ಬನ್ನಡ್ಕ ಮಂಗಳೂರು ವಿ.ವಿ. ಘಟಕ ಕಾಲೇಜಿನಲ್ಲಿ ದಾಖಲಾತಿ ಪ್ರಾರಂಭ

Update: 2022-06-27 07:53 GMT

ಮೂಡುಬಿದಿರೆ, ಜೂ.27: ಬನ್ನಡ್ಕದಲ್ಲಿ ಕಾರ್ಯಾಚರಿಸುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಿನಲ್ಲಿ ಬಿ.ಎ., ಬಿ.ಕಾಂ., ಬಿ.ಸಿ.ಎ., ಪದವಿ ಶಿಕ್ಷಣಕ್ಕಾಗಿ 2022-23ನೇ ಸಾಲಿಗೆ ದಾಖಲಾತಿ ಪ್ರಾರಂಭಗೊಂಡಿದೆ ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್ ತಿಳಿಸಿದ್ದಾರೆ.

ಬನ್ನಡ್ಕ ಕಾಲೇಜಿನ ಆವರಣದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪ್ರಸಕ್ತ ವರ್ಷ ನಡೆಯುವ 3 ತರಗತಿಗಳಿಗೂ ತಲಾ 50 ವಿದ್ಯಾರ್ಥಿಗಳಂತೆ ಸೇರ್ಪಡೆಗೆ ಅವಕಾಶವಿದ್ದು, ಮುಂದಿನ ವರ್ಷದಲ್ಲಿ ಬಿಬಿಎ ಕೋರ್ಸ್ ಕೂಡ ಪ್ರಾರಂಭಿಸಲಿರುವುದಾಗಿ ತಿಳಿಸಿದ್ದಾರೆ.

ಯಾವುದೇ ಖಾಸಗಿ ಕಾಲೇಜುಗಳಿಗೆ ಕಡಿಮೆ ಇಲ್ಲದಂತೆ ವಿಶ್ವವಿದ್ಯಾನಿಲಯ ಘಟಕ ಕಾಲೇಜನ್ನು ಬನ್ನಡ್ಕದಲ್ಲಿ ರೂಪಿಸಲಾಗಿದ್ದು ಇರುವ ಕೊಠಡಿಗಳನ್ನು ಅತ್ಯಾಧುನಿಕ ಶೈಲಿಯಲ್ಲಿ ರೂಪುಗೊಳಿಸಿ ಅಧ್ಯಯನಕ್ಕೆ ಯೋಗ್ಯವನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

ಇಲ್ಲಿ ವಿದ್ಯಾರ್ಜನೆ ನಡೆಸುವ ವಿದ್ಯಾರ್ಥಿಗಳಿಗೆ ಕಡಿಮೆ ಫೀಸ್ ನಿಗದಿಗೊಳಿಸಲಾಗಿದ್ದು; ಅಗತ್ಯವಿರುವ ಕಂಪ್ಯೂಟರ್ ಲ್ಯಾಬ್ ಮತ್ತಿತರ ಸವಲತ್ತುಗಳನ್ನು ಪೂರೈಸಲಾಗುವುದು. ನುರಿತ ಶಿಕ್ಷಕರು, ಉದ್ಯೋಗಾವಕಾಶ ನೀಡುವ ಕೋರ್ಸುಗಳು, ವ್ಯಕ್ತಿತ್ವ ವಿಕಸನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ತರಬೇತಿಗಳು ನೀಡಲಾಗುವುದು ಎಂದು ತಿಳಿಸಿದರು.

ಮೂಡುಬಿದಿರೆ ತಾಲೂಕಿನ ಏಕೈಕ ಪದವಿ ಸರಕಾರಿ ಕಾಲೇಜು ಚುನಾವಣೆಯಲ್ಲಿ ನೀಡಿರುವ ಭರವಸೆಯಂತೆ ಮಂಜೂರುಗೊಳಿಸಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಸೂಕ್ತ ನಿವೇಶನಕ್ಕಾಗಿ ಹುಡುಕಾಟದಲ್ಲಿದ್ದು ಲಭ್ಯವಾದ ಕೂಡಲೇ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿ ಬಡ, ಮಧ್ಯಮ ವರ್ಗದ ಮಕ್ಕಳ ಉನ್ನತ ಶಿಕ್ಷಣದ ಆಸೆಯನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಿರುವುದಾಗಿ ಕೋಟ್ಯಾನ್ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08258-200166 ಅಥವಾ ಮೊ.ಸಂ.: 9741250218, 9483212443 ಅನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಂಚಾಯತ್ ಅಧ್ಯಕ್ಷೆ ಕಲ್ಯಾಣಿ, ಘಟಕ ಕಾಲೇಜಿನ ಸಂಯೋಜಕಿ ಶಶಿಕಲಾ ಎನ್., ದೈಹಿಕ ಶಿಕ್ಷಣ ಶಿಕ್ಷಕ ಕಿರಣ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News