ವಿಟ್ಲ: ಕುಡಿದ ಮತ್ತಿನಲ್ಲಿ ಬಿದ್ದು ರಕ್ತಸ್ರಾವ; ಸಾರ್ವಜನಿಕರ ಆತಂಕಕ್ಕೆ ತೆರೆ ಎಳೆದ ಪೊಲೀಸರು

Update: 2022-06-29 06:25 GMT

ಬಂಟ್ವಾಳ, ಜೂ.28: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿಟ್ಲ – ಪುತ್ತೂರು ರಸ್ತೆಯ ಬದನಾಜೆ ಸಾರ್ವಜನಿಕರ ಬಸ್ಸುತಂಗುದಾಣದಲ್ಲಿ ರಕ್ತ ಪತ್ತೆಯಾಗಿದ್ದು, ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಿದ್ದು ಆಗಿರುವ ಘಟನೆ ಎಂದು ತಿಳಿದು ಬಂದಿದೆ.

ಬದನಾಜೆ ಬಸ್ಸು ತಂಗುದಾಣದ ಪಕ್ಕದಲ್ಲಿ ಹಾಲು ಸಂಗ್ರಹಣಾ ಕೇಂದ್ರವಿದ್ದು, ಅಲ್ಲಿಗೆ ಬಂದವರು ರಕ್ತವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಘಟನೆ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿತ್ತು. ಮಾತ್ರವಲ್ಲದೆ ಪ್ರಕರಣ ಹಲವಾರು ಊಹಾಪೂಹಕ್ಕೆ ಕಾರಣವಾಗಿತ್ತು.

ಸ್ಥಳಕ್ಕಾಗಮಿಸಿದ ವಿಟ್ಲ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಾಗ ಪ್ರಕರಣದ ಸತ್ಯಾಂಶ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ಲಭಿಸಿದೆ. 

ನೆಲ್ಲಿಗುಡ್ಡೆ ಮೂಲದ ವ್ಯಕ್ತಿ ಕುಡಿತದ ಮತ್ತಿನಲ್ಲಿ ಬದನಾಜೆ ಬಸ್ಸು ನಿಲ್ದಾಣದಲ್ಲಿ ಕುಳಿತಿದ್ದು, ಈ ವೇಳೆ ಆ ವ್ಯಕ್ತಿ ಬಿದ್ದು ಮುಖ ಹಾಗೂ ಮೂಗಿನ ಭಾಗಕ್ಕೆ ಗಾಯವಾಗಿ ರಕ್ತ ಬಂದಿದ್ದು, ಬೆಳಗ್ಗಿನ ವೇಳೆ ಅಲ್ಲಿಂದ ಆತ ಎದ್ದು ವಿಟ್ಲ ಕಡೆಗೆ ತೆರಳಿದ್ದಾನೆ.

ವಿಟ್ಲ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜಾಂಶ ಬಯಲಾಗಿದೆ. ಈ ಮೂಲಕ ಸಾರ್ವಜನಿಕರ ಆತಂಕಕ್ಕೆ ತೆರೆ ಎಳೆದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News