ಸರಕಾರದ ಅಧಿಸೂಚನೆ ಹೊರತು ಸರ್ವೆಗೆ ಮುಂದಾದರೆ ಮುಂದಿನ ಅನಾಹುತಗಳಿಗೆ ಅಧಿಕಾರಿಗಳೇ ನೇರ ಹೊಣೆ: ಗ್ರಾಮಸ್ಥರ ಎಚ್ಚರಿಕೆ

Update: 2022-06-27 14:43 GMT

ಮಂಗಳೂರು: ಸರಕಾರ ಬಳ್ಕುಂಜೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕಾ ವಲಯ ಸ್ಥಾಪನೆಗೆ ಸಂಬಂಧಿ ಸಿದಂತೆ ಸೋಮವಾರ ಸರ್ವೆಗೆ ಬಂದಿದ್ದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ವಾಪಸು ಕಳುಹಿಸಿರುವ ಘಟನೆ ವರದಿಯಾಗಿದೆ.

ಈ ಹಿಂದೆ ಕೆಐಎಡಿಬಿ ಅಧಿಕಾರಿಗಳು ಬಳ್ಕುಂಜೆ ಪ್ರದೇಶದಲ್ಲಿ ಸರ್ವೆ ಮುಂದಾಗಿದ್ದರು. ಈ ವೇಳೆ ಅಧಿಕಾರಿಗಳನ್ನು ಗ್ರಾಮಸ್ಥರು ತಡೆದಿದ್ದರು. ಆದರೆ ಇಂದೂ ಬಳಕುಂಜೆ ಪ್ರದೇಶದಲ್ಲಿ ಸರ್ವೆ ನಡೆಸಲು ಬಂದಿದ್ದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ಸರ್ವೆಗೆ ಬಂದಿದ್ದ ಅಧಿಕಾರಿಗಳನ್ನು ತಡೆದು ಪ್ರಶ್ನಿಸಿದ ಗ್ರಾಮಸ್ಥರು "ಈ ಮೊದಲು ಸರ್ವೆಗೆ ಬಂದಿದ್ದ ವೇಳೆ ನಮ್ಮ ಒಪ್ಪಿಗೆ ಇಲ್ಲ ಎಂದು ಹೇಳಲಾಗಿತ್ತು ಅಲ್ಲದೆ ಅಧಿಸೂಚನೆ ಪ್ರಕಾರ ಕಾರ್ಯಯೋಜನೆಗಳು ಪೂರ್ಣಗೊಂಡಿಲ್ಲ.  ಸರಕಾರ ಜಮೀನುಗಳನ್ನು ನಡೆಸುವಂತೆ ಯಾವುದೇ ಸೂಚನೆಗಳನ್ನು ನೀಡಿಲ್ಲ ಹೀಗಿರುವಾಗ ಪದೇಪದೇ ಸರ್ವೆಗೆ ಬಂದು ಗ್ರಾಮಸ್ಥರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 

ಈ ವೇಳೆ ಪ್ರತಿಕ್ರಿಯಿಸಿದ ಅಧಿಕಾರಿ, ಎಸಿ ಅವರ ಸೂಚನೆ ಮೇರೆಗೆ ಸರ್ವೆಗೆ ಬಂದಿರುವುದುದಾಗಿ ಸಮಜಾಯಿಶಿ ನೀಡಿದರು. ಈ ವೇಳೆ ಆಕ್ರೋಶಗೊಂಡ ಗ್ರಾಮಸ್ಥರು ಎಸಿ ಅವರು ಸರ್ವೆ ಮಾಡಲು ಸೂಚನೆ ನೀಡಿರುವ ದಾಖಲೆಗಳನ್ನು ತೋರಿಸುವಂತೆ ಪಟ್ಟುಹಿಡಿದರು.

ಆ ಸಂದರ್ಭ ತಬ್ಬಿಬ್ಬಾದ ಅಧಿಕಾರಿ, ಉಪವಿಭಾಗಾಧಿಕಾರಿಯವರು ಮೌಖಿಕವಾಗಿ ಆದೇಶವನ್ನು ನೀಡಿದ್ದು ಲಿಖಿತವಾಗಿ ನೀಡಿಲ್ಲ ಎಂದು ಹೇಳಿದರು. ಇದಕ್ಕೆ ಅಸಮಾಧಾನಗೊಂಡ ಗ್ರಾಮಸ್ಥರು ಇನ್ನು ಮುಂದೆ ಸರಕಾರದ ಪ್ರಕ್ರಿಯೆಗಳು ಪೂರ್ಣಗೊಂಡು ಸರಕಾರ ನಿವೇಶನಗಳ ಸರ್ವೆಗೆ ಅಧಿಸೂಚನೆ ಹೊರಡಿಸದೆ ಸರ್ವೆಗೆ ಮುಂದಾದರೆ ಮುಂದೆ ನಡೆಯಬಹುದಾದ ಎಲ್ಲಾ ಅನಾಹುತಗಳಿಗೆ ಅಧಿಕಾರಿಗಳು ನೇರ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಗ್ರಾಮಸ್ಥರು ಸರ್ವೆಗೆ ಬಂದಿದ್ದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಬಳಿಕ ಅವರು ಹಿಂದಿರುಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News