ಕುಂದಾಪುರ, ಬೈಂದೂರಿನಲ್ಲಿ ಮಳೆ ಅಬ್ಬರ: ತಗ್ಗು ಪ್ರದೇಶ ಜಲಾವೃತ್ತ

Update: 2022-06-30 14:54 GMT

ಕುಂದಾಪುರ :  ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಗುರುವಾರ ಬಿರುಸಿನ ಮಳೆಯಾಗಿದೆ. ಈ ಮುಂಗಾರಿನಲ್ಲಿ ಎಡೆಬಿಡದೆ ಸುರಿದ ಪ್ರಥಮ ಮಳೆ ಇದಾಗಿದ್ದು ಬೈಂದೂರು, ಹೆಮ್ಮಾಡಿ, ಕೊಲ್ಲೂರು,ಕುಂದಾಪುರ, ತೆಕ್ಕಟ್ಟೆ, ಕೋಟ ಸಹಿತ ಮಲೆನಾಡು ತಪ್ಪಲು ಪ್ರದೇಶವಾದ ಹೊಸಂಗಡಿ ಭಾಗದಲ್ಲಿ ದಿನವಿಡೀ ನಿರಂತರವಾಗಿ ಮಳೆ ಸುರಿಯುತ್ತಿರುವ ವರದಿ ಬಂದಿದೆ.

ಹೆಮ್ಮಾಡಿ, ಶಂಕರನಾರಾಯಣ, ತಲ್ಲೂರು ಪ್ರದೇಶಗಳಲ್ಲಿ ಕೆಲ ಮನೆಗಳ ಗೋಡೆ ಕುಸಿತ, ಗಾಳಿಯಿಂದ ಮಾಡಿಗೆ ಹೊದೆಸಿದ ಸೀಟ್ ಹಾರಿಹೋದ ಮಾಹಿತಿ ಬಂದಿವೆ. ಉಳಿದಂತೆ ತಾಲೂಕಿನ ಪಂಚ ನದಿಗಳಲ್ಲಿ ನೀರಿನ ಮಟ್ಟ ಏರಿ ನೆರೆ ಭೀತಿ ಉಂಟಾಗಿದೆ. ಮಾರಣಕಟ್ಟೆ ದೇವಸ್ಥಾನದ ಅವರಣಕ್ಕೆ ನೀರು ನುಗ್ಗಿದೆ. 

ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಪಂ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ರಸ್ತೆಯ ಐದಾರು ಮನೆಗಳಿಗೆ ಮಳೆ ನೀರು ನುಗ್ಗಿದ್ದು ಗೃಹೋಪಯೋಗಿ ವಸ್ತುಗಳ ಸಹಿತ ವ್ಯಾಪಕ ಹಾನಿ ಸಂಭವಿಸಿದೆ. ಮನೆ ಮಂದಿ ಹೊರಬರದ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಪಡುಚಾವಡಿಬೆಟ್ಟು ಎಂಬಲ್ಲಿ ದಲಿತರ ಎರಡುಮನೆ ಸಹಿತ ನಾಲ್ಕಾರು ಮನೆ ಮಂದಿ ಜಲ ದಿಗ್ಬಂಧನದಲ್ಲಿದ್ದು ಚಿಂತಾಕ್ರಾಂತರಾಗಿದ್ದಾರೆ.

ಬುಧವಾರ ಸಂಜೆಯಿಂದ ಸುರಿಯುತ್ತಿರುವ ಮಳೆಗೆ ಬೈಂದೂರು, ಕುಂದಾಪುರ ತಾಲೂಕಿನಲ್ಲಿ ಜನಜೀವನ ಭಾಗಶಃ ಅಸ್ತವ್ಯಸ್ಥವಾಗಿದೆ.  ವಾರಾಹಿ, ಸೌಪರ್ಣಿಕಾ, ಚಕ್ರಾ, ಕುಬ್ಜಾ, ಖೇಟಕಿ ನದಿಗಳ ನೀರಿನ ಹರಿವು ಏರಿದೆ. ಚಿಕ್ಕ ಮಳೆಗೂ ನೆರೆ ಬರುವ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾಲ್ಬುಡ, ಚಿಕ್ಕಳ್ಳಿ, ಕೋಣ್ಕಿ, ಬಡಾಕೆರೆಯಲ್ಲಿ ನೆರೆ ಭೀತಿ ಕಾಣಿಸಿಕೊಂಡಿದೆ. 

