ಮೈಸೂರು ಮುಕ್ತ ವಿವಿಗೆ ಪ್ರವೇಶಾತಿ ಆರಂಭ

Update: 2022-06-27 15:21 GMT

ಮಂಗಳೂರು: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ೨೦೨೨-೨೩ನೇ ಸಾಲಿನ ವಿವಿಧ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ಆಸಕ್ತರು ಅರ್ಜಿ ಸಲ್ಲಿಸಿ ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಬಹುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ತಿಳಿಸಿದರು.

ವಿವಿಯ ಪ್ರವೇಶಾತಿ, ಅಂಕಪಟ್ಟಿ ಡಿಜಿಟಲೀಕರಣಗೊಂಡಿದೆ. ಒಟ್ಟು ಪ್ರವೇಶಾತಿಯನ್ನು ಆನ್‌ಲೈನ್ ಮೂಲಕವೇ ನಡೆಸಲಾಗುತ್ತದೆ. ಪಾರದರ್ಶಕತೆಗೆ ಅನುಗುಣವಾಗಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ತಾವು ಇರುವ ಜಿಲ್ಲೆಯ ಮುಕ್ತ ವಿವಿ ಕೇಂದ್ರಗಳ ಮೂಲಕ ಶೈಕ್ಷಣಿಕ ಪ್ರಯೋಜನ ಪಡೆದುಕೊಳ್ಳಬಹುದು. ಪ್ರಾದೇಶಿಕ ಕೇಂದ್ರಗಳಲ್ಲಿ ತರಗತಿ ಮತ್ತು ಪರೀಕ್ಷೆಗಳು ನಡೆಯಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ವಿವಿಯಲ್ಲಿ ಯುಜಿ ಮತ್ತು ಪಿಜಿ, ಡಿಪ್ಲೊಮಾ, ಪಿಜಿ ಸರ್ಟಿಫಿಕೇಟ್‌ನ ವಿವಿಧ ಕೋರ್ಸ್‌ಗಳಿವೆ. ಯುಜಿಸಿ ನಿಯಮಾನುಸಾರ ಲರ್ನರ್ ಸಪೋರ್ಟಿಂಗ್ ಸೆಂಟರ್‌ನ್ನು ಗುರುತಿಸಿ, ಅಧಿಕೃತ ಮಾನ್ಯತೆ ನೀಡಲಾಗಿದೆ. ಯುಜಿಸಿ ನಿಯಮಾವಳಿಯಂತೆ ವಿವಿ ದ್ವಿ-ಪದವಿಗಳಿಗೆ ಅವಕಾಶ ಕಲ್ಪಿಸಿದೆ. ಒಂದು ಕೋರ್ಸ್ ಅಧ್ಯಯನ ಮಾಡುತ್ತಿರುವಾಗಲೇ ಇನ್ನೊಂದು ಕೋರ್ಸ್‌ಗೆ ಪ್ರವೇಶಾತಿ ಹೊಂದಿ ಪದವಿ ಗಳಿಸಬಹುದು.

ವಿವಿಯು ಉದ್ಯೋಗ ಮೇಳ ಆಯೋಜಿಸಿ, ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುತ್ತಿದೆ. ಕಳೆದ ವರ್ಷ ಜನವರಿಯಲ್ಲಿ ೫೮೬ ಮತ್ತು ಜುಲೈನಲ್ಲಿ ೧೨೮೦ ಪ್ರವೇಶಾತಿಯಾಗಿದ್ದು, ಈ ಸಾಲಿನಲ್ಲಿ ೫೦೦೦ ಪ್ರವೇಶಾತಿ ಮಾಡುವ ಗುರಿ ಹೊಂದಲಾಗಿದೆ. ಮಂಗಳೂರಿನ ರಥಬೀದಿ ದಯಾನಂದ ಪೈ, ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಕ್ತ ವಿವಿಗೆ ಪ್ರವೇಶಾತಿ ಪಡೆಯಬಹುದು.

ರಥಬೀದಿ ಕಾಲೇಜು ಪ್ರಾಂಶುಪಾಲ ಡಾ. ಜಯಕರ್, ಮೂಡುಬಿದಿರೆ ಆಳ್ವಾಸ್ ಕಾಲೇಜು ದೂರಶಿಕ್ಷಣ ವಿಭಾಗ ಸಂಯೋಜಕ ಬಾಲಕೃಷ್ಣ ಶೆಟ್ಟಿ, ಕೆಎಸ್‌ಒಯು ಮಂಗಳೂರು ಪ್ರಾದೇಶಿಕ ನಿರ್ದೇಶಕ ಡಾ. ಬಸವರಾಜು, ರಥಬೀದಿ ಕಾಲೇಜು ಪ್ರಾಧ್ಯಾಪಕ ನಾಗರಾಜ್ ಉಪಸ್ಥಿತರಿದ್ದರು.

ಶುಲ್ಕ ಪಾವತಿಗೆ ಇಎಂಐ ಅವಕಾಶ

ವಿವಿಯಲ್ಲಿ ಇದೇ ಮೊದಲ ಬಾರಿಗೆ ಶುಲ್ಕ ಪಾವತಿಗೆ ಸಂಬಂಧಿಸಿ ಇಎಂಐಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಆಟೋ ಮತ್ತು ಕ್ಯಾಬ್ ಚಾಲಕರ ಮಕ್ಕಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತಿದೆ. ಆನ್‌ಲೈನ್ ಮೂಲಕ ಇ ಲರ್ನಿಂಗ್ ಮೆಟೀರಿಯಲ್ ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ. ೧೫ ರಿಯಾಯಿತಿ ನೀಡಲಾಗುತ್ತಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಪ್ರವೇಶಾತಿ ಕಲ್ಪಿಸಲಾಗಿದೆ. ಕೊರೋನಾ ರೋಗದಲ್ಲಿ ತಂದೆ- ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಪ್ರವೇಶಾತಿ ಒದಗಿಸಲಾಗುತ್ತಿದೆ.

ಪ್ರೊ. ಎಸ್. ವಿದ್ಯಾಶಂಕರ್, ಕುಲಪತಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News