ಸಚಿವ ಕೋಟರಿಂದ ವಿಶ್ವಕರ್ಮ ಸಮಾಜ ಒಡೆಯಲು ಹುನ್ನಾರ: ವಿಶ್ವಕರ್ಮ ಮಹಾಸಭಾ ಆರೋಪ

Update: 2022-06-27 16:14 GMT
ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ : ಯಾರದೋ ಪಿತೂರಿಯಿಂದ ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವಿಶ್ವಕರ್ಮ ಸಮಾಜವನ್ನು ಒಡೆಯಲು ಹುನ್ನಾರ ನಡೆಸುತಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಉಡುಪಿ ಜಿಲ್ಲೆ ಆರೋಪಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾ ಉಡುಪಿ ಜಿಲ್ಲಾಧ್ಯಕ್ಷ ನೇರಂಬಳ್ಳಿ ರಮೇಶ್ ಆಚಾರ್, ವಿಧಾನಪರಿಷತ್ ಸದಸ್ಯರಾದ ಕೆ.ಪಿ.ನಂಜುಂಡಿ ಅವರು ವಿಶ್ವಕರ್ಮ ಸಮಾಜಕ್ಕೆ ಸಮರ್ಥ ನಾಯಕತ್ವವನ್ನು ನೀಡುತಿದ್ದು, ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಅವರನ್ನು ಸಂಪೂರ್ಣವಾಗಿ ಮೂಲೆಗುಂಪಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.

ಕೆ.ಪಿ.ನಂಜುಂಡಿ ಅವರ ಪ್ರಯತ್ನದಿಂದ ಪ್ರಾರಂಭಗೊಂಡ ವಿಶ್ವಕರ್ಮ ಅಭಿವೃದ್ಧಿ ನಿಗಮದ ಈಗಿನ ಅಧ್ಯಕ್ಷರಾದ ಬಾಬು ಪತ್ತಾರ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿದ್ದು, ಎಸಿಬಿ ವಿಚಾರಣೆಗೆ ಗುರಿಯಾಗಿದ್ದಾರೆ. ಆದರೆ  ಸಚಿವ ಕೋಟ ಅವರು ಬಾಬು ಪತ್ತಾರ ಅವರನ್ನು ರಕ್ಷಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ನಾವು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದರೂ ಅದನ್ನು ನಿರ್ಲಕ್ಷಿಸಿ, ಸಮಾಜದ ಕೆಲವೇ ಕೆಲವು ಸ್ವಾಮೀಜಿಗಳಿಗೆ ಬಾಬು ಪತ್ತಾರ ಮೂಲಕ ಮಠಗಳಿಗೆ ಅನುದಾನದ ಆಮಿಷ ಒಡ್ಡಿ, ಬೆಂಗಳೂರಿನಲ್ಲಿ ಒಂದು ವರ್ಗದ ಸಭೆ ನಡೆಸಿ ಸಮಾಜಕ್ಕೆ ಮುಜುಗುರ ತಂದಿದ್ದಾರೆ ಎಂದು ರಮೇಶ್ ಆಚಾರ್ ಹೇಳಿದ್ದಾರೆ.

ವಿಶ್ವಕರ್ಮ ಸಮಾಜ 40 ಸಮುದಾಯಗಳನ್ನು ಹೊಂದಿದ್ದು ಅವುಗಳಲ್ಲಿ ಒಂದನ್ನು ಮಾತ್ರ ಸಭೆಗೆ ಕರೆದು ಉಳಿದ 39 ಸಮುದಾಯಗಳಿಗೆ ನೋವನ್ನುಂಟು ಮಾಡಿದ್ದಾರೆ. ಕೆ.ಪಿ.ನಂಜುಂಡಿ ಅವರಿಗೆ ಆಹ್ವಾನ ನೀಡದೇ, ಗುಟ್ಟಾಗಿ ಸಭೆ ನಡೆಸಿ ಸಮಾಜಕ್ಕೆ ಅನ್ಯಾಯವೆಸಗಿದ್ದಾರೆ. ಈ ಮೂಲಕ ಸಮಾಜವನ್ನು ಒಡೆಯುವ ಸಚಿವ ಕೋಟ ಅವರ ಪ್ರಯತ್ನವನ್ನು ನಾವು ಖಂಡಿಸುತ್ತೇವೆ ಎಂದ ರಮೇಶ್ ಆಚಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಮಧ್ಯಪ್ರವೇಶಿಸಿ ಸಚಿವರಿಗೆ ತಿಳಿ ಹೇಳಬೇಕು ಎಂದರು.

ಕೋಟ ಅವರು ತಮ್ಮ ಪ್ರಯತ್ನವನ್ನು ಮುಂದುವರಿಸಿದರೆ, ಅವರ ವಿರುದ್ಧ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ನೇರಂಬಳ್ಳಿ ರಮೇಶ್ ಆಚಾರ್ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಗೌರವಾಧ್ಯಕ್ಷ ಗಂಗಾಧರ ಆಚಾರ್ ಉದ್ದಲ್‌ಗುಡ್ಡೆ, ಯುವ ಘಟಕದ ಅಧ್ಯಕ್ಷ ಕೋಟ ರಾಮಕೃಷ್ಣ ಆಚಾರ್, ಮಹಿಳಾ ಘಟಕದ ಅಧ್ಯಕ್ಷೆ ರುಕ್ಮಿಣಿ ರಮೇಶ್ ಆಚಾರ್, ರೋಷನ್ ಆಚಾರ್ ಕೋಟ ಹಾಗೂ ಬೈಂದೂರು ವಿಶ್ವಕರ್ಮ ಸಂಘದ ಅಧ್ಯಕ್ಷ ನಾರಾಯಣ ಆಚಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News