ಇಂತಹ ಮಾತುಗಳು ಆತ್ಮವಂಚನೆಯಲ್ಲವೇ?

Update: 2022-06-28 02:48 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಜರ್ಮನಿಗೆ ಹೋಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಇದ್ದಕ್ಕಿದ್ದಂತೆ ಐವತ್ತು ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿಯ ನೆನಪಾಗಿದೆ. ಅಲ್ಲಿರುವ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುತ್ತಾ ಭಾರತದಲ್ಲಿ 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದನ್ನು ಪ್ರಸ್ತಾಪಿಸಿದ್ದಾರೆ. ‘‘ಆಗ ಪ್ರಜಾಪ್ರಭುತ್ವವನ್ನು ತುಳಿದು ಹಾಕುವ ಪ್ರಯತ್ನ ಮಾಡಲಾಗಿತ್ತು’’ ಎಂದು ಮಹಾ ಪ್ರಜಾಪ್ರಭುತ್ವವಾದಿಯಂತೆ ಜನರ ಹಕ್ಕುಗಳ ಬಗ್ಗೆ ಕಾಳಜಿ ತೋರಿಸಿದ್ದಾರೆ. ವಿದೇಶಕ್ಕೆ ಹೋದ ಪ್ರಧಾನಿ ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ. ಆದರೆ ಮೋದಿಯವರಿಗೆ ಮಾತಾಡಲು ವಿಷಯಗಳಿದ್ದಂತೆ ಕಾಣಲಿಲ್ಲ. ಹಾಗಾಗಿಯೇ ಹಳೆಯ ನೆನಪುಗಳನ್ನು ಕೆದಕಿದ್ದಾರೆ.

ಇಂದಿರಾ ಗಾಂಧಿ ಸರ್ವಾಧಿಕಾರಿಯಾಗಿದ್ದರು ಮತ್ತು ತಾನು ಮಹಾ ಪ್ರಜಾಪ್ರಭುತ್ವವಾದಿ ಎಂದು ತೋರಿಸಿಕೊಳ್ಳಲು ಹೊರಟಿದ್ದಾರೆ ಪ್ರಧಾನಿ. ಆದರೆ ಇಂದಿನ ಸಂಪರ್ಕ ಕ್ರಾಂತಿಯ ಯುಗದಲ್ಲಿ ಸತ್ಯವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ ಎಂಬುದನ್ನು ಅವರು ತಿಳಿದುಕೊಳ್ಳಬೇಕಾಗಿತ್ತು.

ನಿಜ, ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದರು. ಅದು ಘೋಷಿತ ತುರ್ತು ಪರಿಸ್ಥಿತಿ. ಆದರೆ ಈಗ ಭಾರತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. 1975ರ ಜೂನ್ 25ರಂದು ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ ಅವರು 1977ರ ಮಾರ್ಚ್ 21ರಂದು ಅದನ್ನು ವಾಪಸ್ ಪಡೆದು ಬಂಧಿಸಲ್ಪಟ್ಟ ನಾಯಕರನ್ನು ಬಿಡುಗಡೆ ಮಾಡಿದ್ದರು. ಮುಂದೆ 1977ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತು ಕೇಂದ್ರದಲ್ಲಿ ಮೊದಲ ಬಾರಿ ಮೊರಾರ್ಜಿ ದೇಸಾಯಿ ನೇತೃತ್ವದ ಪ್ರತಿಪಕ್ಷ ಸರಕಾರ ಅಸ್ತಿತ್ವಕ್ಕೆ ಬಂತು. ಆದರೆ ಈಗ ಘೋಷಿಸಲ್ಪಟ್ಟಿರುವ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ಪ್ರತಿಪಕ್ಷಗಳನ್ನು ಸಂಪೂರ್ಣ ಮೂಲೆ ಗುಂಪು ಮಾಡಲಾಗಿದೆ. ಭಿನ್ನಾಭಿಪ್ರಾಯ ಇರುವ ಬುದ್ಧಿಜೀವಿಗಳನ್ನು, ಲೇಖಕರನ್ನು ಜೈಲಿಗೆ ತಳ್ಳಲಾಗಿದೆ. ಯಾವುದೇ ರಾಜ್ಯದಲ್ಲಿ ಪ್ರತಿಪಕ್ಷಗಳು ಸರಕಾರ ರಚಿಸಿದರೆ ಅಲ್ಲಿ ಪಕ್ಷಾಂತರಕ್ಕೆ ಪ್ರಚೋದಿಸುವುದು ಮಾತ್ರವಲ್ಲ, ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂಲಕ ಜನಪ್ರತಿನಿಧಿಗಳಿಗೆ ಬೆದರಿಕೆ ಹಾಕಿ ಚುನಾಯಿತ ಸರಕಾರವನ್ನು ಉರುಳಿಸಲಾಗುತ್ತದೆ. ಮಾಧ್ಯಮಗಳನ್ನು ಸಂಪೂರ್ಣ ನಿಯಂತ್ರಣದಲ್ಲಿ ಇರಿಸಿಕೊಂಡು ಸರಕಾರದ ತಪ್ಪುನಡೆಗಳು, ಲೋಪ ದೋಷಗಳು ಬೆಳಕಿಗೆ ಬರದಂತೆ ಮಾಡಲಾಗುತ್ತದೆ.

