ರೈತರಿಗೆ ಶೇ.2ರ ಬಡ್ಡಿ ಸಹಾಯ ಸ್ಥಗಿತಗೊಳಿಸಿದ ಕೇಂದ್ರ ಸರಕಾರ

Update: 2022-06-30 03:09 GMT

ಬೆಂಗಳೂರು: ರೈತರಿಗೆ ನೀಡುತ್ತಿರುವ ಬೆಳೆ ಸಾಲಗಳಿಗೆ ಕೇಂದ್ರ ಸರಕಾರವು ಶೇ.2ರ ಬಡ್ಡಿ ಸಹಾಯಧನ ಯೋಜನೆಯನ್ನು 2022-23ನೇ ಸಾಲಿನಿಂದ ಮುಂದುವರಿಸದ  ಕಾರಣ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಿಗೆ(ಡಿಸಿಸಿ) ಬಹುಕೋಟಿಗಳಷ್ಟು ಬಡ್ಡಿ ಕೊರತೆ ಉಂಟಾಗಲಿದೆ. ಹೀಗಾಗಿ  ಕೊರತೆಯಾಗುವ ಬಡ್ಡಿ ಸಹಾಯಧನ ಮೊತ್ತವನ್ನು ರಾಜ್ಯ ಸರಕಾರವೇ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕೇಂದ್ರ ಸರಕಾರವು ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಘೋಷಿಸಿದ್ದ ಶೇ.2ರ ಬಡ್ಡಿ ಸಹಾಯಧನ ಯೋಜನೆಯನ್ನು ಸ್ಥಗಿತಗೊಳಿಸಿದೆಯಾದರೂ ರಾಜ್ಯ ಸರಕಾರವು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ವಿತರಿಸುವ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲೂ (2022-23) ಮುಂದುವರಿಸಿದೆ. ಆದರೆ ಹಾಲಿ ದೊರೆಯುತ್ತಿರುವ ಬಡ್ಡಿಯ ಲಭ್ಯತೆಯಲ್ಲಿಯೂ ಇಳಿಕೆಯಾಗಲಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಆತಂಕ ವ್ಯಕ್ತಪಡಿಸಿವೆ.

ರಾಜ್ಯ ಸರಕಾರವು ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಸಾಲ ವಿತರಿಸುವ ಯೋಜನೆಯಲ್ಲಿ ಕೇಂದ್ರ ಸರಕಾರದ ಶೇ.2ರ ಬಡ್ಡಿ ಸಹಾಯಧನ ಸಮ್ಮಿಶ್ರಗೊಳಿಸಿದ ನಂತರವೂ ಬಡ್ಡಿ ಆದಾಯದಲ್ಲಿ ಕೊರತೆ ಉಂಟಾಗುತ್ತಿರುವುದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ಈ ಕುರಿತು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟೀವ್‌ನ ಅಧ್ಯಕ್ಷ

