ಕುಂದಾಪುರ ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಶನ್ ಅಧ್ಯಕ್ಷರಾಗಿ ಹೆಚ್. ನಾರಾಯಣ ಶೆಟ್ಟಿ ಸಬ್ಲಾಡಿ ಆಯ್ಕೆ

Update: 2022-06-29 13:20 GMT

ಕುಂದಾಪುರ: ಆರ್ಥಿಕ ಕುಸಿತ ಕಂಡಿರುವ ತೆಂಗಿನ ಬೆಳೆಯ ಪುನಶ್ಚೇತನ ಹಾಗೂ ತೆಂಗು ಬೆಳೆಗಾರರನ್ನು ಸಂಘಟಿಸಿ, ಉತ್ಪನ್ನಗಳ ಮೌಲ್ಯ ವರ್ಧನೆ ಮಾಡಿ, ಹೆಚ್ಚಿನ ಆದಾಯ ಗಳಿಸಬೇಕೆಂಬ ಚಿಂತನೆಯೊಂದಿಗೆ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಕುಂದಾಪುರ ತಾಲೂಕಿನಾದ್ಯಂತ ೩೬ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿಗಳನ್ನು ರಚಿಸಲಾಗಿದೆ. 

ತೆಂಗಿನ ಬೆಳೆ ಹಾಗೂ ತೆಂಗು ಉತ್ಪನ್ನಗಳಿಗೆ ತೆಂಗು ಅಭಿವೃದ್ಧಿ ಮಂಡಳಿಯಿಂದ ಪ್ರೋತ್ಸಾಹ ಯೋಜನೆಗಳನ್ನು ಪಡೆಯುವ ದೃಷ್ಟಿಯಿಂದ ೨೦೧೬ರಲ್ಲಿ ರಚಿಸ ಲಾಗಿರುವ ಕುಂದಾಪುರ ತಾಲೂಕು ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಶನ್‌ನ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಅದರ ನೂತನ ಅಧ್ಯಕ್ಷರಾಗಿ ಎಚ್. ನಾರಾಯಣ ಶೆಟ್ಟಿ ಸಬ್ಲಾಡಿ ಆಯ್ಕೆಯಾಗಿದ್ದಾರೆ.

ಇಂದು ನಡೆದ ಒಕ್ಕೂಟದ ಸರ್ವಸದಸ್ಯರ ಸಭೆಯಲ್ಲಿ ಉಪಾಧ್ಯಕ್ಷರಾಗಿ ಅನಂತಪದ್ಮನಾಭ ಉಡುಪ ಕುಂದಬಾ ರಂದಾಡಿ, ಕೋಶಾಧಿಕಾರಿಯಾಗಿ ಸುಧಾಕರ ನಾಯಕ್ ಜಪ್ತಿ, ಕಾರ್ಯದರ್ಶಿ ನಾಗರಾಜ ಉಡುಪ ಹಾಲಾಡಿ ಹಾಗೂ ಜೊತೆಕಾರ್ಯದರ್ಶಿ ಚನ್ನಕೇಶವ ಕಾರಂತ ಕಿರಿಮಂಜೇಶ್ವರ ಸರ್ವಾನುಮತದಿಂದ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡರು. 

ಫೆಡರೇಷನ್ ಮೂಲಕ ಎರಡು ವರ್ಷಗಳ ಅವಧಿಯಲ್ಲಿ ಸುಮಾರು ೧.೮೦ ಕೋಟಿ ರೂ. ಮೊತ್ತದ ರಸಗೊಬ್ಬರ ಹಾಗೂ ಪೋಷಕಾಂಶಗಳನ್ನು ತೆಂಗು ಅಭಿವೃದ್ಧಿ ಮಂಡಳಿಯಿಂದ ಪಡೆದು ರೈತರಿಗೆ ವಿತರಿಸಲಾಗಿತ್ತು. ಕೊರೊನಾ ಕಾರಣಕ್ಕೆ ಕಳೆದೆರಡು ವರ್ಷಗಳಿಂದ ಚಟುವಟಿಕೆ ಕಡಿಮೆಯಾಗಿದ್ದು, ಈಗ ಮತ್ತೆ ತೆಂಗಿನ ಉತ್ಪನ್ನಗಳ ಬೆಲೆ ಪಾತಾಳಕ್ಕೆ ಕುಸಿದಿದೆ. ಆ ಕಾರಣಕ್ಕೆ ಒಕ್ಕೂಟವನ್ನು ಬಲಪಡಿಸುವ ಬಗ್ಗೆ ಚಿಂತನೆ ನಡೆಸಲಾಯಿತು. 

ಈ ಸಂದರ್ಭದಲ್ಲಿ ನಿರ್ಗಮನ ಅಧ್ಯಕ್ಷ ವೆಂಕಟೇಶ್ ರಾವ್ ಹೊಸ್ಕೋಟೆ, ಉಪಾಧ್ಯಕ್ಷ ರಾಮಚಂದ್ರ ಅಲ್ಸೆ ಬೆಳ್ವೆ ಕಳೆದ ಆರು ವರ್ಷಗಳಲ್ಲಿ ಒಕ್ಕೂಟದ ಬೆಳವಣಿಗೆ ಹಾಗೂ ಇದರಿಂದ ರೈತರಿಗಾದ ಲಾಭಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಕಾರ್ಯದರ್ಶಿ ಸೀತಾರಾಮ ಗಾಣಿಗ ಮುಂದಿನ ಕಾರ್ಯ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. 

ತೆಂಗಿಗೆ ಬೆಂಬಲ ಬೆಲೆಗೆ ಆಗ್ರಹ: ತಾಲೂಕಿನ ೩೬ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿಯ ಪದಾಧಿಕಾರಿ ಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹೆಚ್ ನಾರಾಯಣ ಶೆಟ್ಟಿ ಮಾತನಾಡಿ ಆರ್ಥಿಕ ಕುಸಿತದಿಂದ ಕಂಗೆಟ್ಟಿರುವ ತೆಂಗು ಬೆಳೆಗಾರರ ಹಿತ ಕಾಯುವ ದೃಷ್ಟಿಯಿಂದ ತೆಂಗಿಗೆ ಬೆಂಬಲ ಬೆಲೆ ಘೋಷಿಸಿ ಸರಕಾರ ಖರೀದಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಕರಾವಳಿ ಜಿಲ್ಲೆಗಳಲ್ಲಿ ತೆಂಗಿನ ಸಂಸ್ಕರಣಾ ಘಟಕಕ್ಕೆ ಆದ್ಯತೆ ನೀಡಬೇಕು ಹಾಗೂ ಕಲ್ಪರಸಕ್ಕೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ತೆಂಗು ಬೆಳೆಗಾರರ ಆದಾಯ ಹೆಚ್ಚಿಸುವ ಯೋಜನೆಗಳಿಗೆ ಸರಕಾರ ಬೆಂಬಲಿಸಬೇಕೆಂಬ ಬೇಡಿಕೆಯನ್ನು ಸರಕಾರದಮುಂದಿಡಲು ನಿರ್ಣಯಿಸಲಾಯಿತು. ಕಾರ್ಯದರ್ಶಿ ನಾಗರಾಜ ಉಡುಪ ವಂದಿಸಿದರು. ನಿರ್ಗಮನ ಕೋಶಾಧಿಕಾರಿ ಸತ್ಯನಾರಾಯಣ ಉಡುಪ ಲೆಕ್ಕಪತ್ರ ಮಂಡಿಸಿ, ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News