ಈ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನದ ಸಕಲ ಅಂಗಾಂಗಗಳನ್ನು ಕತ್ತರಿಸಿ ಹಾಕುವ ಕೆಲಸ ಅತ್ಯಂತ ಜಾಣತನದಿಂದ ನಡೆದಿದೆ. ಶಾಸಕಾಂಗ, ಕಾರ್ಯಾಂಗಗಳು ಮಾತ್ರವಲ್ಲ ನ್ಯಾಯಾಂಗವೂ ಅಘೋಷಿತ ತುರ್ತು ಪರಿಸ್ಥಿತಿಯ ಅಡಿಯಲ್ಲಿ ಏದುಸಿರು ಬಿಡುತ್ತಿದೆ. ಪ್ರಭುತ್ವದ ಪರವಾಗಿ ತೀರ್ಪು ನೀಡಿದ ನ್ಯಾಯಾಧೀಶರು ನಿವೃತ್ತಿ ಹೊಂದಿದ ನಂತರ ರಾಜ್ಯಪಾಲರಾಗಿ, ರಾಜ್ಯಸಭೆಯ ಸದಸ್ಯರಾಗಿ ಪುನರ್ವಸತಿ ಎಂಬ ಹುಲ್ಲುಗಾವಲಿನಲ್ಲಿ ನೆಮ್ಮದಿಯಾಗಿದ್ದಾರೆ. ವೃತ್ತಿ ನಿಷ್ಠೆ ತೋರಿದ ಪೊಲೀಸ್ ಅಧಿಕಾರಿಗಳಾದ ಶ್ರೀಕುಮಾರ್ ಮತ್ತು ಸಂಜೀವ ಭಟ್ ಅಂತಹವರು ಜೈಲು ಪಾಲಾಗಿ ಯಾತನೆ ಅನುಭವಿಸುತ್ತಿದ್ದಾರೆ. ರಿಸರ್ವ್ ಬ್ಯಾಂಕ್ ಗವರ್ನರ್‌ಗಳು ರಾಜೀನಾಮೆ ಕೊಟ್ಟು ಹೋಗುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳಿಂದ ಸಂವಿಧಾನ ಬದಲಾವಣೆಯ ಮಾತುಗಳು ಕೇಳಿ ಬರುತ್ತಿವೆ. ಒಂದು ಸಮುದಾಯದ ಜನರನ್ನು ಕೊಚ್ಚಿ ಹಾಕಬೇಕೆಂದು ನಕಲಿ ಸನ್ಯಾಸಿಗಳು, ಆಳುವ ಪಕ್ಷದ ರಾಜಕಾರಣಿಗಳು ಬಹಿರಂಗವಾಗಿ ಕರೆ ಕೊಡುತ್ತಿದ್ದಾರೆ. ಐವತ್ತು ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿಯ ಬಗ್ಗೆ ಮಾತಾಡುವ ಮಹಾನುಭಾವರು ತಮ್ಮವರೇ ಹಿಂಸೆಗೆ ಪ್ರಚೋದನೆ ನೀಡುತ್ತಿರುವಾಗ ಜಾಣ ಮೌನ ತಾಳುತ್ತಾರೆ. ಇವರು ಬಾಯಿ ತೆರೆಯುವುದು ವಿದೇಶದಲ್ಲಿ ಮಾತ್ರ.

