ಮೋದಿ ನೇತೃತ್ವದ ಬಿಜೆಪಿ ಸರಕಾರದ 8 ವರ್ಷಗಳ ಆಡಳಿತ ಜನರ ಪಾಲಿಗದು ಹಿತಕಾರಿಯೇ? ಅಹಿತಕಾರಿಯೇ?

Update: 2022-06-27 07:11 GMT

ಭಾಗ-03

9. ಕೋವಿಡ್-19 ಕಳಪೆ ನಿರ್ವಹಣೆ:

ಕೋವಿಡ್-19 ನಿರ್ವಹಣೆ ವಿಚಾರದಲ್ಲಿ ಮೋದಿ ನೇತೃತ್ವದ ಕೇಂದ್ರ ಸರಕಾರವು ಆರಂಭದಲ್ಲಿ ಕ್ಷಿಪ್ರ ಪ್ರತಿಬಂಧಕ ಕ್ರಮ ಕೈಗೊಳ್ಳದೆ ಎಡವಿತ್ತು ಎಂದು ಹೇಳಲಾಗುತ್ತಿದೆ. 2020ರ ಜನವರಿ ತಿಂಗಳ ಕೊನೆಯಲ್ಲಿ ಕೇರಳ ರಾಜ್ಯದಲ್ಲಿ ದೇಶದ ಪ್ರಥಮ ಕೋವಿಡ್ ಕೇಸ್ ಪತ್ತೆ ಯಾಗಿತ್ತು. ಈ ಮಾರಣಾಂತಿಕ ಕಾಯಿಲೆ ಹೊರದೇಶದಿಂದ ಬಂದ ಕಾಯಿಲೆಯಾಗಿದೆ. ಅಂದರೆ ಕೇಂದ್ರ ಸರಕಾರವು ಆರಂಭದಲ್ಲೇ 2020 ಫೆಬ್ರವರಿ ಎರಡನೇ ವಾರದ ಒಳಗಾಗಿ ಎಲ್ಲಾ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಮಾತ್ರವೇ ಮುಚ್ಚಿ ಲಾಕ್‌ಡೌನ್ ಮಾಡಿದ್ದರೆ ಹೊರದೇಶದಿಂದ ಬರುವ ಈ ಕಾಯಿಲೆಯನ್ನು ಆರಂಭದಲ್ಲೇ ಹತೋಟಿಯಲ್ಲಿಡಬಹುದಿತ್ತು. ಆದರೆ ಪ್ರಧಾನಿ ಮೋದಿಯವರಿಗೆ ಈ ಕಾಯಿಲೆಯನ್ನು ತಡೆಯುವುದಕ್ಕಿಂತಲೂ ತನಗೆ ಆಪ್ತರೆನಿಸಿದ್ದ ಅಂದಿನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ದೇಶಕ್ಕೆ ಆಹ್ವಾನಿಸಿ ಅದರಲ್ಲೂ ವಿಶೇಷವಾಗಿ ತನ್ನ ತವರು ರಾಜ್ಯ ಗುಜರಾತ್‌ನಲ್ಲಿ ಅನಿವಾಸಿಭಾರತೀಯರನ್ನು ಕರೆಸಿ ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸು ವುದು ಅಗತ್ಯದ ಕೆಲಸ ಎನ್ನಿಸಿತ್ತು! ಅಮೆರಿಕದಲ್ಲಿ 2020ರ ಕೊನೆಯಲ್ಲಿ ನಡೆಯಲಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ತನಗೆ ಆಪ್ತರೆನಿಸಿದ್ದ ಟ್ರಂಪ್ ಅವರಿಗೆ ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರಲ್ಲಿ ಬಹುತೇಕರ ಬೆಂಬಲ ಕೊಡಿಸಲು ಮೋದಿಯವರು ಬಹಳ ಆಸಕ್ತರಾಗಿದ್ದರು.ಹೀಗೆ ಆ ಸಂದರ್ಭದಲ್ಲಿ ದೇಶದೊಳಗೆ ನುಗ್ಗಿ ಬರುತ್ತಿದ್ದ ವಿದೇಶಿ ಮೂಲದ ಕಾಯಿಲೆ ಕೊರೋನವನ್ನು ಆರಂಭದಲ್ಲಿ ನಿಗ್ರಹಿಸಲು ಕೇಂದ್ರ ಸರಕಾರ ಎಡವಿತ್ತು ಎಂದು ಹೇಳಬೇಕಾಗಿದೆ. ಅಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಅ ಬೃಹತ್ ಸಮಾವೇಶಕ್ಕೆ ಸುಮಾರು 25,000ಕ್ಕೂ ಹೆಚ್ಚಿನ ಅನಿವಾಸಿ ಭಾರತೀಯರು ಆಗಮಿಸಿದ್ದರು. ಆ ಸಂದರ್ಭ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಅಷ್ಟರಲ್ಲೇ ಕ್ಷಿಪ್ರವಾಗಿ ಹರಡುತ್ತಿದ್ದ ಕೊರೋನ ಕೆಲ ಅನಿವಾಸಿ ಭಾರತೀಯರ ಮೂಲಕ ಭಾರತಕ್ಕೆ ಪ್ರವೇಶಿಸಿ ಗುಜರಾತ್ ಮತ್ತು ಹತ್ತಿರದ ಇತರ ರಾಜ್ಯ ಗಳಲ್ಲಿ ಹೆಚ್ಚಾಗಿ ಹರಡಲು ಕಾರಣವಾಯಿತು ಎಂದು ತಜ್ಞರ ಅಭಿಪ್ರಾಯ.ಅಹಮದಾಬಾದ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೊಡ್ಡ ಸಂಖ್ಯೆಯಲ್ಲಿ ಬರಲು ಸಾಧ್ಯವಾಗದ ಕಾರಣ ಅನಿವಾಸಿ ಭಾರತೀಯ ರಲ್ಲಿ ಬಹಳಷ್ಟು ಜನ ಗುಜರಾತ್ ರಾಜ್ಯದ ಪಕ್ಕದ ರಾಜ್ಯಗಳ ಮುಂಬೈ, ರಾಜಸ್ಥಾನ, ಜಯಪುರ, ಮಧ್ಯಪ್ರದೇಶದ ಇಂದೋರ್ ಮತ್ತು ಹೊಸದಿಲ್ಲಿ ಮೂಲಕ ಬಂದಿರುವ ಕಾರಣ ಮೇಲಿನ ಎಲ್ಲ ರಾಜ್ಯಗಳಲ್ಲೂ ಕೊರೋನ ಕಾಯಿಲೆ ಬಹಳ ವ್ಯಾಪಕ ವಾಗಿ ಪ್ರವೇಶಿಸಿ ಅಲ್ಲಿನ ಜನರನ್ನು ಬಹುವಾಗಿ ಕಾಡಿದೆ.

