ಉಡುಪಿ: ಪೋಷಕರಿಂದ ಹಣ ವಸೂಲಿಗೆ ಅಪಹರಣ ನಾಟಕವಾಡಿದ ಮಗನ ಬಂಧನ!

Update: 2022-06-28 15:00 GMT

ಉಡುಪಿ, ಜೂ.28: ಮೋಜು ಮಸ್ತಿಗಾಗಿ ಪೋಷಕರಿಂದಲೇ ಹಣ ವಸೂಲಿ ಮಾಡಲು ಮಗ ತನ್ನ ಅಪಹರಣದ ನಾಟಕವಾಡಿದ್ದು, ಇದನ್ನು ಬೇಧಿಸಿರುವ ಪೊಲೀಸರು ಆರೋಪಿ ಮಗನನ್ನು ಬಂಧಿಸಿದ್ದಾರೆ. ಈ ಅಪರೂಪದ ಘಟನೆ ಉಡುಪಿಯಲ್ಲಿ ಜೂ.27ರಂದು ನಡೆದಿದೆ.

ವರುಣ್ ನಾಯಕ್(24) ಬಂಧಿತ ಆರೋಪಿ. ಈತ ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಸರಕಾರಿ ಶಾಲೆಯ ಶಿಕ್ಷಕಿ ದಂಪತಿ ಪುತ್ರ. ತನ್ನ ಮಗನನ್ನು ಯಾರೋ ಅಪಹರಣ ಮಾಡಿ ಐದು ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆಂದು ವರುಣ್ ತಂದೆ ತಾಯಿ ಜೂ.26ರಂದು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಅಪಹರಣ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೆತ್ತಿಕೊಂಡರು.

ಅಪಹರಣಕ್ಕೆ ಒಳಗಾದ ವರುಣ್ ಪತ್ತೆಗೆ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ವಿಶೇಷ ತಂಡವನ್ನು ರಚಿಸಿದ್ದರು. ಆತನ ಮೊಬೈಲ್ ಟವರ್ ಲೋಕೆಶನ್ ಆಧಾರದ ಮೇಲೆ ಪೊಲೀಸ್ ಸಿಬ್ಬಂದಿ ರಾಜೇಶ್ ಮತ್ತು ಮಲ್ಲೇಶ್‌ರನ್ನು ಗೋವಾಕ್ಕೆ ಕಳುಹಿಸಿಕೊಟ್ಟಿದ್ದರು. ಇವರು ಗೋವಾ ರಾಜ್ಯದ ಪಣಜಿ ಠಾಣೆಯ ಪೊಲೀಸರ ಸಹಾಯದಿಂದ ಟವರ್ ಲೊಕೇಶನ್ ಸ್ಥಳಕ್ಕೆ ತೆರಳಿದಾಗ ಅಚ್ಚರಿ ಕಾದಿತ್ತು. ಅಪರಹಣಕ್ಕೆ ಒಳಗಾಗಿದ್ದ ಎಂದು ಹೇಳುತ್ತಿದ್ದ ವರುಣ್, ತನ್ನ ಗೆಳೆಯರೊಂದಿಗೆ ಕ್ಯಾಸಿನೋದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವುದು ಕಂಡು ಬಂತು. ಪೊಲೀಸರು ಕೂಡಲೇ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದು ತಂದು ವಿಚಾರಿಸಿದರು. ತಾನು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದು, ಸರಿಯಾದ ಕೆಲಸ ಇಲ್ಲದೇ ಮೋಜು, ಮಸ್ತಿ ಮತ್ತು ದುಶ್ಚಟಗಳಿಗೆ ಹಣ ಇಲ್ಲದೆ ಕಾರಣದಿಂದ ಮತ್ತು ತಂದೆತಾಯಿಯಿಂದ ಹಣ ಲಪಟಾಯಿಸುವುದಕ್ಕಾಗಿ ಅಪಹರಣದ ನಾಟಕ ಆಡಿದೆ ಎಂದು ವರುಣ್ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.

ತನ್ನದೇ ಮೊಬೈಲ್‌ನಿಂದ ತಾಯಿಯ ಮೊಬೈಲ್‌ಗೆ ಕರೆ ಮತ್ತು ಮೆಸೇಜ್ ಮಾಡಿ ಐದು ಲಕ್ಷ ರೂ. ಕೊಡದೇ ಇದ್ದಲ್ಲಿ, ನನ್ನನ್ನು ಇಲ್ಲೇ ಕೊಲೆ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಅಳುತ್ತ ಹೇಳಿಕೊಂಡಿದ್ದೇನೆ ಎಂದು ಆತ ಹೇಳಿಕೆ ನೀಡಿದ್ದಾನೆ. ಪೊಲೀಸರ ಸಮಯವನ್ನು ವ್ಯರ್ಥಗೊಳಿಸಿ, ಸಂದಿಗ್ಧ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ ತನ್ನ ತಂದೆ ತಾಯಿಯಿಂದ ಹಣ ಲಪಟಾಯಿಸಲು ಅಪಹರಣದ ನಾಟಕ ಮಾಡಿದ ವರುಣ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಬಂಧಿಸಿದರು. ನ್ಯಾಯಾಲಯಕ್ಕೆ ಹಾಜರು ಪಡಿಸಿದ ಆರೋಪಿಗೆ 15ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News