ಜಿ7 ನಾಯಕರಿಂದ 600 ಬಿಲಿಯನ್ ಡಾಲರ್ ಯೋಜನೆ ಅನಾವರಣ

Update: 2022-06-27 17:05 GMT

ಎಲ್ಮಾವ್(ಜರ್ಮನಿ),ಜೂ.27: ಚೀನಾದ ಬೆಲ್ಟ್ ಆ್ಯಂಡ್ ರೋಡ್ ಉಪಕ್ರಮ (ಬಿಆರ್ಎ)ಕ್ಕೆ ಪ್ರತಿಸ್ಪರ್ಧಿಯಾಗಿ ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಪಾರದರ್ಶಕವಾದ ಮತ್ತು ಚಿತ್ರಣವನ್ನೇ ಬದಲಿಸಬಲ್ಲ ಮೂಲಸೌಕರ್ಯ ಯೋಜನೆಗಳನ್ನು ತಲುಪಿಸಲು 2027ರ ವೇಳೆಗೆ 600 ಶತಕೋಟಿ ಡಾ.ಗಳ ನಿಧಿಯನ್ನು ಕ್ರೋಡೀಕರಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮತ್ತು ಇತರ ಜಿ7 ನಾಯಕರು ಅನಾವರಣಗೊಳಿಸಿದ್ದಾರೆ.

ಇಲ್ಲಿ ಜಿ7 ಶೃಂಗಸಭೆಯಲ್ಲಿ ರವಿವಾರ ಅನಾವರಣಗೊಳಿಸಲಾದ ‘ಜಾಗತಿಕ ಮೂಲಸೌಕರ್ಯ ಮತ್ತು ಹೂಡಿಕೆಗಾಗಿ ಪಾಲುದಾರಿಕೆ (ಪಿಜಿಐಐ)’ಯು ಕಳೆದ ವರ್ಷ ಇಂಗ್ಲಂಡ್‌ನಲ್ಲಿ ನಡೆದಿದ್ದ ಜಿ7 ಮಾತುಕತೆಗಳಲ್ಲಿ ಪ್ರಕಟಿಸಲಾಗಿದ್ದ ಯೋಜನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

 ಜಿ7 ಗುಂಪಿನ ನೂತನ ಜಾಗತಿಕ ಮೂಲಸೌಕರ್ಯ ಪಾಲುದಾರಿಕೆ ಯೋಜನೆಯು ನೆರವು ಅಲ್ಲ,ದಾನವೂ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ ಬೈಡೆನ್,‘ಇದು ಅಮೆರಿಕದ ಜನರು ಸೇರಿದಂತೆ ಪ್ರತಿಯೊಬ್ಬರಿಗೂ ಪ್ರತಿಫಲವನ್ನು ನೀಡುವ ಹೂಡಿಕೆಯಾಗಿದೆ ಮತ್ತು ನಮ್ಮೆಲ್ಲರ ಆರ್ಥಿಕತೆಗಳನ್ನು ಹೆಚ್ಚಿಸಲಿದೆ ’ಎಂದು ಹೇಳಿದ್ದಾರೆ.
ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಬಹು ಲ.ಕೋ.ಡಾಲರ್‌ಗಳ ಬಿಆರ್‌ಐ ಹಲವಾರು ಅಭಿವೃದ್ಧಿಶೀಲ ದೇಶಗಳನ್ನು ಅತಿಯಾದ ಸಾಲದ ಸುಳಿಯಲ್ಲಿ ಸಿಲುಕಿಸಿದ್ದಕ್ಕಾಗಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಪಿಜಿಐಐ ಅನ್ನು ಚೀನಾದ ಬಿಆರ್‌ಐ ಅನ್ನು ಎದುರಿಸಲು ಮಾರ್ಗೋಪಾಯ ಎಂದು ಶ್ಲಾಘಿಸಲಾಗಿದೆ.
2013ರಲ್ಲಿ ಆರಂಭಗೊಂಡಿದ್ದ ಬಿಆರ್‌ಐ ಬಂದರುಗಳು,ರಸ್ತೆಗಳು ಮತ್ತು ಸೇತುವೆಗಳಂತಹ ಮೂಲಸೌಕರ್ಯ ನಿರ್ಮಾಣಕ್ಕಾಗಿ ಅಭಿವೃದ್ಧಿಶೀಲ ದೇಶಗಳಿಗೆ ಹಣಕಾಸನ್ನು ಒದಗಿಸುತ್ತದೆ. ಇದು ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸಿದೆಯಾದರೂ ‘ಸುಲಿಗೆಯ ಸಾಲ’ಗಳನ್ನು ನೀಡುವ ಸಾಧನವಾಗಿದೆ ಎಂದು ಟೀಕೆಗೊಳಗಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾದಂತಹ ದೇಶಗಳು ತಮ್ಮ ಸಾಲವನ್ನು ಮರುಪಾವತಿಸಲು ವಿಫಲಗೊಂಡರೆ ತಮ್ಮ ಪ್ರಮುಖ ಸ್ವತ್ತುಗಳನ್ನು ಚೀನಾಕ್ಕೆ ಬಿಟ್ಟುಕೊಡುವುದನ್ನು ಇದು ಅನಿವಾರ್ಯವಾಗಿಸುತ್ತದೆ.
ಪಿಜಿಐಐ ಯೋಜನೆಯು ಪ್ರಜಾಪ್ರಭುತ್ವಗಳೊಂದಿಗೆ ಪಾಲುದಾರಿಕೆಯ ಸದೃಢ ಲಾಭಗಳನ್ನು ಪಡೆಯಲು ದೇಶಗಳಿಗೆ ಅವಕಾಶವನ್ನು ಕಲ್ಪಿಸುತ್ತದೆ ಎಂದು ಬೈಡೆನ್ ಹೇಳಿದ್ದಾರೆ.

ಪಿಜಿಐಐ ಅಡಿ ಅಮೆರಿಕದ ಅಂತರರಾಷ್ಟ್ರೀಯ ಹಣಕಾಸು ನಿಗಮವು ಕೃಷಿ ತಂತ್ರಜ್ಞಾನ ಮತ್ತು ಹವಾಮಾನ ಸುಸ್ಥಿರತೆ ನಿಧಿ 3ರಲ್ಲಿ 30 ಮಿ.ಡಾ.ವರೆಗೆ ಹೂಡಿಕೆ ಮಾಡಲಿದೆ ಎಂದು ಶ್ವೇತಭವನದ ಯೋಜನಾ ವರದಿಯಲ್ಲಿ ಹೇಳಲಾಗಿದೆ. ಇದು ಭಾರತದಲ್ಲಿ ಕೃಷಿ,ಆಹಾರ ವ್ಯವಸ್ಥೆಗಳು, ಹವಾಮಾನ ಮತ್ತು ಗ್ರಾಮೀಣ ಆರ್ಥಿಕತೆಯ ಭವಿಷ್ಯ ನಿರ್ಮಾಣಗಳಲ್ಲಿ ಹೂಡಿಕೆ ಮಾಡುವ ಬಂಡವಾಳ ನಿಧಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News