ಉಡುಪಿ: ಸಾಲ ನೀಡುವಲ್ಲಿ ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಬೇಕು; ಜಿಲ್ಲೆಯ ಬ್ಯಾಂಕುಗಳಿಗೆ ಸಿಇಓ ಪ್ರಸನ್ನ ಸೂಚನೆ

Update: 2022-06-28 15:02 GMT

ಉಡುಪಿ, ಜೂ.28: ಜಿಲ್ಲೆಯಲ್ಲಿರುವ ವಿವಿಧ ಬ್ಯಾಂಕುಗಳ ಶಾಖೆಗಳು ಸಾರ್ವಜನಿಕರಿಗೆ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರಾಯೋಜಿತ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಹೆಚ್ಚು ಮುತುವರ್ಜಿಯಿಂದ ಆರ್ಥಿಕ ನೆರವು, ಸಾಲ ನೀಡಲು ಮುಂದಾಗಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಎಚ್. ಸೂಚನೆಗಳನ್ನು ನೀಡಿದ್ದಾರೆ.

ಮಂಗಳವಾರ ಮಣಿಪಾಲದಲ್ಲಿರುವ ಜಿ.ಪಂ. ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್‌ಗಳ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡುತಿದ್ದರು.

ಜಿಲ್ಲೆಯ ಜನ ಬ್ಯಾಂಕುಗಳಲ್ಲಿ ಠೇವಣಿ ಇರಿಸುತಿದ್ದು, ಸಾಲ ಪಡೆಯುವವರ ಸಂಖ್ಯೆ ಕಡಿಮೆ ಎಂದು ಹೇಳಲಾಗುತಿದ್ದರೂ, ಬ್ಯಾಂಕುಗಳು ಸಾಲಕ್ಕಾಗಿ ಬಂದ ಅರ್ಜಿಯ ವಿಲೇವಾರಿಯಲ್ಲಿ ವಿಳಂಬ ಮಾಡುವುದನ್ನು ನೋಡಿದರೆ, ನೀವು ಇನ್ನಷ್ಟು ಮುತುವರ್ಜಿಯಿಂದ ಇವುಗಳನ್ನು ವಿಲೇವಾರಿ ಮಾಡಬೇಕು ಎಂಬುದನ್ನು ಮನಗಾಣಬೇಕು ಎಂದರು.

ಅಲ್ಲದೇ ಜಿಲ್ಲೆಯ ಸಾಲ ಮತ್ತು ಠೇವಣಿ ಅನುಪಾತ ಈಗಲೂ ಶೇ.47ರ ಆಸುಪಾಸಿನಲ್ಲಿದ್ದು, ಈ ಪ್ರಮಾಣವನ್ನು ಶೇ.60ಕ್ಕೆ ಹೆಚ್ಚಿಸಲು ಹೆಚ್ಚಿನ ಗಮನ ಹರಿಸಬೇಕು. ಇದಕ್ಕಾಗಿ ನೀವು ಸಾಲ ನೀಡಿಕೆಯನ್ನು ಹೆಚ್ಚಿಸಬೇಕು ಎಂದರು.

ಜಿಲ್ಲೆಯಲ್ಲಿ ಸಾಲ ಮತ್ತು ಠೇವಣಿ ಅನುಪಾತವನ್ನು ಹೆಚ್ಚಿಸಲು ಬ್ಯಾಂಕ್ ಶಾಖೆಗಳ ಮಟ್ಟದಲ್ಲಿ 25 ಸಾಲ ನೀಡುವ ಅಭಿಯಾನ ನಡೆಸಿದ್ದು, ಇವುಗಳಲ್ಲಿ 418 ಪ್ರಸ್ತಾಪಗಳನ್ನು ಸ್ವೀಕರಿಸಿ 186 ಕೋಟಿರೂ. ಸಾಲ ನೀಡಲಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ತಿಳಿಸಿದರು. ಕಳೆದ ಮಾರ್ಚ್ ಅಂತ್ಯಕ್ಕೆ ಹೋಲಿಸಿದರೆ, ಈ ವರ್ಷ ಸಾಲ-ಠೇವಣಿ ಅನುಪಾತದಲ್ಲಿ ಶೇ.2.08ಕ್ಕೆ (ಶೇ.47.25) ಏರಿಕೆಯಾದರೂ, ಅದನ್ನು 60ಕ್ಕೆ ಏರಿಸುವುದು ಗುರಿಯಾಗಬೇಕು ಎಂದು ಪ್ರಸನ್ನ ನುಡಿದರು.

