ಧರ್ಮದ ಹೆಸರಲ್ಲಿ ನಡೆಯುವ ಹಿಂಸಾಚಾರದಿಂದ ದೇಶಕ್ಕೆ ಗಂಡಾಂತರ: ಪ್ರೊ.ಕೆ.ಫಣಿರಾಜ್

Update: 2022-06-27 06:42 GMT

ಮಂಗಳೂರು, ಜೂ.27: ನಮ್ಮ ಮನೆಯ ಮಕ್ಕಳನ್ನು ಯಾರೋ ಹೊರಗಿನವರು ಬಂದು ಕೊಂದಿರುವುದು ಅಲ್ಲ. ನಮ್ಮ ಊರಿನವರೇ ಕೊಂದಿದ್ದಾರೆ. ನಮ್ಮ ಮನೆಯ ಮಕ್ಕಳನ್ನು ಕೂಲಿ ನಾಲಿ ಕೆಲಸ ಮಾಡಿಕೊಂಡು ಬದುಕುವಂತಹ ಹಿಂದುಳಿದ ವರ್ಗದ  ಬಡವರ ಮಕ್ಕಳೇ ಕೊಲ್ಲುತ್ತಾರೆ ಎಂದಾದರೆ ಆ ದೇಶಕ್ಕೆ ಗಂಡಾಂತರ ಕಾದಿದೆ ಎಂದು ಅರ್ಥ ಎಂದು ಚಿಂತಕ, ಬರಹಗಾರ ಪ್ರೊ.ಕೆ.ಫಣಿರಾಜ್ ಹೇಳಿದ್ದಾರೆ.

ಬಜಾಲ್ ಪಕ್ಕಲಡ್ಕ ಮೈದಾನದಲ್ಲಿ ರವಿವಾರ ನಡೆದ ಡಿವೈಎಫ್ಐ ಮುಖಂಡ ಶ್ರೀನಿವಾಸ್ ಬಜಾಲ್ ಅವರ 20ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಕೋಮುವಾದಿ ವಿರೋಧಿ ಅಭಿಯಾನ ಸಾಮರಸ್ಯ ಸಭೆಯಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡುತ್ತಿದ್ದರು.

"ಶ್ರೀನಿವಾಸ್ ಬಜಾಲ್‌ ಬಡ ಕುಟುಂಬದಿಂದ ಬಂದವರು. ಅನ್ಯಧರ್ಮದ ಮೇಲೆ ಆಕ್ರಮಣ ಮಾಡುವುದರಿಂದ ನಮ್ಮ ಬಜಾಲ್ ಪ್ರದೇಶಕ್ಕೆ, ಜಿಲ್ಲೆಗೆ, ನಾಡಿಗೆ, ದೇಶದ ಐಕ್ಯಕ್ಕೆ ಒಳ್ಳೆಯದಲ್ಲ ಎಂದು ಶ್ರೀನಿವಾಸ್ ಬಜಾಲ್ ಹೇಳುತ್ತಿದ್ದರು. ಅದರ ವಿರೋಧವಾಗಿ ಸಮ ಸಮಾಜವನ್ನು ಕಟ್ಟಲು ಪ್ರಯತ್ನ ಮಾಡಿದವರು, ಹೋರಾಟ ಮಾಡಿದವರು" ಎಂದು ನೆನಪಿಸಿದರು.

"ಶ್ರೀನಿವಾಸ್ ಬಜಾಲ್ ಯಾವತ್ತೂ ಇನ್ನೊಬ್ಬರಿಗೆ ಕೈ ಎತ್ತಿ ಹೊಡೆಯಿರಿ ಎಂದು ಹೇಳಿದವರು ಅಲ್ಲ. ಮತೀಯ ಶಕ್ತಿಗಳಿಗೆ ಬಲಿಯಾಗುತ್ತಿದ್ದ ಯುವ ಜನರಲ್ಲಿ ಐಕ್ಯಕ್ಕಾಗಿ ವಿಚಾರವನ್ನು ಪ್ರಚಾರ ಮಾಡುತ್ತಿದ್ದರು. ಇದರಿಂದ ಮತೀಯ ಶಕ್ತಿಗಳಿಗೆ ಗಂಡಾಂತರ ಬರುತ್ತದೆ ಎಂದು ಗೊತ್ತಾಯಿತು. ಅದಕ್ಕಾಗಿ ಹಿಂದುತ್ವವಾದಿ ರಾಜಕೀಯ ಶಕ್ತಿಗಳು ಶ್ರೀನಿವಾಸ್ ಬಜಾಲ್‌ ನ್ನು ಕೊಂದವು. ಕೊಂದವರು ಈ ಹೋರಾಟದ ವಿಷಯವನ್ನೇ ಕೊಂದು ಬಿಡುತ್ತೇವೆ ಎಂದುಕೊಂಡಿದ್ದಾರೆ ಆದರೆ ಹಾಗಾಗಲಿಲ್ಲ ಎಂದರು.

