ಉಳ್ಳಾಲ ಬಟ್ಟಂಪಾಡಿಯಲ್ಲಿ ಮುಳುಗಿದ ಹಡಗು: ತೈಲ ಹೊರತೆಗೆಯಲು ಕೇಂದ್ರಕ್ಕೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪತ್ರ

Update: 2022-06-28 15:46 GMT

ಮಂಗಳೂರು, ಜೂ.28: ಉಳ್ಳಾಲ ಬಟ್ಟಂಪಾಡಿಯ ಸಮುದ್ರ ತೀರದಿಂದ 1.5 ನಾಟಿಕಲ್ ಮೈಲ್ ದೂರದಲ್ಲಿ ಮುಳುಗಿರುವ ‘ಪ್ರಿನ್ಸೆಸ್ ಮಿರಾಲ್’ ಸರಕು ತುಂಬಿದ ಹಡಗಿನಿಂದ ತೈಲ ಹೊರತೆಗೆಯಲು ಕೇಂದ್ರ ಸರಕಾರದ ಶಿಪ್ಪಿಂಗ್ ಡೈರೆಕ್ಟೊರೇಟ್ ಜನರಲ್‌ಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ ಎಂದು ದ.ಕ.ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಈ ಮದ್ಯೆ ಹಡಗಿನ ಡರ್ಟಿ ವಾಟರ್ ಟ್ಯಾಂಕ್‌ನಿಂದ ಅಲ್ಪ ಪ್ರಮಾಣದ ತೈಲ ಸೋರಿಕೆ ಆರಂಭವಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.
ಆಳ ಸಮುದ್ರವೂ ಅಲ್ಲದ ತೀರವೂ ಅಲ್ಲದ ಜಾಗದಲ್ಲಿ ಈ ಹಡಗು ಮುಳುಗಿದೆ. ಸಹಜವಾಗಿ ಇಂತಹ ಸ್ಥಳದಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರುತ್ತದೆ. ನಾಲ್ಕೈದು ದಿನಗಳಿಂದ ಸಮುದ್ರಗಳ ಅಲೆಗಳ ಅಬ್ಬರ ಹಿಂದಿಗಿಂತ ಭಾರೀ ಜೋರಾಗಿದ್ದು, ತೈಲ ಹೊರ ತೆಗೆಯುವ ಕಾರ್ಯ ನಡೆಸಲು ಪ್ರತಿಕೂಲ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ತೈಲ ಹೊರತೆಗೆಯಲು ನೆರವಾಗುವಂತೆ ಶಿಪ್ಪಿಂಗ್ ಡಿಜಿಗೆ ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಹಡಗಿನಿಂದ ಅಲ್ಪ ಪ್ರಮಾಣದಲ್ಲಿ ತೈಲ ಸೋರಿಕೆಯಾಗುತ್ತಿರುವ ಮಾಹಿತಿ ಲಭಿಸಿದೆ. 200 ಮೆಟ್ರಿಕ್ ಟನ್‌ನಷ್ಟು ಅಗಾಧ ಪ್ರಮಾಣದ ತೈಲ ಇರುವುದರಿಂದ ಅದನ್ನು ಸುರಕ್ಷಿತವಾಗಿ ಹೊರತೆಗೆಯುವುದು ಸವಾಲಾಗಿ ಪರಿಣಮಿಸಿದೆ.

ಮೂರು ದಿನಗಳ ಹಿಂದೆ ಗುಜರಾತ್‌ನಿಂದ ಸಮುದ್ರ ಪಾವಕ್ ಎಂಬ ವಿಶೇಷ ತಂತ್ರಜ್ಞಾನ ಸಹಿತ ಹಡಗು ಉಳ್ಳಾಲಕ್ಕೆ ಆಗಮಿಸಿದ್ದು, ಹಡಗಿನಿಂದ ಸೋರಿಕೆಯಾದ ತೈಲದಿಂದ ಪರಿಸರಕ್ಕೆ ಹಾನಿಯಾಗದಂತೆ ಅತ್ಯಾಧುನಿಕ ಸರ್ವ ಸಾಧನಗಳೊಂದಿಗೆ ಕಾರ್ಯಾಚರಣೆಗೆ ನಿಂತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News