ಸಕಾರಣವಿಲ್ಲದೇ ತಿರಸ್ಕರಿಸಬೇಡಿ: ವಿವಿಧ ಸರಕಾರಿ ಯೋಜನೆಗಳ ಫಲಾನುಭವಿಗಳ ಅರ್ಜಿಗಳನ್ನು ಸಂಬಂಧ ಪಟ್ಟಿ ಇಲಾಖೆ ಪರಿಶೀಲನೆಯ ಬಳಿಕ ಬ್ಯಾಂಕುಗಳಿಗೆ ಕಳುಹಿಸಿದಾಗ ಅದನ್ನು ಸಕಾರಣವಿಲ್ಲದೇ ತಿರಸ್ಕರಿಸಬೇಡಿ. ಯೋಜನೆಗಳಡಿ ಬಡವರಿಗೆ ಸಾಲ ಮಂಜೂರು ಮಾಡಲು ಆದ್ಯತೆ ನೀಡಿ. ಅರ್ಜಿಗಳಲ್ಲಿ ಏನಾದರೂ ದೋಷಗಳಿದ್ದರೆ ಅವುಗಳನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಂಡು ಸಾಲ ಮಂಜೂರು ಮಾಡಿ. ಈ ಮೂಲಕ ಯೋಜನೆಗಳ ಯಶಸ್ಸಿಗೂ ಕಾರಣರಾಗಿ ಎಂದರು.

ಜಿಲ್ಲೆಯಲ್ಲಿ 16,000 ಸೂಕ್ಷ್ಮ, ಸಣ್ಣ ಮತ್ತು ಮದ್ಯಮ ಕೈಗಾರಿಕೆಗಳಿದ್ದು, ಇವುಗಳಲ್ಲಿ ಕೇವಲ 3500 ಉದ್ದಿಮೆಗಳು ಮಾತ್ರ ‘ಉದ್ಯಮ್’ ಪೋರ್ಟಲ್‌ನಲ್ಲಿ ನೊಂದಾಯಿಸಿಕೊಂಡಿವೆ. ಪ್ರತಿಯೊಂದು ಎಂಎಸ್‌ಎಂಇಗೆ ಉದ್ಯಮ್ ಪೋರ್ಟಲ್‌ನಲ್ಲಿ ನೊಂದಾವಣಿಯನ್ನು ಕಡ್ಡಾಯಗೊಳಿಸಲಾಗಿದೆ. ಇದು ಅವುಗಳಿಗೆ ಕೈಗಾರಿಕಾ ಲೈಸನ್ಸ್ ಇದ್ದಂತೆ ಎಂದು ಅವರು ವಿವರಿಸಿದರು.

ಉದ್ಯಮ್ ಪೋರ್ಟಲ್‌ನಲ್ಲಿ ನೊಂದಾಯಿಸಿಕೊಂಡಿರುವ ಕೈಗಾರಿಕೆಗಳಿಗೆ ಸಾಲ ನೀಡುವಾಗ, ಬೇರೆ ಟ್ರೇಡ್ ಲೈಸನ್ಸ್ ಕೇಳದೇ, ಸ್ಥಳೀಯ ಪ್ರಾಧಿಕಾರದಿಂದ ಎನ್‌ಓಸಿಯನ್ನು ಮಾತ್ರ ಪಡೆದು ಸಾಲ ನೀಡುವಂತೆ ಸೂಚನೆ ನೀಡಿದರು.

ಸೈಬರ್ ಕ್ರೈಮ್, ಆನ್‌ಲೈನ್ ವಂಚನೆ ಬಗ್ಗೆ ಎಚ್ಚರಿಕೆ: ಹಿಂದಿನ ಸಭೆಯಲ್ಲಿ ಪ್ರಧಾನವಾಗಿ ಚರ್ಚಿತವಾದ ಸೈಬರ್ ಕ್ರೈಮ್‌ಗಳು ಹಾಗೂ ಆನ್‌ಲೈನ್ ಮೂಲಕ ಬ್ಯಾಂಕ್ ಗ್ರಾಹಕರನ್ನು ವಂಚಿಸುವ ಪ್ರಕರಣಗಳ ವಿಷಯ ಈ ಬಾರಿಯೂ ಪ್ರಸ್ತಾಪವಾಯಿತು. ಈ ಬಗ್ಗೆ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳು ಗ್ರಾಮೀಣ ಭಾಗದ ಬ್ಯಾಂಕ್ ಗ್ರಾಹಕರಿಗೆ ಗ್ರಾಪಂ ಮಟ್ಟದಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇಂಥ ವಂಚನೆಯಿಂದ ಗ್ರಾಹಕರನ್ನು ಪಾರು ಮಾಡಲು ಜಿಲ್ಲೆಯಲ್ಲಿ 93 ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಇವುಗಳಲ್ಲಿ 8386 ಮಂದಿ ರೈತರು, ಸ್ವಸಹಾಯ ಗುಂಪಿನ ಸದಸ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ.ಪಿಂಜಾರ ಸಭೆಗೆ ತಿಳಿಸಿದರು. ಇಂಥ ಅರಿವು ಕಾರ್ಯಕ್ರಮಗಳನ್ನು ನಿರಂತರವಾಗಿ ಜಿಲ್ಲೆಯಲ್ಲಿ ಏರ್ಪಡಿಸಲಾಗುವುದು ಎಂದರು.

