ಮುಳುಗಿದ ಹಡಗು ತೆರವಿಗೆ ಅಗತ್ಯ ಕ್ರಮ : ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ

Update: 2022-06-29 15:38 GMT
ಫೈಲ್‌ ಫೋಟೊ 

ಮಂಗಳೂರು: ಉಳ್ಳಾಲದ ಬಟಪಾಡಿ ಸಮುದ್ರದಲ್ಲಿ ಜೂ.21ರಂದು ಮುಳುಗಡೆಯಾದ ‘ಎಂವಿ ಪ್ರಿನ್ಸೆಸ್ ಮಿರಾಲ್’ ಎಂಬ ಹೆಸರಿನ ಹಡಗಿನ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಈವರೆಗೆ ಹಡಗಿನಿಂದ ತೈಲ ಸೋರಿಕೆಯಾಗಿರುವುದು ಕಂಡು ಬಂದಿಲ್ಲ. ಕರಾವಳಿಯ ರಕ್ಷಣಾ ಪಡೆಗೆ ಸೇರಿದ ಮೂರು ವಿಶೇಷ ಹಡಗಲ್ಲದೆ ಡೋರ್ನಿಯರ್ ವಿಮಾನದ ಮೂಲಕವೂ ಕಣ್ಗಾವಲಿಡಲಾಗಿದೆ. ಸಮುದ್ರದಲ್ಲಿ ತೈಲ ಸೋರಿಕೆಯಾದಲ್ಲಿ ನಿವಾರಣಾ ಕ್ರಮಗಳು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹಾಗೂ ಸುರಕ್ಷತೆಗಳ ಬಗ್ಗೆ ಈಗಾಗಲೇ ಜಿಲ್ಲಾಡಳಿತದ ವತಿಯಿಂದ ಅಣಕು ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಅಗತ್ಯ ಪರಿಕರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನೌಕಾಯಾನ ಇಲಾಖೆಯ ಮಹಾನಿರ್ದೇಶಕರು, ಕರಾವಳಿ ಕಾವಲು ಪಡೆಯ ಕೇಂದ್ರ ಕಚೇರಿ ಹಾಗೂ ಪಶ್ಚಿಮ ಕಚೇರಿಗಳು, ಜಿಲ್ಲಾಧಿಕಾರಿ ಕಚೇರಿ, ಎಂಎಂಡಿ ಇಲಾಖೆಯ ಅಧಿಕಾರಿಗಳು, ನವಮಂಗಳೂರು ಬಂದರು ಪ್ರಾಧಿಕಾರ ಮತ್ತು ಹಡಗಿನ ಮಾಲಕರೊಂದಿಗೆ ಈ ಸಮಸ್ಯೆಯನ್ನು ಬಗೆಹರಿಸಲು ಕೈಗೊಳ್ಳಬೇಕಾದ ವಿಶೇಷ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಹಡಗಿನ ತೆರವಿಗೆ ಏಜೆನ್ಸಿಗಳನ್ನು ನಿಯೋಜಿಸುವ ಬಗ್ಗೆ ನೌಕಾಯಾನ ಇಲಾಖೆಯ ಮಹಾನಿರ್ದೇಶಕರು ಕ್ರಮವಹಿಸುವರು ಎಂದು ತಿಳಿಸಿದ್ದಾರೆ.

ಈ ಸಂದರ್ಭ ವಹಿಸಬೇಕಾದ ವಿಶೇಷ ಕ್ರಮಗಳ ಬಗ್ಗೆ ತಾಂತ್ರಿಕ ಪರಿಣತರು ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡುತ್ತಿದ್ದು, ಅದರಂತೆಯೂ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಡಗಿಗೆ ಸಂಬಂಧಿತ ವಿಷಯ ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ನೌಕಾಯಾನ ಇಲಾಖೆಯ ಮಹಾನಿರ್ದೇಶಕರು, ಕರಾವಳಿ ರಕ್ಷಣಾ ಪಡೆ, ಎನ್‌ಎಂಪಿಎ, ಎಂಆರ್‌ಪಿಎಲ್ ಸೇರಿದಂತೆ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆಗಳು ಪ್ರತಿದಿನ ಸಂಜೆ  5ಕ್ಕೆ ವರ್ಚುವಲ್ ಮಾಧ್ಯಮದ ಮೂಲಕ ಸಭೆ ನಡೆಸಲಾಗುತ್ತಿದೆ. ಪರಿಸ್ಥಿತಿಗೆ ತಕ್ಕಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News