ಎಸ್.ಎಂ. ಹೆಬ್ಬಾರ ಅವರು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ 2022ರ ಮೇ 4ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಪ್ರಸಕ್ತ ವರ್ಷ 850 ಕೋಟಿ ರೂ.ಯಷ್ಟು ಬೆಳೆ ಸಾಲ ವಿತರಿಸಿದೆ. ಶೇ.2ರ ಬಡ್ಡಿ ಸಹಾಯಧನ ಲಭ್ಯವಾಗದಿದ್ದಲ್ಲಿ ಸರಿಸುಮಾರು ರೂ. 15 ಕೋಟಿಗೂ ಹೆಚ್ಚಿನ ಬಡ್ಡಿ ಬ್ಯಾಂಕ್, ಸಂಘಗಳಿಗೆ ಆದಾಯದಲ್ಲಿ ಕೊರತೆಯಾಗುತ್ತದೆ. ಕೇಂದ್ರ ಸರಕಾರ ಶೇ.2ರ ಬಡ್ಡಿ ಸಹಾಯಧನ ಯೋಜನೆಯನ್ನು 2022-23ನೇ ಸಾಲಿಗೆ ಮುಂದುವರಿಸುತ್ತಿಲ್ಲ. ಹೀಗಾಗಿ ಈ ವ್ಯತ್ಯಾಸದ ಬಡ್ಡಿಯನ್ನು ರಾಜ್ಯ ಸರಕಾರವೇ ಸಂಬಂಧಪಟ್ಟ ಹಣಕಾಸು ಸಂಸ್ಥೆಗಳಿಗೆ ಭರಿಸಿಕೊಡಬೇಕು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ರಾಜ್ಯ ಸರಕಾರವು  ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಕೃಷಿ ಸಾಲ ವಿತರಿಸುವ ಯೋಜನೆಯಲ್ಲಿಯೇ ಕೇಂದ್ರ ಸರಕಾರದ ಶೇ.2ರ ಬಡ್ಡಿ ಸಹಾಯಧನ ಯೋಜನೆಯನ್ನು ಸಮ್ಮಿಶ್ರಗೊಳಿಸಿದ ನಂತರವೂ ಡಿಸಿಸಿ ಬ್ಯಾಂಕ್‌ಗಳಿಗೆ ಮತ್ತು ಸಂಘಗಳಿಗೆ ಒಟ್ಟಾರೆ ಶೇ.10.60 ಬಡ್ಡಿಯೂ ದೊರಕುವುದಿಲ್ಲ. ಬದಲಿಗೆ ಶೇ. 8.60ರ ಬಡ್ಡಿ ಮಾತ್ರ ಲಭ್ಯವಾಗುತ್ತದೆ. ಇದರಲ್ಲಿಯೇ ಪುನಃ ಶೇ.2ರ ಬಡ್ಡಿಯನ್ನು ಸಂಘದ ಮಾರ್ಜಿನನ್ನಾಗಿ ನೀಡಬೇಕಿದೆ. ಅಂತಿಮವಾಗಿ ಡಿಸಿಸಿ ಬ್ಯಾಂಕ್‌ಗೆ ಶೇ.6.60 ಬಡ್ಡಿ ಲಭ್ಯವಾಗುತ್ತದೆ. ಇದರಿಂದ ಡಿಸಿಸಿ ಬ್ಯಾಂಕ್‌ಗಳಿಗೆ ಶೇ.24 ಬಡ್ಡಿ ಕೊರತೆ ಉಂಟಾಗುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಮಾರ್ಚ್ 1ರಿಂದ ಮೇ 31 ರ ನಡುವಿನ ಅವಧಿಯಲ್ಲಿ  ಬ್ಯಾಂಕುಗಳು ನೀಡಿರುವ 3 ಲಕ್ಷ ರೂ.ವರೆಗಿನ ಎಲ್ಲಾ ಬೆಳೆ ಸಾಲಗಳಿಗೆ 2020ರ ಮೇ 31ರವರೆಗೆ ಬ್ಯಾಂಕುಗಳಿಗೆ ಶೇ.2ರ ಬಡ್ಡಿ  ಸಹಾಯಧನ (ಐ.ಎಸ್.) ಮತ್ತು ಎಲ್ಲಾ ರೈತರಿಗೆ ಶೇ.3ರಷ್ಟು  ಸಕಾಲದಲ್ಲಿ ಮರುಪಾವತಿ ಸಹಾಯಧನ (ಪಿ.ಆರ್.ಐ.) ಸವಲತ್ತುಗಳನ್ನು ಕೇಂದ್ರ ಸರಕಾರವು ವಿಸ್ತರಿಸಿತ್ತು. ಕೋವಿಡ್-19 ಜಾಗತಿಕ ಸಾಂಕ್ರಾಮಿಕವನ್ನು ತಡೆಗಟ್ಟಲು ಲಾಕ್‌ಡೌನ್ ವಿಧಿಸಿದ್ದ ಹಿನ್ನೆಲೆಯಲ್ಲಿ ಸರಕಾರವು ಬ್ಯಾಂಕುಗಳಿಗೆ ಶೇ.2 ಬಡ್ಡಿ ಮರುಪಾವತಿ ಸಹಾಯಧನ (ಐ.ಎಸ್.) ಮತ್ತು ಎಲ್ಲಾ ರೈತರಿಗೆ 2020 ರ ಮೇ 31 ರವರೆಗೆ ಸಕಾಲದಲ್ಲಿ ಮರುಪಾವತಿ ಪ್ರೋತ್ಸಾಹಧನ(ಪಿ.ಆರ್.ಐ.)ವನ್ನು ನೀಡಲು ಕ್ರಮವಹಿಸಿತ್ತು.

