×
Ad

ಉಡುಪಿ; ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಪೋಕ್ಸೊ ಆರೋಪಿಗೆ 20 ವರ್ಷ ಜೈಲುಶಿಕ್ಷೆ

Update: 2022-06-27 19:56 IST

ಉಡುಪಿ : ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ತೋಟದ ಮನೆಯೊಂದರಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ಹಾವೇರಿ ಮೂಲದ ಹನುಮಂತ (55) ಶಿಕ್ಷೆಗೆ ಗುರಿಯಾದ ಆರೋಪಿ.

ನೊಂದ ಬಾಲಕಿ ತನ್ನ ತಾಯಿ ಜೊತೆ ತೋಟದ ಮನೆಯಲ್ಲಿ ವಾಸ ಮಾಡಿ ಕೊಂಡಿದ್ದು, ಅದೇ ತೋಟದಲ್ಲಿ ಹನುಮಂತ ಕೆಲಸ ಮಾಡಿಕೊಂಡು ಬೇರೆ ಮನೆಯಲ್ಲಿ ವಾಸಿಸುತ್ತಿದ್ದನು. 2021ರ ಜನವರಿ ತಿಂಗಳಲ್ಲಿ ಹನುಮಂತ ಬಾಲಕಿ ಒಬ್ಬಳೇ ಮನೆಯಲ್ಲಿರುವಾಗ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಈ ಕುರಿತು ನೊಂದ ಬಾಲಕಿ ಮಾಹಿತಿ ನೀಡಿದ್ದು, ಬಳಿಕ ಆಕೆಯನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಈ ಕುರಿತು ಬಾಲಕಿಯ ತಾಯಿ ಆರೋಪಿ ವಿರುದ್ಧ ನೀಡಿದ ದೂರಿನಂತೆ ಆಗಿನ ಕುಂದಾಪುರ ಠಾಣಾ ಎಸ್ಸೈ ಸದಾಶಿವ ಗವರೋಜಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ೧೮ ಸಾಕ್ಷಿಗಳ ಪೈಕಿ ೧೨ ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿ ಲಾಗಿದ್ದು, ವೈದ್ಯಕೀಯ ಸಾಕ್ಷಿ ಮತ್ತು ನೊಂದ ಬಾಲಕಿ ಹಾಗೂ ಇತರ ಸಾಕ್ಷಿಗಳು ಹೇಳಿದ ಸಾಕ್ಷ್ಯಾಧಾರಗಳು ಅಭಿಯೋಜನೆಗೆ ಪರವಾಗಿತ್ತು. ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಆರೋಪಿಗೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ, ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು.

ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ ಒಂದು ವರ್ಷಗಳ ಸಾದಾ ಶಿಕ್ಷೆ ಮತ್ತು ಒಟ್ಟು ದಂಡದಲ್ಲಿ 40 ಸಾವಿರ ರೂ. ಬಾಲಕಿಗೆ ಮತ್ತು 5 ಸಾವಿರ ರೂ. ಸರಕಾರಕ್ಕೆ ಪಾವತಿಸಬೇಕು. ನೊಂದ ಬಾಲಕಿಗೆ ೫ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಸರಕಾರಕ್ಕೆ ಆದೇಶಿಸಿದೆ. ಪ್ರಾಸಿಕ್ಯೂಷನ್ ಪರವಾಗಿ ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News