ಭಾರತದ ಜನಸಾಮಾನ್ಯರ ಬದುಕು ದಿನದಿಂದ ದಿನಕ್ಕೆ ಶೋಚನೀಯವಾಗುತ್ತಿದೆ.ಕೋವಿಡ್ ಕಾಲದಲ್ಲಿ ಕಳೆದುಕೊಂಡ ಕೆಲಸ ಮತ್ತೆ ಸಿಕ್ಕಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಎಂದು ಮೂಗಿಗೆ ಹಚ್ಚಿದ ತುಪ್ಪದ ವಾಸನೆಯೂ ದುರ್ಗಂಧ ಬೀರುತ್ತಿದೆ. ಕಾರ್ಮಿಕ ಕಾನೂನಿಗೆ ತಿದ್ದುಪಡಿ ತಂದು ಕಾರ್ಮಿಕರ ಹಕ್ಕುಗಳನ್ನು ಅಪಹರಣ ಮಾಡಲಾಗುತ್ತಿದೆ. ಇಂತಹ ವಿಷಯಗಳ ಬಗ್ಗೆ ಜನತೆ ಧ್ವನಿಯೆತ್ತದಂತೆ ದಿಕ್ಕು ತಪ್ಪಿಸಲು ಹಿಜಾಬ್, ಲವ್ ಜಿಹಾದ್, ಮತಾಂತರ, ಅಲ್ಪಸಂಖ್ಯಾತರಿಗೆ ಜಾತ್ರೆ ಉತ್ಸವಗಳಲ್ಲಿ ವ್ಯಾಪಾರ ನಿಷೇಧದಂತಹ ಕುಚೇಷ್ಟೆಗಳನ್ನು ಮಾಡಲಾಗುತ್ತಿದೆ. ಇಷ್ಟೆಲ್ಲ ನಡೆದರೂ ಪ್ರಧಾನಿ ಬಾಯಿ ತೆರೆಯುತ್ತಿಲ್ಲ. ಇವೆಲ್ಲ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರದೆಯೇ ನಡೆಸಲಾಗುತ್ತಿರುವ ಅತಿರೇಕಗಳು.

ದೇಶದಲ್ಲಿ ಅಸಮಾನತೆಯ ಅಟ್ಟಹಾಸ ಮಿತಿ ಮೀರಿದೆ. ಕೋವಿಡ್ ಕಾಲದಲ್ಲೂ ಕಾರ್ಪೊರೇಟ್ ಬಂಡವಾಳಿಗರು ಸಾವಿರಾರು ಕೋಟಿ ರೂಪಾಯಿ ಗಳಿಸಿದರು. ಬಡವರು ಕಡು ಬಡವರಾಗಿ ಹಸಿವೆಯ ಕೂಪಕ್ಕೆ ತಳ್ಳಲ್ಪಟ್ಟರು. ಒಂದೆಡೆ ಅಂಬಾನಿ, ಅದಾನಿಗಳ ಸಂಪತ್ತು ನೂರಾರು ಪಟ್ಟು ಹೆಚ್ಚಾಗಿದೆ. ಇನ್ನೊಂದೆಡೆ ಭಾರತ ಸಾಲದ ಕೂಪದಲ್ಲಿ ಬಿದ್ದಿದೆ.ಕೆಲವು ಅಧಿಕೃತ ಅಂಕಿ ಅಂಶಗಳ ಪ್ರಕಾರ ಕೇಂದ್ರ ಸರಕಾರದ ಸಾಲ 2014 ರಲ್ಲಿ 53.11 ಲಕ್ಷ ಕೋಟಿ ರೂಪಾಯಿ. ಇದು ಸ್ವಾತಂತ್ರಾನಂತರದ ಒಟ್ಟು ಎಪ್ಪತ್ತು ವರ್ಷಗಳ ಸಾಲ. ಈಗ ಅಂದರೆ 2022ರಲ್ಲಿ ಮಾರ್ಚ್ 31ರ ವೇಳೆಗೆ ಈ ಸಾಲದ ಪ್ರಮಾಣ 139.36 ಲಕ್ಷ ಕೋಟಿ ರೂಪಾಯಿ ತಲುಪಿದೆ. 2023 ಅಂತ್ಯದ ವೇಳೆಗೆ ಇದು 155 ಲಕ್ಷ ಕೋಟಿ ರೂಪಾಯಿ ಆಗಲಿದೆ. ಇದನ್ನೆಲ್ಲ ಪ್ರಶ್ನಿಸಿದರೆ ದೇಶ ದ್ರೋಹದ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ. ‘ಅರ್ಬನ್ ನಕ್ಸಲ್’ ಎಂದು ಜೈಲು ಪಾಲಾಗಬೇಕಾಗುತ್ತದೆ. ದೇಶದೊಳಗೆ ಕಾರ್ಯಕರ್ತರನ್ನು ಮಸೀದಿ, ದರ್ಗಾಗಳಲ್ಲಿ ಶಿವಲಿಂಗ ಹುಡುಕಲು ಬಿಟ್ಟು, ಪ್ರತಿರೋಧದ ಧ್ವನಿಗಳ ಹುಟ್ಟಡಗಿಸಿ ವಿದೇಶಕ್ಕೆ ಹೋಗಿ ಮಹಾ ಸಂಪನ್ನರಂತೆ ಹಿಂದಿನ ತುರ್ತು ಪರಿಸ್ಥಿತಿಯ ಬಗ್ಗೆ ಮಾತಾಡುವುದು ಆತ್ಮವಂಚನೆಯಲ್ಲವೇ ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News