ಲಾಕ್‌ಡೌನ್ ಇದ್ದಿದ್ದರಿಂದಾಗಿ ಹಲವು ರೈತರಿಗೆ ಬ್ಯಾಂಕ್ ಶಾಖೆಗಳಿಗೆ ತೆರಳಿ ಅವರ ಅಲ್ಪಾವಧಿ ಬೆಳೆ ಸಾಲ ಮರುಪಾವತಿ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಸಕಾಲದಲ್ಲಿ ಅವರ ಉತ್ಪಾದನೆಗಳ ಮಾರಾಟ ಮತ್ತು ಅದರ ಬೆಲೆ ಪಾವತಿಯೂ ಲಭಿಸಿರುವುದಿಲ್ಲ. ಇದರಿಂದಾಗಿ ರೈತರು ಈ ಅವಧಿಯಲ್ಲಿ ಬರುವ ಅವರ ಅಲ್ಪಾವಧಿ ಬೆಳೆ ಸಾಲ ಮರುಪಾವತಿ ಮಾಡುವಲ್ಲಿ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಕೇಂದ್ರ ಸರಕಾರವು ಶೇ.2ರ ಬಡ್ಡಿ ಸಹಾಯಧನ ಯೋಜನೆಯನ್ನು ವಿಸ್ತರಿಸಿತ್ತು.

ರೈತರು ಎದುರಿಸುತ್ತಿರುವ ಈ ಸಮಸ್ಯೆಯನ್ನು ಪರಿಹರಿಸಲು ಬಡ್ಡಿ ಮರುಪಾವತಿ ಸಹಾಯಧನ (ಐ.ಎಸ್.) ಮತ್ತು ಸಕಾಲದಲ್ಲಿ ಮರುಪಾವತಿ ಸಹಾಯಧನ(ಪಿ.ಆರ್.ಐ.) ಪ್ರಯೋಜನಗಳನ್ನು 2020ರ ಮೇ 31ರವರೆಗೆ ವಿಸ್ತರಿಸಲಾಗಿತ್ತು. 3 ಲಕ್ಷದವರೆಗಿನ 2020ರ ಮೇ 31ರವರೆಗೆ ಅಲ್ಪಾವಧಿ ಬೆಳೆ ಸಾಲಗಳಿಗೆ ಈ ಸೌಲಭ್ಯ ದೊರಕಿತ್ತು.  ಇದು ರೈತರಿಗೆ ಇಂತಹ ಅಲ್ಪಾವಧಿ ಸಾಲವನ್ನು ಯಾವುದೇ ದಂಡವಿಲ್ಲದೆ ಶೇ. 4 ಬಡ್ಡಿದರದಲ್ಲಿ 2020ರ ಮೇ 31ರವರೆಗೆ ವಿಸ್ತರಿತ ಅವಧಿಯಲ್ಲಿ ಪಾವತಿ ಮಾಡಲು ಅವಕಾಶ ಒದಗುತ್ತದೆ ಎಂದು ಹೇಳಿತ್ತು.

ಸರಕಾರವು ರೈತರಿಗೆ ಬ್ಯಾಂಕುಗಳ ಮೂಲಕ ರಿಯಾಯತಿ ದರದಲ್ಲಿ ಬೆಳೆ ಸಾಲವನ್ನು ಒದಗಿಸುತ್ತಿದೆ. ಬ್ಯಾಂಕುಗಳಿಗೆ ವಾರ್ಷಿಕ ಶೇ.2 ಬಡ್ಡಿ ಸಹಾಯಧನ ಮತ್ತು ರೈತರಿಗೆ ಸಕಾಲದಲ್ಲಿ ಮರುಪಾವತಿ ಮಾಡಿದರೆ ಶೇ.3  ಹೆಚ್ಚುವರಿ ಪ್ರಯೋಜನವನ್ನು ಒದಗಿಸುತ್ತಿದೆ. ಈ ಮೂಲಕ ಅದು ರೈತರಿಗೆ 3 ಲಕ್ಷ ರೂ.ಯವರೆಗೆ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಶೇ.4 ವಾರ್ಷಿಕ ಬಡ್ಡಿ ದರದಲ್ಲಿ ಒದಗಿಸುತ್ತಿದೆ ಎಂದು ಬೆನ್ನು ತಟ್ಟಿಕೊಂಡಿತ್ತು.

