ವೈಜ್ಞಾನಿಕ ಆಧಾರಿತ ಸಾಕ್ಷ್ಯಾಧಾರಗಳು ಅಪರಾಧಗಳ ಪತ್ತೆಗೆ ಸಹಕಾರಿ: ಡಿಸಿಪಿ ಹರಿರಾಮ್ ಶಂಕರ್

Update: 2022-06-27 10:07 GMT

ಕೊಣಾಜೆ, ಜೂ.27: ಅಪರಾಧ ಪ್ರಕರಣಗಳಲ್ಲಿ ದೂರುದಾರರು ಹಿಂದೆ ಸರಿದರೂ, ವೈಜ್ಞಾನಿಕ ಆಧಾರಿತ ಸಾಕ್ಷ್ಯಾಧಾರಗಳು ಅಪರಾಧಿಗಳಿಗೆ ಶಿಕ್ಷೆಯನ್ನು ನೀಡುವುದರಲ್ಲಿ ಸಹಕರಿಸುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಉಪ ಆಯುಕ್ತ ಹರಿರಾಮ್ ಶಂಕರ್  ತಿಳಿಸಿದ್ದಾರೆ.

ಅವರು ದೇರಳಕಟ್ಟೆಯ ನಿಟ್ಟೆ ಎ.ಬಿ. ಶೆಟ್ಟಿ ದಂತ ವಿಜ್ಞಾನ ಸಂಸ್ಥೆಗಳ ಆಶ್ರಯದಲ್ಲಿ ಆವಿಷ್ಕಾರ ಆಡಿಟೋರಿಯಂನಲ್ಲಿ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡಮಿಯ ಫಾರೆನ್ಸಿಕ್ ಆಂಡಾಂಟಾಲಜಿ ವಿಭಾಗ, ಫಾರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗಗಳ ಆಶ್ರಯದಲ್ಲಿ ಜರುಗಿದ ಫಾರೆನ್ಸಿಕ್ ಆಂಡಾಂಟಾಲಜಿ ಮೊದಲ ಪ್ರಮಾಣ ಪತ್ರವುಳ್ಳ ಕೋರ್ಸ್‌ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

 ಅಪರಾಧ ಪತ್ತೆ ಹಚ್ಚುವಿಕೆಗೆ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಲು ಕರ್ನಾಟಕ ಪೊಲೀಸ್‌ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಹಲ್ಲುಗಳಲ್ಲಿನ ಕುರುಹುಗಳಿಂದ ಅಪರಾಧಿಗಳ ಪತೆಹಚ್ಚುವ ಸಲುವಾಗಿ ಜೈಲಿನಲ್ಲಿರುವ ಪ್ರತಿಯೊಬ್ಬ ಖೈದಿಯ ದಂತ ಚರಿತ್ರೆಯನ್ನು ಅರಿಯಬೇಕು ಅನ್ನುವ ಕಾನೂನು ಕೂಡ ಜಾರಿಗೆ ಬಂದಿದೆ ಎಂದು ಹೇಳಿದರು.

ಮಂಗಳೂರು ವಿಮಾನ ಅಪಘಾತ, ಕೇರಳದ ಸುಕುಮಾರನ್‌ ಪ್ರಕರಣಗಳಲ್ಲಿ ಡೆಂಟಲ್‌ ಹಿಸ್ಟರಿಯಿಂದ ಗುರುತು ಪತ್ತೆಹಚ್ಚುವಿಕೆ ಸಾಧ್ಯವಾಗಿದೆ ಎಂದರು.

ಕರ್ನಾಟಕ ಪೊಲೀಸ್‌ ವಿಶೇಷ ತಂಡವನ್ನು ರಾಜ್ಯಾದ್ಯಂತ ರಚಿಸಿದೆ. ಅಪರಾಧ ನಡೆದಾಗ ತಂಡ ಸ್ಥಳದಲ್ಲಿ ಸಿಗುವ ಸಾಕ್ಷ್ಯಾಧಾರಗಳನ್ನು ವೈಜ್ಞಾನಿಕವಾಗಿ ಪತ್ತೆ ಹಚ್ಚುವ ಮೂಲಕ ಕಾರ್ಯಾಚರಿಸಲಿದೆ. ಪೊಲೀಸ್‌ ಇಲಾಖೆಗೆ ಫಾರೆನ್ಸಿಕ್‌ ವಿಭಾಗದ ಅಗತ್ಯ ಹೆಚ್ಚಿದೆ. ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯ ಜತೆಗೂ  ಇಂತಹ ಕೋರ್ಸ್‌ ಗಳನ್ನು ನಡೆಸಬೇಕಾಗಿದೆ ಎಂದರು.

ಇಂಡಿಯನ್‌ ಅಕಾಡಮಿ ಆಫ್‌ ಓರಲ್‌  ಮೆಡಿಸಿನ್‌ ರೇಡಿಯಾಲಜಿ ಇದರ ಪ್ರಧಾನ ಕಾರ್ಯದರ್ಶಿ, ಯೆನೆಪೊಯ ದಂತ ಕಾಲೇಜಿನ ಓರಲ್‌  ಮೆಡಿಸಿನ್‌ ರೇಡಿಯಾಲಜಿ ವಿಭಾಗ ಮುಖ್ಯಸ್ಥ ಡಾ.ಪ್ರಶಾಂತ್‌ ಶೆಣೈ ಕೆ. ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಡೀನ್ ಡಾ.ಯು.ಎಸ್ ಕೃಷ್ಣ ನಾಯಕ್ ಮಾತನಾಡಿ, ಈ ಕೋರ್ಸ್‌ ಆರಂಭದಲ್ಲೇ ವಿದ್ಯಾರ್ಥಿಗಳ ಉತ್ತಮ ಪ್ರತಿಕ್ರಿಯೆ ದೊರೆತಿದೆ. ವಾರ್ಷಿಕವಾಗಿ ಎರಡು ಬಾರಿ ಕೋರ್ಸ್‌ ಕೈಗೊಳ್ಳುವ ಕುರಿತು ಚಿಂತನೆಯನ್ನು ನಿಟ್ಟೆ ಪರಿಗಣಿತ ವಿವಿ  ನಡೆಸಲಿದೆ ಎಂದರು.  

ಕೆ.ಎಸ್‌. ಹೆಗ್ಡೆ ವೈದ್ಯಕೀಯ ಕಾಲೇಜಿನ ಫಾರೆನ್ಸಿಕ್‌  ಮೆಡಿಸಿನ್‌ ಆಂಡ್‌ ಟಾಕ್ಸಿಕಾಲಜಿ ವಿಭಾಗ ಮುಖ್ಯಸ್ಥ ಡಾ.ಮಹಾಬಲೇಶ್‌ ಶೆಟ್ಟಿ ಕೆ., ಡಾ.ಸೂರಜ್‌ ಶೆಟ್ಟಿ, ಡಾ.ಜಿ.ಸುಹಾಸ್‌ ಬಾಬು, ಡಾ.ಪುಷ್ಪರಾಜ್‌ ಶೆಟ್ಟಿ ಉಪಸ್ಥಿತರಿದ್ದರು.

ಡಾ.ಕುಮುದಾ ರಾವ್ ಸ್ವಾಗತಿಸಿದರು. ಡಾ.ಊರ್ವಶಿ ಎ. ಶೆಟ್ಟಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News