ಸುರತ್ಕಲ್ : ಮದರಸದಿಂದ ಮನೆಗೆ ತೆರಳುತ್ತಿದ್ದ ಬಾಲಕನಿಗೆ ದುಷ್ಕರ್ಮಿಗಳಿಂದ ಹಲ್ಲೆ

Update: 2022-06-28 12:29 GMT
ಶಯಾನ್

ಸುರತ್ಕಲ್ : ಮದರಸ ಬಿಟ್ಟು ಮನೆಗೆ ತೆರಳುತ್ತಿದ್ದ ಬಾಲಕನೊಬ್ಬನಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಾಪುರ ಆರನೇ ಬ್ಲಾಕ್ ನಲ್ಲಿ ಸೋಮವಾರ ರಾತ್ರಿ ವರದಿಯಾಗಿದೆ.

ಹಲ್ಲೆಗೊಳಗಾದ ಬಾಲಕನನ್ನು ಕೃಷ್ಣಾಪುರ ನಿವಾಸಿ ಅಬ್ದುಲ್ ಉಮರ್ ಎಂಬವರ ಪುತ್ರ, ಆರನೇ ಬ್ಲಾಕ್ ತೌಯಿಬಾ ಮಸೀದಿಯ 6ನೇ ತರಗತಿಯ ವಿದ್ಯಾರ್ಥಿ ಶಯಾನ್ ಎಂದು ತಿಳಿದು ಬಂದಿದೆ.

ಬಾಲಕ ಶಯಾನ್ ಮದರಸ ತರಗತಿ ಮುಗಿಸಿ ಚಕ್ರವರ್ತಿ ಮೈದಾನವಾಗಿ ಮನೆಗೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬೈಕ್ ನಲ್ಲೇ ಬಾಲಕನ್ನು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಾಲಕ ಧರಿಸಿದ್ದ ಮದರಸದ ಸಮವಸ್ತ್ರ ಹರಿದ ಕಾರಣ ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ಹಲ್ಲೆ ಮಾಡಿದವರ ಕೈಯಲ್ಲಿ ನೂಲು ಇದ್ದು ನಾಮ ಹಾಕಿದ್ದರು ಅಲ್ಲದೆ ಮಾಸ್ಕ್ ಧರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಹಲ್ಲೆಗೊಳಗಾದ ವಿದ್ಯಾರ್ಥಿ ಶಯಾನ್ ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.‌

ಈ ಸಂಬಂಧ ಶಯಾನ್ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ಮುಂದಾಗಿದ್ದಾರೆ.

ನಾಗರಿಕರು, ಪೋಷಕರಲ್ಲಿ ಆತಂಕ

ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಈ ಪ್ರದೇಶ ಸೂಕ್ಷ್ಮ ಪ್ರದೇಶವಾಗಿದ್ದು ಸದ್ಯ ಶಾಂತಿಯಿಂದ ಜನರು ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದುಷ್ಕರ್ಮಿಗಳು ಮದರಸ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವುದು ಖಂಡನೀಯ. ಈ ಘಟನೆಯಿಂದ ಈ ಪ್ರದೇಶದ ಪೋಷಕರು ಆತಂಕಕ್ಕೀಡಾಗಿದ್ದಾರೆ.

ಬಾಲಕನ ಮೇಲೆ ಹಲ್ಲೆ ನಡೆಸಿ ಕೋಮುಗಲಭೆಗೆ ಯತ್ನಿಸುತ್ತಿರುವ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ ಕಾನೂನು ರೀತಿಯ ಕ್ರಮಕ್ಕೆ ಮುಂದಾಗಬೇಕೆಂದು ಸ್ಥಳೀಯರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News