ಡಾ.ನರೇಂದ್ರ ದಾಭೋಲ್ಕರ್ 'ಯಾರು ನಿಮ್ಮನ್ನು ಮೌಡ್ಯದ ವಿಷಯಕ್ಕೆ ಬಲಿ‌ ಬೀಳಿಸುತ್ತಾರೋ ಅವರನ್ನು ಪ್ರಶ್ನೆ ಮಾಡಿ' ಎಂದರು. ಆದರೆ ಇದರಿಂದಾಗಿ ಜನರು ವಿವೇಕವಂತರಾಗಬಾರದು ಎಂದು ಆ ವರ್ಗ ದಾಭೋಲ್ಕರ್ ಅವರನ್ನೇ ಕೊಂದರು. ಶಿವಾಜಿ ಎಂದರೆ ಯಾರು ಎಂಬ ವಿಚಾರವನ್ನು ಹೇಳಿದವರು ಗೋವಿಂದ ಪನ್ಸಾರೆ ಅದಕ್ಕಾಗಿ ಅವರನ್ನು ಕೊಂದರು. ಹಾಗೆಯೇ ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ಅವರನ್ನು ಕೂಡಾ ಬಲಿ ಪಡೆದರು ಎಂದು ಕೋಮುವಾದಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಶ್ರೀನಿವಾಸ್ ಬಜಾಲ್ ಅವರನ್ನು ಕೊಲ್ಲಲು ಕಾರಣ ಏನಿದೆಯೋ ಅದೇ ಕಾರಣಕ್ಕೆ ದಾಬೊಲ್ಕರ್, ಕಲ್ಬುರ್ಗಿ, ಪನ್ಸಾರೆ, ಗೌರಿ ಲಂಕೇಶ್ ಅವರನ್ನೂ ಕೊಲ್ಲಲಾಯಿತು. ಶ್ರೀನಿವಾಸ್ ಮಾಡಿರುವುದು ಶೌರ್ಯದ ರಾಜಕೀಯ, ಹಿಂದುತ್ವವಾದಿಗಳು ಮಾಡಿರುವುದು ಹೇಡಿ ರಾಜಕೀಯ ಎಂದು ಟೀಕಿಸಿದರು.

ಈ ಫ್ಯಾಶಿಸ್ಟ್ ‌ಸರಕಾರದ ನೀತಿಗಳನ್ನು ಪ್ರಶ್ನೆ ಮಾಡಿದ ಹೋರಾಟಗಾರರನ್ನು ಯುಎಪಿಎ ಕಾಯ್ದೆಯಡಿ ಬಂಧನ ಮಾಡುತ್ತಿದ್ದಾರೆ. ಈಗ ಟೀಸ್ಟಾ ಸೆಟಲ್ವಾಡ್, ಆರ್‌‌.ಬಿ.ಶ್ರೀಕುಮಾರ್ ವಿರುದ್ಧವೂ ಯುಎಪಿಎ ಕಾಯ್ದೆಯನ್ನು ಹಾಕಲು ಮುಂದಾಗಿದ್ದಾರೆ. ಇಂತಹ ಸರ್ವಾಧಿಕಾರಿ ಧೋರಣೆಗಳ ವಿರುದ್ಧ ಇನ್ನಷ್ಟು ಪ್ರಬಲ ಚಳವಳಿಗಳು ನಡೆಯಬೇಕಾಗಿದೆ ಎಂದರು.

ಸುನೀಲ್ ಕುಮಾರ್ ಬಜಾಲ್ ಮಾತನಾಡಿ, "ಶ್ರೀನಿವಾಸ್ ಬಜಾಲ್ ಆ ಕಾಲದಲ್ಲಿ ಜನರ ನಡುವೆ ಹೇಗೆ ಕೆಲಸ ಮಾಡಿದ್ದಾರೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ಶ್ರೀನಿವಾಸ್ ಬಜಾಲ್  ಡಿವೈಎಫ್‌ಐ ಆಶಯದಂತೆ ಹಿಂದೂ-ಮುಸ್ಲಿಮ್-ಕ್ರಿಶ್ಚಿಯನ್ ನಡುವಿನ ಐಕ್ಯಕ್ಕಾಗಿ ಕೆಲಸ ಮಾಡಿದವರು. ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಿಗೆ ನೇತೃತ್ವ ನೀಡುವ ಮೂಲಕ ಊರಿನ ಬಹುತೇಕ ಯುವಜನರ ಆಕರ್ಷಣೆಗೆ ಒಳಗಾದರು. ಇಂತಹ ಆಕರ್ಷಣೆ ಕೋಮುವಾದಿಗಳಿಗೆ ನೆಲೆ ಸಿಗದಂತಾಗಬಹುದೆಂಬ ಕಾರಣಕ್ಕೆ ಹಿಂದುತ್ವವಾದಿಗಳು ಒಂದು ವಾರ ಕಾದು ಕುಳಿತು ರೋಗಿಯೊಬ್ಬರಿಗೆ ರಕ್ತದಾನ ಮಾಡಲು ಹೊರಟ ಸಂದರ್ಭ ಶ್ರೀನಿವಾಸ್ ಬಜಾಲ್ ಅವರನ್ನು ಕೊಂದರು" ಎಂದು ಹೇಳಿದರು.

ಸಂತೋಷ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಕೆ.ಇಮ್ತಿಯಾಝ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಮುಖಂಡರಾದ ಸುಕುಮಾರ್, ಸಾಮರಸ್ಯ ಮಂಗಳೂರು ಸಂಚಾಲಕಿ ಮಂಜುಳಾ ನಾಯಕ್ ಮಾತನಾಡಿದರು.

ವೇದಿಕೆಯಲ್ಲಿ ಡಿವೈಎಫ್‌ಐ ಜಿಲ್ಲಾ ಮುಖಂಡರಾದ ರಫೀಕ್ ಹರೇಕಳ, ಡಿವೈಎಫ್‌ಐ ನಗರ ಅಧ್ಯಕ್ಷ ನವೀನ್ ಕೊಂಚಾಡಿ, ಕಾರ್ಮಿಕ ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ, ಡಿವೈಎಫ್ಐ ನಗರ ಮುಖಂಡ ಜಗದೀಶ್ ಬಜಾಲ್ ಉಪಸ್ಥಿತರಿದ್ದರು.

ಇದೇವೇಳೆ ಕಳೆದ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ದೀಪಕ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಡಿವೈಎಫ್ಐ ‌ಬಜಾಲ್‌ ಮುಖಂಡ ಧೀರಜ್ ಬಜಾಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News