ನೀವು ಒಂದು ರೀತಿಯ ವಂಚನೆಯ ಕುರಿತಂತೆ ಜಾಗೃತಿ ಮೂಡಿಸುವಾಗ ಸೈಬರ್ ವಂಚಕರು ಹೊಸ ಹೊಸ ವಿಧಾನಗಳ ಮೂಲಕ ವಂಚನೆ ಮುಂದುವರಿಸುತಿದ್ದಾರೆ ಎದು ಸಿಇಓ ಪ್ರಸನ್ನ ತಿಳಿಸಿದರು. ಇತ್ತೀಚೆಗೆ ಜಿಲ್ಲೆಯ ಇಬ್ಬರು ಹಿರಿಯ ಸರಕಾರಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ಮೊಬೈಲ್‌ನ ಡಿಪಿ ಬಳಸಿಕೊಂಡು 10,000ರೂ.ಗಳ ಅಮೆಜಾನ್ ಗಿಫ್ಟ್ ವೋಚರ್ ನೀಡುವಂತೆ ಸಂದೇಶಗಳು ರವಾನೆಯಾಗಿತ್ತು ಎಂದು ಅವರು ಹೇಳಿದರು.

ಈ ಅಧಿಕಾರಿಗಳು ಜಾಗೃತರಾಗಿದ್ದು, ಡಿಸಿ ಧ್ವನಿಯ ಬಗ್ಗೆ ಸಂಶಯಗೊಂಡಿ ದ್ದರಿಂದ ವಂಚನೆಗೊಳಗಾಗುವುದರಿಂದ ಪಾರಾಗಿದ್ದಾರೆ. ಆದ್ದರಿಂದ ಇಂತಹ ವಂಚನೆ ಪ್ರಕರಣಗಳ ಕುರಿತಂತೆ ಗ್ರಾಹಕರಿಗೆ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.

ತ್ರೈಮಾಸಿಕ ವರದಿ:  ಕಳೆದ ತ್ರೈಮಾಸಿಕದ ವರದಿ ಮಂಡಿಸಿದ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ಲೀನಾ ಪಿಂಟೋ, ಜಿಲ್ಲೆಯಲ್ಲಿ 3ನೇ ತ್ರೈಮಾಸಿಕ ಅವಧಿಯಲ್ಲಿ ಠೇವಣಿ ಸಂಗ್ರಹ 32109 ಕೋಟಿ ರೂ. ಏರಿ ಶೇ. 9.83 ಬೆಳವಣಿಗೆ ಕಂಡಿದೆ. ಅದೇ ರೀತಿ ಈ ಅವಧಿಯಲ್ಲಿ 15,173 ಕೋಟಿ ರೂ. ಸಾಲ ವಿತರಿಸಿ, ಶೇ.13.81ಬೆಳವಣಿಗೆ ದಾಖಲಿಸ ಲಾಗಿದೆ. ಹೀಗಾಗಿ ಸಾಲ ಮತ್ತು ಠೇವಣಿ ಅನುಪಾತ ಶೇ. 47.25ಕ್ಕೇರಿದೆ ಎಂದರು.

ಈ ಅವಧಿಯಲ್ಲಿ ಕೃಷಿ ವಲಯಕ್ಕೆ 2867 ಕೋಟಿ ರೂ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ 2705 ಕೋಟಿ ರೂ, ವಿದ್ಯಾಭ್ಯಾಸ ಸಾಲ 96 ಕೋಟಿ, ವಸತಿ ಸಾಲ 653 ಕೋಟಿ ರೂ ವಿತರಿಸಲಾಗಿದೆ. ಒಟ್ಟಾರೆಯಾಗಿ ಆದ್ಯತಾ ವಲಯಕ್ಕೆ 6927 ಕೋಟಿ ರೂ ಹಾಗೂ ಆದ್ಯತೇತರ ವಲಯಕ್ಕೆ 3986 ಕೋಟಿ ರೂ ಸಾಲ ವಿತರಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಜನ್ ಯೋಜನೆಯಲ್ಲಿ ಅತೀ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿದ ಕೆನರಾ ಬ್ಯಾಂಕ್ ಸಾಲಿಗ್ರಾಮ ಶಾಖೆ ಹಾಗೂ ಕೆನರಾ ಬ್ಯಾಂಕ್ ಮಣಿಪಾಲ ಶಾಖೆಗಳನ್ನು ಅಭಿನಂದಿಸಲಾಯಿತು.

ಸಭೆಯಲ್ಲಿ ಆರ್‌ಬಿಐನ ಅಧಿಕಾರಿ ಹಾಗೂ ಜಿಲ್ಲಾ ಲೀಡ್ ನೋಡೆಲ್ ಅಧಿಕಾರಿ ತನು ನಂಜಪ್ಪ, ಯೂನಿಯನ್ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ಡಾ.ವಾಸಪ್ಪ ಉಪಸ್ಥಿತರಿದ್ದರು. ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ.ಪಿಂಜಾರ ಅತಿಥಿಗಳನ್ನು ಸ್ವಾಗತಿಸಿ, ಸಭೆಯನ್ನು ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News