9(ಎ). ಲಾಕ್‌ಡೌನ್ ಘೋಷಣೆ ಮತ್ತು ಜನರ ಗೋಳು:

ಮೇಲೆ ವಿವರಿಸಿರುವಂತೆ ಕೆಲವು ರಾಜ್ಯಗಳನ್ನು ಬಹುವಾಗಿ ಕಾಡಿದ್ದ ಈ ಕಾಯಿಲೆಯನ್ನು ನಿಗ್ರಹಿಸಲು ಪ್ರಧಾನಿ ಮೋದಿಯವರು ತಡವಾಗಿಅಂದರೆ ಮಾರ್ಚ್ 2020ರ ಕೊನೆಯಲ್ಲಿ ದೇಶದಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದರು. ಯಾವುದೇ ಮುನ್ಸೂಚನೆ ಇಲ್ಲದೆ ಮಾಡಿದ್ದ ಆ ಲಾಕ್‌ಡೌನ್ ಸುಮಾರು 6 ತಿಂಗಳುಗಳ ಕಾಲ ನಿರಂತರ ಮುಂದು ವರಿದು ಅದರಿಂದ ದೇಶದ ಬಡಜನ ಕೂಲಿ, ಕೆಲಸ ಏನೂ ಇಲ್ಲದೆ ನಿತ್ಯದ ಅನ್ನ, ಆಹಾರಕ್ಕಾಗಿ ಅನುಭವಿಸಿದ ಗೋಳು ಅಸಾಮಾನ್ಯ. ಲಾಕ್‌ಡೌನ್ ಘೋಷಣೆ ನಂತರ ತಾವಿರುವ ಬೇರೆಬೇರೆ ನಗರ, ಊರುಗಳಲ್ಲೇ ಉಳಿದ ಲಕ್ಷಾಂತರ ಕೂಲಿ ಕಾರ್ಮಿಕರು ಮೊದಲಾದ ವಲಸಿಗರು ಸ್ವಕ್ಷೇತ್ರಗಳಿಗೆ ಹೋಗಲು ಬಸ್ಸು, ರೈಲು ಯಾವುದೂ ದೊರಕದೆ ನೂರಾರು ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಹೋಗುವ ತೀರ್ಮಾನ ಕೈಗೊಂಡು ಬಹಳಷ್ಟು ಕಷ್ಟ-ನಷ್ಟ, ಸಮಸ್ಯೆಗಳನ್ನು ಎದುರಿಸಿಯೂ ಹಲವರು ಊರಿಗೆ ತಲುಪಿದರೆ ಇನ್ನು ಅನೇಕರು ಮಾರ್ಗಮಧ್ಯೆ ತಮ್ಮ ಪ್ರಾಣತೆತ್ತರು. ದೇಶದ ಜನತೆಗೆ ಈ ರೀತಿ ಘೋರ ಪರಿಣಾಮಗಳನ್ನು ಬೀರುವಂತಹ ಲಾಕ್‌ಡೌನ್‌ನಂತಹ ಅಸಾಮಾನ್ಯ ತೀರ್ಮಾನಗಳನ್ನು ಮಾಡುವಾಗ ಭಾರತದಂತಹ ಬೃಹತ್ ದೇಶದ ಆಡಳಿತ ನಡೆಸುವವರು ಸಾಕಷ್ಟು ಪೂರ್ವ ಸಿದ್ಧತೆ ಮಾಡಿ ಕನಿಷ್ಠ ಎರಡು-ಮೂರು ದಿನಗಳ ಸಮಯವನ್ನು ನೀಡಿದ್ದರೆ ಅದರ ಪರಿಣಾಮ ಅಷ್ಟೊಂದು ಭೀಕರವಾಗುತ್ತಿರಲಿಲ್ಲ.

9(ಬಿ). ಗಂಗಾನದಿಯಲ್ಲಿ ಸಾವಿರಾರು ಹೆಣ ತೇಲಿ ಬಂದು ದೇಶದ ಮಾನ ಹರಾಜು:

2020 - 21ರಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶದ ರಾಜ್ಯ ಸರಕಾರ ತನ್ನ ಕೋವಿಡ್ ನಿರ್ವಹಣೆ ಕುರಿತಂತೆ ತನ್ನ ಬೆನ್ನು ತಾನೇ ತಟ್ಟಿಕೊಳ್ಳುವಂತೆಯೇ ಒಂದು ದಿನ ಮುಂಜಾನೆ ನೂರಾರು ಜನರ ಹೆಣಗಳು ಗಂಗಾನದಿಯಲ್ಲಿ ತೇಲಿ ಬರುತ್ತಿರುವುದನ್ನು ಜನ ಕಾಣುತ್ತಾರೆ. ಮುಂದಿನ ದಿನಗಳಲ್ಲಿ ತೇಲಿ ಬರುತ್ತಿರುವ ಮಾನವ ದೇಹಗಳ ಸಂಖ್ಯೆ ಒಂದೆರಡು ಸಾವಿರಕ್ಕೆ ಏರುತ್ತದೆ. ರಾಷ್ಟ್ರೀಯ, ವಿದೇಶಿ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆ. ಹೀಗೆ ದೇಶದ ಮಾನ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆಗುತ್ತದೆ. ತನ್ನ ಆಡಳಿತದ ಎಂಟು ವರ್ಷ ಪೂರೈಸಿದ್ದ ಸಂದರ್ಭ ಪ್ರಧಾನಿ ಮೋದಿಯವರು ತನ್ನ ಆಡಳಿತಾವಧಿಯಲ್ಲಿ ದೇಶದ ಜನ ತಲೆತಗ್ಗಿಸುವಂತಹ ಯಾವುದೇ ಕೆಲಸ ತಾನು ಮಾಡಿಲ್ಲ ಎಂದು ಹೇಳುತ್ತಾರೆ. ಮೇಲಿನ ಪ್ರಕರಣ ಮೋದಿ ಸರಕಾರಕ್ಕೆ ನಾಚಿಕೆಗೇಡು ವಿಷಯ ಅಲ್ಲ ಎಂದಾದರೆ ಅದೇನು ಅವರಿಗೆ ಹೆಮ್ಮೆಯ ವಿಚಾರವೇ ಅವರೇ ಹೇಳಬೇಕು. ಜೊತೆಗೆ ಮೇಲಿನ ಪ್ರಕರಣ ಆಡಳಿತ ವೈಫಲ್ಯಕ್ಕೆ ದೊಡ್ಡ ಉದಾಹರಣೆ ಅಲ್ಲವೇ?.

