ಸಿಎನ್‌ಜಿ ಬೆಲೆ ಇಳಿಸಲು ಕಾರ್ಪೊರೇಟ್ ಕಚೇರಿಗೆ ಪತ್ರ: ದ.ಕ.ಜಿಲ್ಲಾಧಿಕಾರಿ ರಾಜೇಂದ್ರ

Update: 2022-06-27 15:53 GMT

ಮಂಗಳೂರು : ಪರಿಸರ ಸ್ನೇಹಿ ಇಂಧನ (ಸಿಎನ್‌ಜಿ)ದ ಬೆಲೆಯನ್ನು ಆದಷ್ಟು ಇಳಿಕೆ ಮಾಡುವಂತೆ ಕೋರಿ ಸಂಸದರು ಹಾಗೂ ಜಿಲ್ಲಾಧಿಕಾರಿಯ ಕಚೇರಿಯಿಂದ ಪತ್ರ ಮೂಲಕ ಸಂಬಂಧಿಸಿದ ಕಾರ್ಪೊರೇಟ್ ಕಚೇರಿಗೆ ಮನವಿ ಸಲ್ಲಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

ದ.ಕ. ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಸೋಮವಾರ ನಡೆದ ಸಿಎನ್‌ಜಿ ಇಂಧನ ದರ ಪರಿಷ್ಕರಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಿಎನ್‌ಜಿ ಇಂಧನದ ಬೆಲೆ ಹೆಚ್ಚಳವಾಗಿದ್ದು, ದರವನ್ನು ಕಡಿಮೆ ಮಾಡುವಂತೆ ಸಿಎನ್‌ಜಿ ಗ್ಯಾಸ್ ಬಳಕೆದಾರರು ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಯಿಸಿದ ಡಿಸಿ ಸಿಎನ್‌ಜಿ ಇಂಧನದ ಬೆಲೆ ಪರಿಷ್ಕರಣೆ ಸಂಬಂಧಿಸಿದ ಕಾರ್ಪೋರೇಟ್ ಕಚೇರಿ ವ್ಯಾಪ್ತಿಗೆ ಒಳಪಡುತ್ತದೆ. ಆದ ಕಾರಣ ಜಿಲ್ಲೆಯ ಸಂಸದರು ಹಾಗೂ ಜಿಲ್ಲಾಧಿಕಾರಿಯ ಕಚೇರಿಯಿಂದ ಪತ್ರ ಬರೆದು ದರವನ್ನು ಪರಿಷ್ಕರಿಸುವಂತೆ ಕೋರಲಾಗುವುದು. ಗೇಲ್ ಇಂಡಿಯಾ ವ್ಯಾಪ್ತಿಗೆ ಅದು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯ ಸಿಎನ್‌ಜಿ ಬಂಕ್‌ಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡುವಂತೆ ಸಂಸದರ ಅಧ್ಯಕ್ಷತೆಯಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ., ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ. ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ.ಗಳ ಡಿಜಿಎಂಗಳೊಂದಿಗೆ ಸಭೆ ನಡೆಸಲಾಗುವುದು.

ಆಟೋ, ಕಾರು, ಟ್ರಕ್, ಬಸ್ ಸೇರಿದಂತೆ ಹಲವು ಸಿಎನ್‌ಜಿ ವಾಹನಗಳಿಗೆ ಗ್ರಾಹಕರು ಹೆಚ್ಚಾದ ಕಾರಣ ಅವರ ಅನುಕೂಲಕ್ಕಾಗಿ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಕಡ್ಡಾಯವಾಗಿ ಬಂಕ್‌ಗಳನ್ನು ತೆರೆದು, ಹಸಿರು ಇಂಧನವನ್ನು ಪೂರೈಸುವಂತೆ ಡಿಸಿ ತಾಕೀತು ಮಾಡಿದರು. ಅಲ್ಲದೆ ಸಮಯ ಉಲ್ಲಂಘಿಸಿದರೆ ಅಗತ್ಯ ವಸ್ತುಗಳ ಕಾಯ್ದೆಯಡಿ  ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.

ಗೇಲ್‌ ಇಂಡಿಯಾದಿಂದ ಮುಂದಿನ ಒಂದರೆಡು ವರ್ಷದಲ್ಲಿ ಜಿಲ್ಲೆಯಲ್ಲಿ ೧೦೦ ಸಿಎನ್‌ಜಿ ಇಂಧನ ಕೇಂದ್ರಗಳನ್ನು ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ಇದೀಗ ೧೦ ಸಿಎನ್‌ಜಿ ಇಂಧನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮುಂಬರುವ ದಿನಗಳಿಲ್ಲಿ ನೂತನವಾಗಿ ೩ ಕೇಂದ್ರಗಳು ಆರಂಭವಾಗಲಿವೆ ಎಂದರು.

ಗೇಲ್ ಇಂಡಿಯಾದ ಜನರಲ್ ಮ್ಯಾನೇಜರ್ ಯು.ಸಿ.ಸಿಂಗ್, ಡಿಜಿಎಂ ಪಿ.ಜಿ. ಜಾಯ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರಮೇಶ್ ಮಂಜೇಶ್ ವರ್ಣೇಕರ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಆಯಿಲ್ ಕಾರ್ಪೋರೇಷನ್ ಕಂಪನಿಗಳ ಹಿರಿಯ ಅಧಿಕಾರಿಗಳು, ಮಂಗಳೂರು ನಾಗರಿಕ ಸಮಿತಿಯ ಅಧ್ಯಕ್ಷ ಸುಭಾಷ್‌ಚಂದ್ರ ಶೆಟ್ಟಿ, ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಜಿಲ್ಲಾ ಸಿಎನ್‌ಜಿ ಬಳಕೆದಾರರ ಸಂಘದ ಸಂಚಾಲಕ ಶ್ರೀನಾಥ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News