ಸಮುದ್ರ ಕೊರೆತ ಭೀತಿ: ಮರವಂತೆಯಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಿದ್ದು, ತಡೆಗೋಡೆ ಕಲ್ಲುಗಳು ಜಾರಿವೆ. ಕೊರವಡಿ, ತೆಕ್ಕಟ್ಟೆ, ಗೋಪಾಡಿ, ಬೀಜಾಡಿ ಗ್ರಾಮದಲ್ಲಿ ಮನೆಗಳಿಗೂ ನೆರೆ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ ವಿವಿದೆಡೆ ಕೃತಕ ಕೆರೆ ಸೃಷ್ಟಿಯಾಗಿವೆ. ತೆಕ್ಕಟ್ಟೆ ಮತ್ತು ಕುಂಭಾಶಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ  ಹರಪನಕೆರೆ - ಹೊಳೆಕಟ್ಟು -೪ನೇ ವಾರ್ಡ್ ಹೋಗುವ ಎಲ್ಲಾ ದಾರಿ, ರಸ್ತೆ ನೆರೆಯಿಂದ ಮುಳುಗಿ ಹೋಗಿತ್ತು. ಕಾಳಾವರ, ವಕ್ವಾಡಿ, ಮಲ್ಯಾಡಿ ಸಹಿತ ವಿವಿದೆಡೆ ಕೃಷಿಭೂಮಿ ಜಲಾವೃತಗೊಂಡಿದೆ.

ಹಕ್ಲಾಡಿ ಗ್ರಾಮ ಭಜನಾ ಮಂದಿರ ಬಳಿ ವಾಣಿಜ್ಯ ಸಂಕೀರ್ಣ ಹಾಗೂ ಮನೆಗೆ ನೀರು ನುಗ್ಗಿ, ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಯಾಗಿದ್ದು, ೨೦ ಸಾವಿರಕ್ಕೂ ಹೆಚ್ಚು ನಷ್ಟ ಸಂಭಿಸಿದೆ. ಟೈಲರ್ ಅಂಗಡಿಗೆ ನೀರು ನುಗ್ಗಿದ್ದು, ಬಟ್ಟೆಗಳು ಮಳೆ ನೀರಲ್ಲಿ ತೊಯ್ದು ಹೋಗಿ ಸಾವಿರಾರು ರೂ. ನಷ್ಟ ಸಂಭವಿಸಿದೆ. ಸೆಲೂನ್, ಬ್ಯೂಟಿ ಪಾರ್ಲರ್, ಕೋಳಿಫಾರಂಗಳಿಗೂ ಮಳೆ ನೀರು ನುಗ್ಗಿ ಪಾತ್ರಗಳಲ್ಲಿ ನೀರು ಹೊರಚೆಲ್ಲುವ ದೃಶ್ಯಕಂಡುಬಂದಿವೆ.

ಹೆಮ್ಮಾಡಿಯಲ್ಲಿ ಎರಡು ವಾಸ್ತವ್ಯದ ಮನೆಗೆ ಹಾನಿಯಾಗಿದ್ದು ೧ ಲಕ್ಷ, ಗುಜ್ಜಾಡಿಯಲ್ಲಿ ಮನೆ ಕುಸಿದು ೩೦ ಸಾವಿರ, ಶಂಕರನಾರಾಯಣದಲ್ಲಿ ಎರಡು ಮನೆ ಕುಸಿದು ೬೦ ಸಾವಿರ ನಷ್ಟ ಸಂಭವಿಸಿದೆ. ನೆರೆ ಪರಿಸ್ಥಿತಿ ಎದುರಿಸಲು ತಾಲೂಕು ಆಡಳಿತ ಸಿದ್ದವಾಗಿದ್ದು, ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ನೆರೆ ಪ್ರದೇಶಕ್ಕೆ ದೋಣಿ ಅಗತ್ಯ ಬಿದ್ದಲ್ಲಿ ಅದರ ವ್ಯವಸ್ಥೆ ಕೂಡಾ ಮಾಡಿಕೊಳ್ಳ ಲಾಗಿದೆ. ಜನ- ಜಾನುವಾರು ಸ್ಥಳಾಂತರಿಸುವ ಸಂಭವ ಎದುರಾದರೆ ಅದಕ್ಕೂ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಕುಂದಾಪುರ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News