ದ.ಕ.ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ, ಕಡಲ್ಕೊರೆತಕ್ಕೆ ಸೂಕ್ತ ಪರಿಹಾರ ಒದಗಿಸಲು ಶಾಸಕ ಯು.ಟಿ. ಖಾದರ್ ಸೂಚನೆ

Update: 2022-06-30 16:34 GMT

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಬಹಳಷ್ಟು ಮನೆಗಳಿಗೆ ಹಾನಿ, ಗುಡ್ಡ ಕುಸಿತ ಹಾಗು ಕಡಲ್ಕೊರೆತದಿಂದ ಅನೇಕ ಮನೆಗಳು ಅಪಾಯದ ಅಂಚಿನಲ್ಲಿವೆ. ಸರಕಾರ ಸೂಕ್ತ ಕ್ರಮಕೈಗೊಂಡು ಕಾರ್ಯಾಚರಿಸುವಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಶಾಸಕ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ.

ಮಳೆ ಹಾನಿ ಹಾಗೂ ಕಡಲ್ಕೊರೆತಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು ಮತ್ತು ಮೀನುಗಾರಿಕಾ ಸಚಿವರು ಸ್ಥಳ ವೀಕ್ಷಣೆ ಮಾಡದೇ ಇರುವುದು ಅತ್ಯಂತ ಖೇದಕರ, ತಕ್ಷಣ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ತಗ್ಗು ಪ್ರದೇಶ ಹಾಗೂ ಅಪಾಯದ ಅಂಚಿನಲ್ಲಿರುವ ಪ್ರದೇಶಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಅಗ್ನಿ ಶಾಮಕ ದಳ ಹಾಗೂ ಗೃಹ ರಕ್ಷಕ ದಳ ಸಿಬ್ಬಂದಿಗಳನ್ನು ನೇಮಿಸುವಂತೆ ಆಗ್ರಹಿಸಿದ್ದಾರೆ.

ಮಂಗಳೂರು ವಿಧಾನ ಸಭಾ ಕ್ಷೇತ್ರದ ಸುಮಾರು 53 ಕಡೆಗಳಲ್ಲಿ ಮನೆ ಹಾನಿ, ಗೋಡೆ ಕುಸಿತ, ಗುಡ್ಡ ಕುಸಿತ ಉಂಟಾಗಿದ್ದು, ಪಾವೂರು ಗ್ರಾಮದ ಇನೋಳಿಯ ಸಿದ್ದೀಕ್ ಎಂಬವರಿಗೆ ಸ್ವಲ್ಪ ಮಟ್ಟಿನ ತಲೆಗೆ ಪೆಟ್ಟಾಗಿ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ಸಾಗಿದ್ದಾರೆ. ಕೆಲವು ಕಡೆಗಳಲ್ಲಿ ಮಳೆಯಿಂದಾಗಿ ಮನೆ ಹಾಗೂ ಅಂಗಡಿ ಮುಗ್ಗಟ್ಟುಗಳಿಗೆ ನೀರು ನುಗ್ಗಿ ಅಗತ್ಯ ಸಾಮಗ್ರಿಗಳು ನಿರುಪಯುಕ್ತವಾಗಿದ್ದು, ಅಂಥವರನ್ನು ಗುರುತಿಸಿ ಸರಕಾರದ ನಿಯಮಾನುಸಾರ ನೀಡಲಾಗುವ ಹತ್ತು ಸಾವಿರ ರೂ. ಪರಿಹಾರವನ್ನು ತಕ್ಷಣ ನೀಡುವಂತೆ ಹಾಗೂ ಸಂಪೂರ್ಣ ಹಾನಿಯಾದ ಮನೆಗಳನ್ನು ಗುರುತಿಸಿ ಒಂದು ವಾರದ ಒಳಗಡೆ ಪರಿಹಾರ ಒದಗಿಸಿ ಮನೆ ಪುನರ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕೆಂದೂ ಅಲ್ಲದೆ ಮನೆಯ ಪಕ್ಕದಲ್ಲಿನ ಗುಡ್ಡ ಕುಸಿತ ಹಾಗೂ ಆವರಣ ಗೋಡೆ ಕುಸಿತದಿಂದ ಹಾನಿಯಾಗಿದ್ದನ್ನು ಸರಿಪಡಿಸಲು ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಶಾಸಕ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ.

ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ನಗರ ಸಭೆ, ಸೋಮೇಶ್ವರ ಪುರಸಭೆ, ಕೋಟೆಕಾರು ಪಟ್ಟಣ ಪಂಚಾಯತ್ ಹಾಗೂ ಗ್ರಾಮೀಣ ಭಾಗಕ್ಕೆ ಸಂಬಂಧಿಸಿದಂತೆ ಬೆಳ್ಮ ಗ್ರಾಮ ಪಂಚಾಯತ್ ಕಚೇರಿ ಮತ್ತು ನಾಟೆಕಲ್ ತಹಶೀಲ್ದಾರ್ ಕಚೇರಿಯಲ್ಲಿ ಪ್ರಾಕೃತಿಕ ವಿಕೋಪ ತುರ್ತು ಪರಿಹಾರ ಹಾಗೂ ಸಹಾಯವಾಣಿ ಕೇಂದ್ರ ತೆರೆಯಲು ಸೂಚನೆ ನೀಡಲಾಗಿದೆ.

ಪ್ರತೀ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಕಾರ್ಯ ಪ್ರವೃತ್ತರಾಗಲು ಸೂಚನೆ ನೀಡಲಾಗಿದೆಯೆಂದು ಅಗತ್ಯ ಸಂದರ್ಭದಲ್ಲಿ ಉಳ್ಳಾಲ ತಾಲೂಕು ಕಚೇರಿಯ 08242204424 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹು ದೆಂದು ಶಾಸಕ ಯು.ಟಿ.ಖಾದರ್ ಪ್ರಕಟನೆಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News