ವಿಶ್ವದ ಬೃಹತ್ ಚಾಕೊಲೆಟ್ ಸ್ಥಾವರದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆ

Update: 2022-06-30 16:51 GMT
Photo: Twitter/@rtl_today

ಬ್ರಸೆಲ್ಸ್, ಜೂ.30: ಬೆಲ್ಜಿಯಂನ ವೀಝೆ ನಗರದಲ್ಲಿರುವ ವಿಶ್ವದ ಅತ್ಯಂತ ಬೃಹತ್ ಚಾಕೊಲೆಟ್ ಸ್ಥಾವರದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಸ್ಥಾವರದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಸ್ವಿಝರ್ಲ್ಯಾಂಡಿನ ಬ್ಯಾರಿ ಕ್ಯಾಲೆಬೌಟ್ ಸಂಸ್ಥೆಯ ಮಾಲಕತ್ವದ ಈ ಫ್ಯಾಕ್ಟರಿಯಲ್ಲಿ ದ್ರವ ಚಾಕೊಲೆಟ್ ತಯಾರಿಸಿ 73 ಸಂಸ್ಥೆಗಳಿಗೆ ಪೂರೈಸಲಾಗುತ್ತದೆ. ಆ ಸಂಸ್ಥೆಗಳು ಚಾಕೊಲೆಟ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತವೆ.

  ಬ್ಯಾಕ್ಟೀರಿಯಾ ಪರೀಕ್ಷೆ ನಡೆಸಿದ ದಿನದಿಂದ ಉತ್ಪಾದಿಸಲಾದ ಉತ್ಪನ್ನಗಳನ್ನು ತಡೆಹಿಡಿಯಲಾಗಿದೆ. ಕಲುಷಿತ ಉತ್ಪನ್ನಗಳನ್ನು ಖರೀದಿಸಿರಬಹುದಾದ ಎಲ್ಲಾ ಗ್ರಾಹಕರನ್ನೂ ಸಂಪರ್ಕಿಸಲಾಗುತ್ತಿದೆ. ಮುಂದಿನ ಸೂಚನೆಯವರೆಗೆ ಕಾರ್ಖಾನೆಯ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಜೂನ್ 25ರ ಬಳಿಕ ಸಂಸ್ಥೆಯಿಂದ ಖರೀದಿಸಿದ ದ್ರವ ಚಾಕೊಲೆಟ್ ಸರಕನ್ನು ಮರಳಿಸುವಂತೆ ನಮ್ಮ ಗ್ರಾಹಕರಿಗೆ ತಿಳಿಸಲಾಗಿದೆ ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

ವೀಝೆ ಸ್ಥಾವರದಲ್ಲಿ ನೇರವಾಗಿ ಚಾಕೊಲೆಟ್ ಉತ್ಪಾದನೆಯಾಗದ ಕಾರಣ ಹೆಚ್ಚಿನ ಆತಂಕಕ್ಕೆ ಕಾರಣವಿಲ್ಲ. ಈ ಬಗ್ಗೆ ಬೆಲ್ಜಿಯಂನ ಆಹಾರ ಸುರಕ್ಷತಾ ಸಂಸ್ಥೆಗೆ ಮಾಹಿತಿ ನೀಡಲಾಗಿದ್ದು ಅವರು ತನಿಖೆ ಆರಂಭಿಸಿದ್ದಾರೆ ಎಂದವರು ವಿವರಿಸಿದ್ದಾರೆ. ಸಾಲ್ಮೊನೆಲಾ ಬ್ಯಾಕ್ಟೀರಿಯಾವು ಆಹಾರ ವಸ್ತುಗಳಲ್ಲಿ ಕಂಡುಬರುತ್ತಿದ್ದು ಮನುಷ್ಯರಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News