ಕಾಪು: 14 ತಿಂಗಳ ನಂತರ ಮನೆಯವರನ್ನು ಸೇರಿದ ಯುವಕ!

Update: 2022-06-27 15:18 GMT

ಕಾಪು: ಕಳೆದ 14 ತಿಂಗಳಿನಿಂದ ಮನೆ ಬಿಟ್ಟು ಬೀದಿಬದಿ ತಿರುಗುತ್ತಿದ್ದ ಬೆಂಗಳೂರಿನ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರನ್ನು ಪತ್ತೆ ಹಚ್ಚಿ ಮನೆಯ ವರಿಗೆ ಒಪ್ಪಿಸಿದ ಘಟನೆ ಜೂ.25ರಂದು ರಾತ್ರಿ ಕಾಪುವಿನಲ್ಲಿ ನಡೆದಿದೆ.

ಪತ್ತೆಯಾದ ವ್ಯಕ್ತಿಯನ್ನು ಬೆಂಗಳೂರು ರಾಮನಗರದ ಸೈಯ್ಯದ್ ಅಂಜದ್ ಅಹ್ಮದ್ ಎಂಬವರ ಮಗ ಜುನೈದ್ (25) ಎಂದು ಗುರುತಿಸಲಾಗಿದೆ. ಕಾಪು ಎಕ್ಸ್‌ಪ್ರೆಸ್ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಜುನೈದ್‌ನನ್ನು ಎಸ್‌ಡಿಪಿಐ ಸದಸ್ಯ ಅಬ್ದುಲ್ ರಝಾಕ್ ಗಮನಿಸಿ ವಿಚಾರಿಸಿದರು. ಆಗ ಅವರು ತಾನು 14 ತಿಂಗಳ ಹಿಂದೆ ಮನೆ ಬಿಟ್ಟು ಬಂದಿರುವುದಾಗಿ ಮಾಹಿತಿ ನೀಡಿದರು.

ಬಳಿಕ ಅವರ ಮೂಲಕ ಸಂಬಂಧಿಕರ ಮೊಬೈಲ್ ನಂಬರ್ ಪಡೆದು ಸಂಪರ್ಕಿಸಲಾಯಿತು. ಇದರಿಂದ ಜುನೈದ್, ಮಾನಸಿಕ ಅಸ್ವಸ್ಥಗೊಂಡು ಮನೆ ಬಿಟ್ಟು ಬಂದಿರುವುದು ದೃಢಪಟ್ಟಿತು. ಕೂಡಲೇ ರಝಾಕ್ ಕಾಪು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ರಝಾಕ್‌ರ ಮನೆಯಲ್ಲಿ ಜುನೈದ್‌ರನ್ನು ಶುಚಿ ಗೊಳಿಸಿ ಬಟ್ಟೆ ಬರೆ ನೀಡಲಾಯಿತು. ಬೆಂಗಳೂರಿನಿಂದ ಹೊರಟ ಜುನೈದ್ ಮನೆಯವರು ರಾತ್ರಿ 12ಗಂಟೆ ಕಾಪು ತಲುಪಿದ್ದು, ಪೊಲೀಸರ ಮೂಲಕ ಅವರನ್ನು ಮನೆಯವರಿಗೆ ಒಪ್ಪಿಸಲಾಯಿತು.

ಈ ಸಂದರ್ಭದಲ್ಲಿ ಕಾಪು ಎಸ್ಸೈ ಭರತೇಶ್, ಪ್ರೊಭೇಷನರಿ ಎಸ್ಸೈ ನಿರಂಜನ್, ಸಿಬ್ಬಂದಿಗಳಾದ ನಾರಾಯಣ್, ಶ್ರೀನಿವಾಸ, ವಿಕ್ರಮ್, ಶಿವಾನಂದಪ್ಪ, ಎಸ್‌ಡಿಪಿಐ ಕಾರ್ಯಕರ್ತ ಅಬ್ದುಲ್ ರಝಾಕ್, ಸಂಘಟನಾ ಕಾರ್ಯದರ್ಶಿ ಸಾಧಿಕ್ ಕೆ.ಪಿ., ಎಸ್‌ಡಿಟಿಯು ಜಿಲ್ಲಾಧ್ಯಕ್ಷ ಶಮೀರ್ ಎಸ್.ಎಂ.ಎಸ್. ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News