ದ.ಕ. ಜಿಲ್ಲಾಡಳಿತದಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

Update: 2022-06-27 10:42 GMT

ಮಂಗಳೂರು, ಜೂ.27: ನವ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡದು. ಅವರ ಅಭಿವೃದ್ಧಿ ಕಾರ್ಯ, ದೂರದೃಷ್ಟಿತ್ವದ ಚಿಂತನೆ ಸದಾ ಪ್ರೇರಣಾದಾಯಿ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದ್ದಾರೆ.

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ತುಳು ಭವನದಲ್ಲಿ ಆಯೋಜಿಸಿದ್ದ ನಾಡ ಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೆಂಪೇಗೌಡರ ಸಾಧನೆ ದೇಶವೇ ಹೆಮ್ಮೆಪಡುವಂತದ್ದು.ಅವರ ಕಾರ್ಯವೈಖರಿಯೇ ಯುವಸಮುದಾಯಕ್ಕೆ ಪ್ರೇರಣಾದಾಯಿ ಎಂದು ಶಾಸಕ ಕಾಮತ್ ಹೆಳಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ ಮಾತನಾಡಿ, ಇಂದು ಬೆಂಗಳೂರು ಐಟಿ ಬಿಟಿ ಮತ್ತು ಜ್ಞಾನ ಕೇಂದ್ರಿತ ನಗರವಾಗಿ ವಿಶ್ವವನ್ನು ಸೆಳೆಯುತ್ತಿದ್ದರೆ ಅದರ ಹಿಂದೆ ಕೆಂಪೇಗೌಡರ ಅವಿರತ ಪರಿಶ್ರಮವಿದೆ. ಅವರ ಕುರಿತ ಆಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ನಾಡುಕಟ್ಟಿದ ಅವರ ಮುಂದಾಲೋಚನೆ, ಸಾಧನೆಯ ಬಗ್ಗೆ ಯುವ ಸಮುದಾಯ ತಿಳಿದುಕೊಳ್ಳಬೇಕು ಎಂದರು.

ರಾಷ್ಟ್ರ ಮಟ್ಟದ ತರಬೇತುದಾರ ರಾಜೇಂದ್ರ ಭಟ್ ಕೆ. ಕೆಂಪೇಗೌಡರ ಕುರಿತಂತೆ ಉಪನ್ಯಾಸ ನೀಡಿದರು.

ಮೇಯರ್ ಪ್ರೇಮಾನಂದ ಶೆಟ್ಟಿ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಕಸಾಪ ದ.ಕ. ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ.ಕೆ.ಜಗದೀಶ್ ಪೈ, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಸದಾನಂದ ಗೌಡ ಉಪಸ್ಥಿತರಿದ್ದರು.


ಕಾಟಾಚಾರದ ಆಚರಣೆ

ಬಹುತೇಕವಾಗಿ ಸರಕಾರಿ ಕಾರ್ಯಕ್ರಮಗಳು ನಿಗದಿತ ಸಮಯಕ್ಕೆ ನಡೆಯುವುದು ಅಪರೂಪ. ಅದರಂತೆ ಇದು ಕೂಡಾ 10:30ಕ್ಕೆ ಆರಂಭವಾಗಬೇಕಾದ ಸಭೆ 11 ಗಂಟೆಯ ಬಳಿಕ ಆರಂಭಗೊಂಡಿತು. ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಇತರ ಜನಪ್ರತಿನಿಧಿಗಳನ್ನೊಳಗೊಂಡಂತೆ 37 ಮಂದಿ ಗಣ್ಯರ ಹೆಸರಿದ್ದರೂ ಪಾಲ್ಗೊಂಡಿದ್ದು, ಕೇವಲ 9 ಮಂದಿ ಮಾತ್ರ. ಅವರಲ್ಲೂ ಕೆಲವರು ಅಧಿಕಾರಿಗಳು!.

ಬಹುಜನರ ನಿರೀಕ್ಷೆ ಹೊತ್ತು ಸಭಾಂಗಣದ ತುಂಬ ಹಾಕಿದ್ದ ಕುರ್ಚಿಗಳನ್ನು ಸಭೆ ಖಾಲಿ ಇದ್ದುದರಿಂದ ತೆಗೆಸಲಾಯಿತು. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ನಡೆದರೂ ಕಾಟಾಚಾರದ ಆಚರಣೆಗೆ ಸೀಮಿತವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News