×
Ad

ದ.ಕ. ಜಿಲ್ಲೆಯಲ್ಲಿ ಭಾರೀ ಮಳೆಗೆ 11 ಮನೆಗಳಿಗೆ ಸಂಫೂರ್ಣ ಹಾನಿ

Update: 2022-06-30 20:54 IST

ಮಂಗಳೂರು: ದ.ಕ.ಜಿಲ್ಲಾದ್ಯಂತ ಗುರುವಾರ ಸುರಿದ ಧಾರಾಕಾರ ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು, ಅಪಾರ ನಷ್ಟವಾಗಿದೆ.

ಜಿಲ್ಲೆಯಲ್ಲಿ 11 ಮನೆಗಳಿಗೆ ಸಂಪೂರ್ಣ ಮತ್ತು ೭೭ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅದಲ್ಲದೆ ೩೮ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ೩ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಶುಕ್ರವಾರವೂ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತುರ್ತು ಕ್ರಮಗಳನ್ನು ಕೈಗೊಂಡಿವೆ. ನೀರು ತುಂಬುವ ತಗ್ಗು ಪ್ರದೇಶ, ಕೆರೆ, ನದಿತೀರ, ಸಮುದ್ರತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರಿಕೆ ವಹಿಸಬೇಕು. ಅಲ್ಲದೆ ಪ್ರವಾಸಿಗರು, ಸಾರ್ವಜನಿಕರು ನದಿ ಮತ್ತು ಸಮುದ್ರತೀರಕ್ಕೆ ತೆರಳದಂತೆ ಹಾಗೂ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಡಳಿತ ಆದೇಶಿಸಿದೆ.

ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು ಹಾಗೂ ವಿಪತ್ತು ನಿರ್ವಹಣೆಯನ್ನು ಚಾಚೂ ತಪ್ಪದೆ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.

ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ಸದಾ ಜಾಗೃತರಾಗಿರಬೇಕು ಮತ್ತು ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು, ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಪ್ರತೀ ತಾಲೂಕುಗಳಲ್ಲಿ ಕಾಳಜಿ ಕೇಂದ್ರವನ್ನು ತೆರದು ಸನ್ನದ್ಧ ಸ್ಥಿತಿಯಲ್ಲಿರಿಸಿಕೊಳ್ಳಬೇಕು ಎಂದು ಡಿಸಿ ಸೂಚಿಸಿದ್ದಾರೆ.

ಜು.೪ರಿಂದ ೭ರವರೆಗೆ ಜಿಲ್ಲಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಅತೀ ಹೆಚ್ಚು ಮಳೆಯಾಗುವ ಸಂಭವವಿರುವುದರಿಂದ ಪ್ರತಿ ತಾಲೂಕು ಘಟಕಗಳು, ತಾಲೂಕು ವಿಪತ್ತು ನಿರ್ವಹಣಾ ಸಮಿತಿಗಳು ಪೂರ್ವ ಸನ್ನದ್ಧವಾಗಿರಬೇಕು ಎಂದು ಡಿಸಿ ತಿಳಿಸಿದ್ದಾರೆ.

ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ ಕಂಟ್ರೋಲ್ ರೂಂ ೧೦೭೭ ಅಥವಾ ೦೮೨೪ ೨೪೪೨೫೯೦ನ್ನು ಸಂಪರ್ಕಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ  ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಶುಕ್ರವಾರ ರಜೆ: ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಪದವಿ ಪೂರ್ವ, ಪದವಿ, ಮತ್ತು ಸ್ನಾತಕೋತ್ತರ ಕಾಲೇಜುಗಳು, ಸರಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಜುಲೈ ೧ರಂದು ರಜೆ ಘೋಷಿಸಲಾಗಿದೆ.

ಜಿಲ್ಲಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಆಗಮನ ಮತ್ತು ನಿರ್ಗಮನದಲ್ಲಿ ವ್ಯತ್ಯಯ ಉಂಟಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಇಂಡಿಗೊ ವಿಮಾನ, ಹೈದರಾಬಾದ್‌ನಿಂದ ಮಂಗಳೂರಿಗೆ ಆಗಮಿಸಿದ ಇಂಡಿಗೊ ವಿಮಾನವು ಗುರುವಾರ ನಿಗದಿತ ಸಮಯಕ್ಕಿಂತ ತಡವಾಗಿ ಲ್ಯಾಂಡ್ ಆಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಇಂಡಿಗೊ ವಿಮಾನ ೭ ನಿಮಿಷ ತಡವಾಗಿ ಆಗಮಿಸಿದ್ದು, ೨೫ ನಿಮಿಷ ವಿಳಂಬವಾಗಿ ಬೆಂಗಳೂರಿಗೆ ತೆರಳಿದೆ. ಕೊಲ್ಕತ್ತಾ-ಬೆಂಗಳೂರು-ಮಂಗಳೂರು ವಿಮಾನವು ಗುರುವಾರ ೧೬ ನಿಮಿಷ ತಡವಾಗಿ ಆಗಮಿಸಿದ್ದು, ೫೦ ನಿಮಿಷ ವಿಳಂಬವಾಗಿ ತೆರಳಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News