ಸುಳ್ಯ : ಪರವಾನಿಗೆ ಇಲ್ಲದೆ ನಡೆಸುತ್ತಿದ್ದ ಕ್ಲಿನಿಕ್ ಮುಚ್ಚಿಸಿದ ಆರೋಗ್ಯ ಇಲಾಖೆ

Update: 2022-06-29 17:20 GMT

ಸುಳ್ಯ : ಪರವಾನಿಗೆ ಇಲ್ಲದೆ ಕಲ್ಲುಗುಂಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಮಾಂಬುಳಿ ಕ್ಲಿನಿಕ್‍ನ್ನು ಆರೋಗ್ಯ ಇಲಾಖೆ ಬುಧವಾರ ಮುಚ್ಚಿಸಿದೆ. ಅಲ್ಲದೇ ಕ್ಲಿನಿಕ್ ನಡೆಸುತ್ತಿದ್ದವರ ಮೇಲೆ ಕೇಸು ದಾಖಲಿಸಿ ಅದರಲ್ಲಿದ್ದ ವಸ್ತುವನ್ನು ಮುಟ್ಟುಗೋಲು ಹಾಕಲಾಗಿದೆ.

ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ರೋಸ್ಲಿ ಮ್ಯಾಥ್ಯೂ ಎಂಬವರು ಪರವಾನಿಗೆ ಇಲ್ಲದೆ ಮಾಂಬುಳಿ ಕ್ಲಿನಿಕ್ ನಡೆಸುತ್ತಿದ್ದು ಈ ಕುರಿತು ಆರೋಗ್ಯ ಇಲಾಖೆಗೆ ದೂರು ಹೋಗಿತ್ತು. ಬಳಿಕ ಆರೋಗ್ಯ ಇಲಾಖೆ ಕಡೆಯಿಂದ ಕ್ಲಿನಿಕ್ ನಡೆಸುತ್ತಿರುವ ಬಗ್ಗೆ ಕರ್ನಾಟಕ ಆಯುರ್ವೇದ, ಯುವಾನಿ ವೈದ್ಯ ಮಂಡಳಿಯಿಂದ ನೋಂದಣಿ ಪ್ರಮಾಣ ಪತ್ರ ಸಲ್ಲಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ 3 ಬಾರಿ ನೋಟೀಸ್ ನೀಡಲಾಗಿತ್ತು. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ರೋಸ್ಲಿಯವರು ನೀಡಲಿಲ್ಲ ಎನ್ನಲಾಗಿದೆ.

ಕೆಪಿಎಂಇ ನೋಂದಣಿ ಇಲ್ಲದೆ ಕ್ಲಿನಿಕ್ ನಡೆಸುವುದು ಕೆಪಿಎಂಇ ಕಾಯ್ದೆ 19 ರ ಪ್ರಕಾರ ಕಾನೂನು ಬಾಹಿರವಾಗಿದೆ. ಆದ್ದರಿಂದ ಕ್ಲಿನಿಕನ್ನು ಶಾಶ್ವತವಾಗಿ ಮುಚ್ಚಲು ಸ್ಥಳೀಯ ಪ್ರಾಧಿಕಾರಕ್ಕೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ನೋಟೀಸ್ ಜಾರಿಯಾಗಿತ್ತು. ಕಳೆದ ವಾರ ಜಿಲ್ಲಾಧಿಕಾರಿಗಳು ಹಾಗೂ ಕೆಪಿಎಂಇ ಪ್ರಾಧಿಕಾರ ಅಧ್ಯಕ್ಷರು ಕೂಡಾ ಕ್ಲಿನಿಕ್ ಮುಚ್ಚಿಸಲು ನೋಟೀಸ್ ಜಾರಿ ಮಾಡಿದ್ದರು. ಆದರೆ ರೋಸ್ಲಿಯವರು ಕ್ಲಿನಿಕ್ ಮುಚ್ಚಿರಲಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು, ಕೆಪಿಎಂಇ ನೋಡಲ್ ಅಧಿಕಾರಿ ಡಾ. ದೀಪಾ ಪ್ರಭು ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಕ್ಲಿನಿಕ್ ಮುಚ್ಚಿದರು.

ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಹಾಗೂ ಸ್ಥಳೀಯ ಕೆಪಿಎಂಇ ಅಧಿಕಾರಿ ಡಾ.ನಂದಕುಮಾರ್ ಬಿ, ಬಿಪಿಎಂ ಆಶಿಕ್, ಗುಲ್ಜಾರ್ ಬಾನು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News