10. ಗುಪ್ತಚರ ಇಲಾಖಾ ವರದಿ ಇದ್ದರೂ ಪುಲ್ವಾಮದಲ್ಲಿ ಆತಂಕವಾದಿಗಳ ದಾಳಿಯಿಂದ 40 ಸೈನಿಕರ ಮಾರಣ ಹೋಮ ಏಕಾಯಿತು?

ಎರಡು ದಿನಗಳ ಮೊದಲೇ ದೇಶದ ಉನ್ನತ ಗುಪ್ತಚರ ಇಲಾಖೆಯಿಂದ ಆತಂಕವಾದಿಗಳ ಸಂಭಾವ್ಯ ದಾಳಿ ಕುರಿತಂತೆ ವರದಿ ಬಂದಾಗ 40 ಸೈನಿಕರನ್ನು ಭೂಮಾರ್ಗದ ಬದಲು ವಾಯುಮಾರ್ಗ ಮೂಲಕ ಏಕೆ ರವಾನೆ ಆಗಿಲ್ಲ ಎಂಬ ಪ್ರಶ್ನೆಗೆ ದೇಶದ ಗೃಹ ಇಲಾಖೆ ಇನ್ನೂ ಸಮಂಜಸ ಉತ್ತರ ನೀಡಿಲ್ಲ. ಹೀಗೆ ಸಮರ್ಥ ರಕ್ಷಣಾ ವ್ಯವಸ್ಥೆಯ ಕೊರತೆಯಿಂದ ದೇಶದ 40 ವೀರಯೋಧರು ಆತಂಕವಾದಿಗಳ ದಾಳಿಗೆ ತಮ್ಮ ಜೀವತೆತ್ತರು. ಪ್ರಧಾನಿ ಮೋದಿ ಈ ಮಾರಣಹೋಮಕ್ಕೆ ದಿಟ್ಟ ಉತ್ತರ ನೀಡಲಾಗುವುದೆಂದು ಘೋಷಿಸಿದರು. ಆದರೆ ಆ ಸೈನಿಕರನ್ನು ಭೂಮಾರ್ಗದ ಬದಲು ವಾಯುಮಾರ್ಗ ಮೂಲಕ ಏಕೆ ರವಾನೆ ಆಗಿಲ್ಲ ಎಂಬ ಪ್ರಶ್ನೆಗೆ ಯಾರೂ ಇನ್ನೂ ಉತ್ತರಿಸಿಲ್ಲ.

ರೈತರ ಹಿತಾಸಕ್ತಿಗೆ ಮಾರಕವಾದ 3 ಮಸೂದೆಗಳು:

