ಪಾಕ್ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾಗೆ ಸೌದಿ ಅರೆಬಿಯಾದ ಪ್ರತಿಷ್ಟಿತ ಪದಕದ ಗೌರವ

Update: 2022-06-27 17:13 GMT

 ರಿಯಾದ್, ಜೂ.27: ಪಾಕಿಸ್ತಾನ ಮತ್ತು ಸೌದಿ ಅರೆಬಿಯಾದ ನಡುವಿನ ರಕ್ಷಣಾ ಸಹಕಾರಕ್ಕೆ ನೀಡಿದ ಕೊಡುಗೆಗಾಗಿ ಪಾಕ್ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೆದ್ ಬಾಜ್ವಾಗೆ ಸೌದಿ ಅರೆಬಿಯಾದ ಪ್ರತಿಷ್ಟಿತ ‘ಕಿಂಗ್ ಅಬ್ದುಲ್ ಅಝೀಝ್’ ಪದಕದ ಗೌರವವನ್ನು ರವಿವಾರ ಪ್ರದಾನ ಮಾಡಲಾಗಿದೆ.

  ಸೌದಿ-ಪಾಕಿಸ್ತಾನ ನಡುವಿನ ಸ್ನೇಹ ಮತ್ತು ಜಂಟಿ ಸಹಕಾರ ಸಂಬಂಧಗಳನ್ನು ಅಭಿವೃದ್ಧಿಪಡಿಸುವ ಮತ್ತು ಬಲಪಡಿಸುವ ನಿಟ್ಟಿನಲ್ಲಿ ನಡೆಸಿರುವ ವಿಶಿಷ್ಟ ಪ್ರಯತ್ನಗಳಿಗಾಗಿ ಜನರಲ್ ಬಾಜ್ವಾಗೆ ಈ ಗೌರವ ನೀಡಲಾಗಿದೆ. ಸೌದಿ ಅರೆಬಿಯಾಕ್ಕೆ ಅವರು ಅಧಿಕೃತ ಭೇಟಿ ನೀಡಿದ ಸಂದರ್ಭ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಈ ಪದಕ ಪ್ರದಾನ ಮಾಡಿದರು.

  ಸೌದಿ ರಾಜಕುಮಾರ ಖಾಲಿದ್ ಬಿನ್ ಸಲ್ಮಾನ್ ಬಿನ್ ಅಬ್ದುಲಝೀರ್, ರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫಯಾದ್ ಅಲ್-ರುವಾಲಿ ಹಾಗೂ ಎರಡೂ ದೇಶಗಳ ಹಿರಿಯ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಬಳಿಕ ಯುವರಾಜರನ್ನು ಜನರಲ್ ಬಾಜ್ವಾ ಭೇಟಿಯಾಗಿ ಮಾತುಕತೆ ನಡೆಸಿದ್ದು, ಪರಸ್ಪರ ಹಿತಾಸಕ್ತಿ, ದ್ವಿಪಕ್ಷೀಯ ಭದ್ರತೆ ಮ ಭದ್ರತಾ ಸಹಕಾರ ಮತ್ತು ಪ್ರಾದೇಶಿಕ ಶಾಂತಿ, ಸ್ಥಿರತೆಯ ಬಗ್ಗೆ ಚರ್ಚಿಸಿದರು ಜಂಟಿ ತರಬೇತಿ, ವಾಯುರಕ್ಷಣೆ, ಭಯೋತ್ಪಾದನೆ ನಿಗ್ರಹ, ಸಂವಹನ ಕ್ಷೇತ್ರಗಳಲ್ಲಿ ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಒಪ್ಪಿಕೊಂಡರು ಎಂದು ಪಾಕಿಸ್ತಾನದ ಸೇನೆಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News