ತೀಸ್ತಾ ಸೆಟಲ್ವಾಡ್ , ಝುಬೈರ್, ಶ್ರೀಕುಮಾರ್ ಬಂಧನ ಖಂಡಿಸಿ ಪ್ರತಿಭಟನೆ

Update: 2022-06-29 14:39 GMT

ಮಂಗಳೂರು : ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಪತ್ರಕರ್ತ ಮುಹಮ್ಮದ್ ಝುಬೈರ್, ಮಾಜಿ ಹಿರಿಯ ಪೊಲೀಸ್ ಅಧಿಕಾರಿ ಆರ್‌ಬಿ ಶ್ರೀಕುಮಾರ್ ಅವರನ್ನು ಅನ್ಯಾಯವಾಗಿ ಬಂಧಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಬುಧವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ ಅನ್ಯಾಯದ ವಿರುದ್ಧ ಧ್ವನಿ ಎತ್ತುವವರನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅಕ್ರಮವಾಗಿ ಬಂಧಿಸುತ್ತಿದೆ. ಈ.ಡಿ. ಮೂಲಕ ಬೆದರಿಸುವ ತಂತ್ರಗಾರಿಕೆ ಮಾಡುತ್ತಿದೆ. ಅನ್ಯಾಯದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದೇ ತಪ್ಪೆಂದು ಬಿಂಬಿಸಲಾಗುತ್ತದೆ ಎಂದರಲ್ಲದೆ, ಇದೀಗ ಬೀದಿ ಬದಿಯಲ್ಲೇ ನ್ಯಾಯ ಸಿಗುತ್ತಿದೆ. ಹಾಗಾದರೆ ನ್ಯಾಯಾಲಯ ಅವಶ್ಯಕತೆ ಯಾಕೆ ಎಂದು ಪ್ರಶ್ನಿಸಿದರು.

ಬಿಜೆಪಿಗೆ ಜನ ಬೆಂಬಲವಿಲ್ಲ. ಅದರ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಹಾಗಾಗಿ ದಿನಕ್ಕೊಂದು ಅಜೆಂಡಾ ಮುಂದಿಟ್ಟು ಜನರ ಗಮನ ಬೇರೆ ಕಡೆ ಸೆಳೆಯಲಾಗುತ್ತದೆ. ಸರಕಾರದ ಈ ಅನ್ಯಾಯ, ಅಕ್ರಮ ನೀತಿಯ ವಿರುದ್ಧ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಪತ್ರಕರ್ತ ಮುಹಮ್ಮದ್ ಝುಬೈರ್, ಮಾಜಿ ಪೊಲೀಸ್ ಅಧಿಕಾರಿ ಆರ್‌ಬಿ ಶ್ರೀಕುಮಾರ್ ಬಹಿರಂಗಪಡಿಸುತ್ತಲೇ ಬಂದಿದ್ದರು. ಅವರನ್ನು ಹತ್ತಿಕ್ಕುವ ಸಲುವಾಗಿ ಬಂಧಿಸಲಾಗಿದೆ ಮತ್ತು ಇತರ ಹೋರಾಟಗಾರರ ಧ್ವನಿ ಅಡಗಿಸುವ ಪ್ರಯತ್ನವನ್ನು ಬಿಜೆಪಿಯು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದೆ. ವಿಳಂಬವಾದರೂ ಸರಿ, ನ್ಯಾಯ ಒಂದಲ್ಲೊಂದು ದಿನ ಖಂಡಿತಾ ಸಿಗಲಿದೆ. ಹಾಗಾಗಿ ಹತಾಶರಾಗದೆ ಫ್ಯಾಶಿಸ್ಟ್ ಶಕ್ತಿ ಮತ್ತು ಸರಕಾರದ ವಿರುದ್ಧ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟ ಮುಂದುವರಿಸಬೇಕಿದೆ ಎಂದು ಪಟ್ಟಾಭಿರಾಮ ಸೋಮಯಾಜಿ ಕರೆ ನೀಡಿದರು.
ಮಾನವ ಹಕ್ಕುಗಳ ಹೋರಾಟಗಾರ ಕಬೀರ್ ಉಳ್ಳಾಲ್, ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ರಾಜ್ಯ ಕಾರ್ಯದರ್ಶಿ  ಅಶ್ರಫ್ ಮಾಚಾರ್, ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News