ರೈತರ ಉತ್ಪನ್ನಗಳಿಗೆ ದ್ವಿಗುಣ ಬೆಲೆ ನೀಡುವ ಭರವಸೆಯಿತ್ತು ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರಕಾರ ರೈತ ಸಂಘಗಳ ಪ್ರತಿನಿಧಿಗಳು, ಕೃಷಿ ಕ್ಷೇತ್ರದ ಅನುಭವಿಗಳು ಮತ್ತು ವಿರೋಧಪಕ್ಷಗಳ ಪ್ರತಿನಿಧಿಗಳೊಂದಿಗೆ ಚರ್ಚಿಸದೆ ತರಾತುರಿಯಲ್ಲಿ ಪಾರ್ಲಿಮೆಂಟ್‌ನಲ್ಲಿ ಮಂಡಿಸಿ ಯಾವುದೇ ಚರ್ಚೆ ಇಲ್ಲದೆ ಮಸೂದೆಗಳನ್ನು ಜಾರಿಗೊಳಿ ಸಿದ್ದರು. ಆದರೆ ದೇಶದ ಉತ್ತರ ರಾಜ್ಯಗಳಲ್ಲಿ ಸಕ್ರಿಯವಾಗಿರುವ ಭಾರತೀಯ ಕಿಸಾನ್ ಯೂನಿಯನ್ ಮೊದಲಾದ ಸಂಘಟನೆಗಳು ಸಂಘಟಿಸಿದ ಬೃಹತ್ ಹಾಗೂ ಸುದೀರ್ಘ ಚಳವಳಿಯಿಂದ ಮತ್ತು ಉತ್ತರದ ಕೆಲವು ರಾಜ್ಯಗಳಲ್ಲಿ ಅನಿವಾರ್ಯವಾಗಿ ಬರಲಿದ್ದ ಚುನಾವಣೆಗಳನ್ನು ಗಮನದಲ್ಲಿಟ್ಟು ಆ ಮಸೂದೆಗಳನ್ನು ಸರಕಾರ ವಾಪಸ್ ಪಡೆಯಿತು. ರೈತ ಸಂಘಗಳು ಆ ಮಸೂದೆಗಳು ರೈತರ ಹಿತಾಸಕ್ತಿಗಳಿಗೆ ಪೂರಕವಾಗಿಲ್ಲ ಎಂದು ಚಳವಳಿ ನಿರತರಾಗಿದ್ದರು. ಪ್ರಮುಖವಾಗಿ ಬಹುರಾಷ್ಟ್ರೀಯ ಕಂಪೆನಿಗಳು ಸೇರಿದಂತೆ ಸ್ವದೇಶಿ ಖಾಸಗಿ ಕಂಪೆನಿಗಳು ಕೂಡ ಕೃಷಿ ಚಟುವಟಿಕೆ ಮತ್ತು ಉತ್ಪನ್ನಗಳ ಮಾರಾಟ ವ್ಯವಸ್ಥೆಯಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳುವ ಅವಕಾಶ ಮತ್ತು ಉತ್ಪನ್ನಗಳಿಗೆ ಕನಿಷ್ಠ ಬೆಲೆ ನಿಗದಿ ಕುರಿತಂತೆ ಸ್ಪಷ್ಟತೆ ಇಲ್ಲದ ಕಾರಣ ರೈತ ಸಂಘಟನೆಗಳು ಈ ಮಸೂದೆಗಳನ್ನು ಉಗ್ರವಾಗಿ ವಿರೋಧಿಸಲು ಕಾರಣವಾಗಿತ್ತು. ರೈತರ ಹಿತಾಸಕ್ತಿಗಿಂತಲೂ ಕೃಷಿರಂಗದಲ್ಲಿ ಖಾಸಗಿ ಉದ್ಯಮಪತಿಗಳು ಬಂಡವಾಳ ತೊಡಗಿಸುವುದೇ ಸರಕಾರಕ್ಕೆ ಮುಖ್ಯ ವಾಗಿತ್ತೆಂದು ರೈತ ಸಂಘಟನೆಗಳು ಆರೋಪಿಸಿದ್ದರು ಮತ್ತು ಈ ಕಾರಣ ಗಳಿಗಾಗಿಯೇ ಆ ಮಸೂದೆಯನ್ನು ಸರಕಾರ ಹಿಂಪಡೆಯಬೇಕಾಯಿತು.

ನವರತ್ನ, ಒಎನ್‌ಜಿಸಿ ಮುಂತಾದ ಸರಕಾರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕೇಂದ್ರ ಸರಕಾರ:

