈಗಲೂ ಜಾತಿ ರಹಿತ ಮದುವೆಗಳು ನಡೆಯುತ್ತವೆ. ಆದರೆ ಜಾತಿ ವಿನಾಶದ ಬದ್ಧತೆ ಇರುವುದಿಲ್ಲ. ಇವರ ಮಕ್ಕಳು ಶಾಲಾ ದಾಖಲಾತಿಯಲ್ಲಿ ತಂದೆಯ ಜಾತಿಯ ಹೆಸರು ಬರೆಸುತ್ತಾರೆ.ಜನಗಣತಿ ಹಾಗೂ ಶಾಲಾ ದಾಖಲಾತಿಗಳಲ್ಲಿ ಜಾತಿ ಮತಗಳಲ್ಲಿ ನಂಬಿಕೆ ಇಲ್ಲದವರಿಗಾಗಿ ಒಂದು ಕಾಲಂ ಇರಬೇಕಾಗಿತ್ತು.ಈಗಲಾದರೂ ಆ ಬಗ್ಗೆ ಚಿಂತನೆ ನಡೆಯಬೇಕಾಗಿದೆ. ಜಾತಿ ರಹಿತ ಮದುವೆಯಾದವರ ಮಕ್ಕಳಿಗೆ ಶೇ.5ರಷ್ಟು ಮೀಸಲಾತಿ ನೀಡಬೇಕೆಂದು ಪೂರ್ಣಚಂದ್ರ ತೇಜಸ್ವಿಯವರು ಒತ್ತಾಯಿಸಿದ್ದರು. ಕವಿ ಸಿದ್ದಲಿಂಗಯ್ಯ ನವರು ವಿಧಾನ ಪರಿಷತ್ತಿನಲ್ಲಿ ಆಗ್ರಹಿಸಿದ್ದರು.ಅಷ್ಟೇ ಅಲ್ಲ ರವಿವರ್ಮ ಕುಮಾರ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಶಿಫಾರಸು ಮಾಡಿತ್ತು. ಆದರೆ ಅದು ಜಾರಿಗೆ ಬಂದಿಲ್ಲ.

ಜಾತಿ ರಹಿತ ಮದುವೆಗಳಂತೆ ವಿಭಿನ್ನ ಧರ್ಮಗಳ ಯುವ ಮನಸ್ಸುಗಳು ಪ್ರೀತಿಸಿ ಮದುವೆಯಾಗುವ ವಾತಾವರಣ ಈಗ ಇಲ್ಲ. ಲವ್ ಜಿಹಾದ್ ಕತೆ ಕಟ್ಟಿ ಇಂಥ ಜೋಡಿಗಳ ಮೇಲೆ ಹಲ್ಲೆ ಮಾಡಿ ಅಗಲಿಸುವ ದಿನಗಳಲ್ಲಿ ನಾವಿದ್ದೇವೆ. ಇಡೀ ಸಮಾಜದಲ್ಲಿ ಜಾತೀಯತೆ, ಮತಾಂಧತೆಯ ದುರ್ವಾಸನೆ ಹರಡಿರುವಾಗ ಆರೋಗ್ಯಕರ ಸಮಾಜದ ನಿರ್ಮಾಣದ ದಾರಿಯಲ್ಲಿ ಬಹುದೂರ ಸಾಗಬೇಕಾಗಿದೆ. ಹೊಸ ಸವಾಲುಗಳಿಗೆ ಉತ್ತರ ನೀಡಬೇಕಾಗಿದೆ.

ಕೆ.ರಾಮದಾಸ ಬಗ್ಗೆ ಬರೆಯಲು ಹೋಗಿ ಹಲವಾರು ವಿಷಯಗಳ ಬಗ್ಗೆ ಉಲ್ಲೇಖ ಮಾಡಬೇಕಾಯಿತು. ಕೆ.ರಾಮದಾಸರಂಥ ಹೋರಾಟದ ಧ್ವನಿಗಳು ವಿರಳವಾಗುತ್ತಿರುವ ಈ ದಿನಗಳಲ್ಲಿ ಜಾತಿ ಇಲ್ಲದ, ಭೀತಿ ಇಲ್ಲದ ನಾಡು ಕಟ್ಟುವ, ದೇಶ ಕಟ್ಟುವ ಬಹುದೊಡ್ಡ ಹೊಣೆಗಾರಿಕೆಯನ್ನು ಹೊಸ ಪೀಳಿಗೆ ನಿಭಾಯಿಸಬೇಕಾಗಿದೆ. ಕಳೆದ ಶತಮಾನದ ಸಿದ್ಧಾಂತಗಳು ನವೀಕರಣಗೊಳ್ಳಬೇಕಾಗಿದೆ. ಹೊಸ ದಾರಿ ಕಂಡು ಕೊಳ್ಳಬೇಕಾಗಿದೆ, ನಿಜ. ಅತ್ಯಂತ ಕೆಟ್ಟ ದಿನಗಳಲ್ಲಿ ನಾವಿದ್ದೇವೆ. ಭರವಸೆಯ ಸೆಲೆಗಳು ಬತ್ತಿ ಹೋಗುತ್ತಿವೆ. ಆದರೂ ನಿರಾಸೆಯಿಂದ ಕೈ ಚೆಲ್ಲಿ ಕುಳಿತುಕೊಳ್ಳಬಾರದು. ಈ ದೃಷ್ಟಿಯಿಂದ ನನಗೆ ಟಿ.ಎನ್.ಸೀತಾರಾಮ ಅವರ ಧಾರಾವಾಹಿಗಳು ತುಂಬಾ ಇಷ್ಟ. ನೊಂದವರ ಪರವಾಗಿರುವ ಅವರ ಧಾರಾವಾಹಿಗಳಲ್ಲಿ ಎಲ್ಲೂ ನಿರಾಸೆ ಮೂಡುವುದಿಲ್ಲ. ‘ಕತ್ತಲೆಯ ವಿರುದ್ಧ ಬೆಳಕಿನ ಯುದ್ಧ ಉರಿವ ಕಡಲ ನಡುವೆ ಮುಳುಗದಿರುವ ಹಡಗಿದೆ’ ಎಂಬಂಥ ಹಾಡಿನ ಸಾಲುಗಳು ತುಂಬಾ ಇಷ್ಟವಾಗುತ್ತವೆ. ಹೊಸ ಪೀಳಿಗೆ ಹೊಸ ದಾರಿಯನ್ನು ಕಂಡುಕೊಳ್ಳುತ್ತದೆ ಎಂಬ ಭರವಸೆ ಇದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News