ಇದಲ್ಲದೆ ರೈತರು ಮತ್ತು ರೈತ ಮಹಿಳೆಯರು ತಮ್ಮ ಕುಟುಂಬದಲ್ಲಿರುವ ಆಭರಣಗಳನ್ನು ಖಾಸಗಿ ಲೇವಾದೇವಿದಾರರಿಗೆ ಹೆಚ್ಚಿನ ಬಡ್ಡಿ ದರದಲ್ಲಿ ಅಡವಿಟ್ಟು ಶೋಷಣೆಗೆ ತುತ್ತಾಗುವುದನ್ನು ತಪ್ಪಿಸಲು ಗೃಹಲಕ್ಷ್ಮಿ ಬೆಳೆ ಸಾಲ ಯೋಜನೆಯನ್ನು 2019ರ ಜುಲೈ 10ರಂದು ಜಾರಿಗೆ ತಂದಿತ್ತು.

ರಾಜ್ಯ ಸರಕಾರವು 2019ರಲ್ಲಿ ಗೃಹ ಲಕ್ಷ್ಮಿ ಯೋಜನೆ ಹೆಸರಿನಲ್ಲಿ 24.50 ಲಕ್ಷ ರೈತರಿಗೆ 14,500 ಕೋಟಿ ರೂ. ಬೆಳೆ ಸಾಲ ವಿತರಿಸಲು 2020ರಲ್ಲಿ ಜಿಲ್ಲಾವಾರು ಗುರಿ ನಿಗದಿಪಡಿಸಿತ್ತು. ಕೇಂದ್ರ ಸರಕಾರದ ಶೇ.2 ಬಡ್ಡಿ ಸಹಾಯ ಧನ ಮತ್ತು ಶೇ.3ರ ಪ್ರೋತ್ಸಾಹಧನ ಪಡೆಯಲು ಕೆಸಿಸಿ ಖಾತೆ ಮೂಲಕವೇ ಸಾಲ ವಿತರಿಸಲು ಸೂಚಿಸಿತ್ತು.

ಕುಟುಂಬ ಸದಸ್ಯರು ಒಟ್ಟಾರೆ ಎಷ್ಟೇ ಸಾಲ ಪಡೆದಿದ್ದರೂ ಯಾವ ಸದಸ್ಯನ ಸಾಲದ ಗಡುವು ಮೊದಲು ಬರುತ್ತದೋ ಅಂತಹ ಸದಸ್ಯರಿಗೆ ಮೊದಲ ಮೂರುಲಕ್ಷಗಳವರೆಗಿನ ಸಾಲಕ್ಕೆ ಮಾತ್ರ ರಾಜ್ಯ ಸರಕಾರದ ಬಡ್ಡಿ ಸಹಾಯಧನ ದೊರೆಯಲಿದೆ ಎಂದು ಹೇಳಿತ್ತು. ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರ ಆಭರಣಗಳ ಮೇಲೆ ಶೇ.3ರ ಬಡ್ಡಿ ದರದಲ್ಲಿ ಬೆಳೆ ಸಾಲ ನೀಡುವ ಉದ್ದೇಶವಿತ್ತು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಮತ್ತು ಡಿಸಿಸಿ ಬ್ಯಾಂಕ್‌ಗಳ ಮೂಲಕ ಜಾರಿಗೊಳಿಸಿತ್ತು. ಗರಿಷ್ಠ 5 ಎಕರೆ ಭೂ ಹಿಡುವಳಿ ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಕುಟುಂಬದಲ್ಲಿ ಪಹಣಿ ಹೊಂದಿದ ಸಣ್ಣ ಮತ್ತು ಅತಿಸಣ್ಣ ರೈತರೆಲ್ಲರಿಗೂ ಪ್ರತ್ಯೇಕವಾಗಿ ಈ ಯೋಜನೆಯು ಅನ್ವಯವಾಗುತ್ತದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News