ದೇಶ ಸ್ವತಂತ್ರಗೊಂಡ ಬಳಿಕ ಅಧಿಕಾರದಲ್ಲಿದ್ದ ಸರಕಾರಗಳು ಕೈಗಾರಿಕಾ ಕ್ಷೇತ್ರವನ್ನು ಬಲಪಡಿಸಿ ಆ ಕ್ಷೇತ್ರದಲ್ಲಿ ದೇಶ ಸ್ವಾವಲಂಬನೆ ಹೊಂದುವುದರ ಜತೆಗೆ ಸಹಸ್ರಾರು ಜನರಿಗೆ ಉದ್ಯೋಗ ಒದಗಿಸುವ ಹಿತದ ದೃಷ್ಟಿಯಲ್ಲಿ ಸ್ಥಾಪಿಸಿದ ನವರತ್ನ ಕೈಗಾರಿಕಾ ಸಂಸ್ಥೆಗಳೆಂದು ಪ್ರಸಿದ್ಧಿ ಪಡೆದಿದ್ದ ಕೈಗಾರಿಕೆ ಗಳು, ಎಲ್.ಐ.ಸಿ., ಜಿ.ಐ.ಸಿ., ನ್ಯೂ ಇಂಡಿಯ ಇನ್ಶೂರೆನ್ಸ್ ಮುಂತಾದ ವಿಮಾ ಕಂಪೆನಿಗಳನ್ನು ಮಾರುತ್ತಿರುವುದು ಇಲ್ಲವೆ ಖಾಸಗೀಕರಣಗೊಳಿ ಸುತ್ತಿರುವುದು ದೇಶದ ಹಿತಾಸಕ್ತಿಗೆ ಮಾರಕವಾಗುವುದು ಖಂಡಿತ.

ದಿನೇದಿನೆ ಏರುತ್ತಿರುವ ಸರಕಾರಿ ಸಾಲ:

ಮೇಲೆ ವಿವರಿಸಿರುವಂತೆ ಸರಕಾರ ತರಾತುರಿಯಲ್ಲಿ ಘೋಷಿಸಿದ್ದ ನೋಟು ಅಮಾನ್ಯ ಮತ್ತು ಅದರಿಂದಾದ ಆರ್ಥಿಕ ವಿಪ್ಲವ ಸರಿಯಾದ ಪೂರ್ವಸಿದ್ಧತೆ ಮತ್ತು ವ್ಯಾಪಕ ಚರ್ಚೆ, ವಿಮರ್ಶೆ ಏನೂ ಇಲ್ಲದೆ ತರಾತುರಿಯಲ್ಲಿ ಜಾರಿಗೊಳಿಸಿದ್ದ ಜಿಎಸ್‌ಟಿ ತೆರಿಗೆ ವ್ಯವಸ್ಥೆಯಿಂದ ಬಹುವಾಗಿ ಜರ್ಜರಿತಗೊಂಡ ದೇಶದ ಆರ್ಥಿಕ ಸಮಸ್ಯೆಗಳಿಂದ ಹೊರಬರಲು ಮೋದಿ ಸರಕಾರವು ಬಹುವಾಗಿ ವಿದೇಶಿ ಮೂಲದ ಸಾಲ ಪಡೆಯುತ್ತಲೇ ಇದೆ. ಇದೀಗ ಭಾರತ ಸರಕಾರ ಪಡೆದುಕೊಂಡ ಒಟ್ಟು ಸಾಲ ರೂ. 136 ಲಕ್ಷ ಕೋಟಿಯನ್ನು ದಾಟಿದೆ ಎಂದು ತಿಳಿದು ಬಂದಿದೆ. 2013- 14ರಲ್ಲಿ ಒಟ್ಟು ಸುಮಾರು ರೂ. 65,000 ಕೋಟಿ ಗಳಷ್ಟು ಇದ್ದ ಸಾಲ 8 ವರ್ಷಗಳಲ್ಲಿ ದ್ವಿಗುಣಗೊಂಡು ಒಟ್ಟು ಸಾಲ ರೂ. 136 ಲಕ್ಷ ಕೋಟಿಗೆ ತಲುಪಿದೆ ಅಂದರೆ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲೆ ಈಗ ತಲಾ ರೂ. 1.00 ಲಕ್ಷ ರೂ. ಸಾಲದ ಹೊರೆ ಇದೆ ಎಂದು ದೇಶದ ಪ್ರಜೆಗಳು ಗಮನಿಸಬೇಕಾಗಿದೆ. ಮೇಲಿನ ಚರ್ಚಿತ ಎಲ್ಲಾ ವಿಷಯಗಳನ್ನು ಓದುಗರು ಸಮಚಿತ್ತ ದಿಂದ ವಿಮರ್ಶಿಸಿದರೆ, ಮೋದಿ ನೇತೃತ್ವದ ಸರಕಾರ ಯಾವ ದಿಕ್ಕಿನತ್ತ ಸಾಗುತಿ್ತದೆ ಎಂಬುದನ್ನು ಅರ್ಥೈಸಲು ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News