ಬೆಳ್ತಂಗಡಿ: ಕಾಡಾನೆಗಳ ದಾಳಿ; ಅಪಾರ ಕೃಷಿಹಾನಿ

Update: 2022-06-28 14:11 GMT

ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದ ಮಜಲು ಪರಿಸರದಲ್ಲಿ ಕಾಡಾನೆಗಳು ದಾಳಿ ನಡೆಸಿದ್ದು ಕೃಷಿಗೆ ಹಾನಿಯುಂಟು ಮಾಡಿದೆ. ಇಲ್ಲಿನ ನಿವಾಸಿಗಳಾದ ಅನಂತರಾವ್, ಪ್ರಕಾಶ್ ನಾರಾಯಣ ರಾವ್, ರವೀಂದ್ರ ರಾವ್ ಇವರ ಕೃಷಿ ತೋಟಗಳಿಗೆ ಸೋಮವಾರ ರಾತ್ರಿ ದಾಳಿ ನಡೆಸಿದ ಕಾಡಾನೆಗಳು ಸುಮಾರು 130 ಅಡಕೆ ಮರ, 6 ತೆಂಗಿನ ಮರ ಹಾಗೂ ನೂರಾರು ಬಾಳೆಗಿಡಗಳನ್ನು ಧ್ವಂಸಮಾಡಿವೆ.
ಮರಿಯಾನೆ ಸಹಿತ ಆರರಿಂದ ಏಳು ಕಾಡಾನೆಗಳು ತೋಟಕ್ಕೆ ಬಂದಿರುವ ಶಂಕೆ ಸ್ಥಳೀಯರಿಂದ ವ್ಯಕ್ತವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಉಪ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

ಲಕ್ಷಾಂತರ ರೂ.ಹಾನಿ

ಈ ವರ್ಷ ಜನವರಿ ಬಳಿಕ ಇವರ ಕೃಷಿ ತೋಟಗಳಿಗೆ ಒಂಟಿಸಲಗ, ಹಿಂಡು ಸಹಿತ 10ಕ್ಕಿಂತ ಅಧಿಕ ಬಾರಿ ಆನೆಗಳು ದಾಳಿ ಇಟ್ಟಿದ್ದು ಒಂದು ಸಾವಿರದಷ್ಟು ಅಡಕೆ ಮರ, 50 ತೆಂಗಿನಮರ, ಅಪಾರ ಪ್ರಮಾಣದ ಬಾಳೆ ಕೃಷಿ ನಾಶವಾಗಿ ಲಕ್ಷಾಂತರ ರೂ. ಮೌಲ್ಯದ ಹಾನಿ ಉಂಟಾಗಿದೆ.

ಈ ಪ್ರದೇಶದಲ್ಲಿ ಆನೆ ದಾಳಿ ತಡೆಗಟ್ಟಲು ಕೃಷಿಕರು ಮುಂಜಾಗ್ರತೆ ಕೈಗೊಂಡರೂ ನಿರಂತರ ದಾಳಿ ಮುಂದುವರೆಯುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಇಲ್ಲಿನ ಕೃಷಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News