ಕೋಲ್ಡ್ ಸ್ಟೋರೇಜ್ ಕಾಮಗಾರಿ ಟೆಂಡರ್: ಕೃಷಿ ಇಲಾಖೆಯಿಂದ ಸಿಎಂ ಆದೇಶ ಉಲ್ಲಂಘನೆ?

Update: 2022-07-01 03:10 GMT

ಬೆಂಗಳೂರು: ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕಾಗಿ ಸಿವಿಲ್ ಕಾಮಗಾರಿಗಳಿಗಾಗಿ ಟೆಂಡರ್ ಪ್ರಕ್ರಿಯೆ ನಡೆಸಿರುವ ಕೃಷಿ ಇಲಾಖೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೊರಡಿಸಿದ್ದ ಆದೇಶವನ್ನೇ ಉಲ್ಲಂಘಿಸಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.

ರಾಜ್ಯಮಟ್ಟದ ಕೆಲವೇ ಕೆಲವು ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಭಾಗವಾಗಿಯೇ ಸಚಿವ ಬಿ.ಸಿ.ಪಾಟೀಲ್ ತವರು ಕ್ಷೇತ್ರ ಹಿರೇಕೆರೂರು ಸೇರಿದಂತೆ ವಿವಿಧ ಜಿಲ್ಲೆಗಳನ್ನು ಒಟ್ಟುಗೂಡಿಸಿ ಪ್ಯಾಕೇಜ್‌ಗಳನ್ನು  ರೂಪಿಸಿರುವುದರ ಹಿಂದೆ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ ಎಂಬ ಬಲವಾದ ಆಪಾದನೆ  ಕೇಳಿ ಬಂದಿದೆ. ಈ ಸಂಬಂಧ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆಗಳು  'the-file.in'ಗೆ ಲಭ್ಯವಾಗಿದೆ.

ಆಯಾ ಜಿಲ್ಲೆಗೆ ಅಗತ್ಯವಿರುವ ಕಾಮಗಾರಿಗಳಿಗೆ ಅನುಗುಣವಾಗಿ ಆಯಾ ಜಿಲ್ಲೆಗಳಿಗೆ ಸೀಮಿತಗೊಳಿಸಿ ಕಾಮಗಾರಿ ಪ್ಯಾಕೇಜ್‌ಗಳನ್ನು ಮಾಡಬೇಕು ಎಂದು ಮುಖ್ಯಮಂತ್ರಿ ಹೊರಡಿಸಿದ್ದ  ಆದೇಶವನ್ನೇ ಉಲ್ಲಂಘಿಸಿರುವ ಕೃಷಿ ಇಲಾಖೆಯು ಸಿವಿಲ್ ಕಾಮಗಾರಿಗಳನ್ನು ನಡೆಸಲು ಕರ್ನಾಟಕ ಗೃಹ ಮಂಡಳಿಗೆ ವಹಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಶೇ.40ರಷ್ಟು ಕಮಿಷನ್‌ಗೆ ಬೇಡಿಕೆ ಇಡಲಾಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘವು ಆರೋಪಿಸಿ ಸಲ್ಲಿಸಿದ್ದ ದೂರಿನ ಕುರಿತು ಪ್ರಧಾನಿ ಕಚೇರಿಯು ವಿವರಣೆ ಕೇಳಿರುವ ಬೆನ್ನಲ್ಲೇ ಕೃಷಿ ಇಲಾಖೆಯು ಸರಕಾರದ ಆದೇಶ ಉಲ್ಲಂಘಿಸಿ ಪ್ಯಾಕೇಜ್ ಟೆಂಡರ್ ಕರೆದಿರುವುದು ಮುನ್ನೆಲೆಗೆ ಬಂದಿದೆ.

ಕೃಷಿ ಇಲಾಖೆಯು ಕರ್ನಾಟಕ ಗೃಹ ಮಂಡಳಿಯ ಮೂಲಕ 79 ಕೋಟಿ ರೂ.ಯ ವಿವಿಧ ಯೋಜನೆಗಳಿಗೆ ಹಿರೇಕೆರೂರು, ಕೋಡ, ರಟ್ಟೆಹಳ್ಳಿ, ಶಿಗ್ಗಾವ್, ಬನವಾಸಿ, ಕಲಬುರಗಿ, ಕೊಟ್ಟೂರು, ಕೊಪ್ಪಳ, ಧಾರವಾಡ, ಬಾಗಲಕೋಟೆ ಮತ್ತು ಬೆಳಗಾವಿ ಸೇರಿಸಿ ಪ್ಯಾಕೇಜ್ ಮಾಡಿ ಟೆಂಡರ್ ಆಹ್ವಾನಿಸಿದೆ. ಟೆಂಡರ್ ಕರೆಯುವಾಗ ಇಲಾಖೆಯು ವಿವಿಧ ಜಿಲ್ಲೆಗಳನ್ನು ಸೇರಿಸಿ ಪ್ಯಾಕೇಜ್ ಮಾಡಿರುವುದು ಆರ್ಥಿಕ  ಇಲಾಖೆ ಹೊರಡಿಸಿದ ನಿರ್ದೇಶನಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ವಿವರಿಸಲಾಗಿದೆ ಎಂದು ಗೊತ್ತಾಗಿದೆ.

ಪ್ಯಾಕೇಜುಗಳ ವಿವರ: ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡ, ರಟ್ಟಹಳ್ಳಿ ಮತ್ತು ಶಿಗ್ಗಾವ್, ಉತ್ತರ ಕನ್ನಡ ಜಿಲ್ಲೆಯ ಬನವಾಸಿ ತಾಲೂಕು, ಕಲಬುರಗಿ ಜಿಲ್ಲೆಯ ಕೊಟ್ಟೂರು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು, ಧಾರವಾಡ ಜಿಲ್ಲೆ, ಬಾಗಲಕೋಟೆ ಜಿಲ್ಲೆ, ಬೆಳಗಾವಿಯ ಸವದತ್ತಿ ಸೇರಿ ಒಂದು ಪ್ಯಾಕೇಜ್ ಮಾಡಲಾಗಿದೆ.

ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ ಜಿಲ್ಲೆಯಲ್ಲಿ ಕೋಲ್ಡ್ ಸ್ಟೋರೇಜ್ ಘಟಕದ ನಿರ್ಮಾಣಕ್ಕೆ ಪ್ಯಾಕೇಜ್ ರೂಪಿಸಿದ್ದರೆ ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ ಬೆಂಗಳೂರು ನಗರ ಜಿಲ್ಲೆಗಳಲ್ಲಿ ಕೃಷಿ ಕೇಂದ್ರಕ್ಕಾಗಿ ಇಂಟೆಲಿಜೆನ್ಸ್ ನಿರ್ಮಾಣ ಕಾಮಗಾರಿ ಪ್ಯಾಕೇಜ್ ಮಾಡಲಾಗಿದೆ.

ಅದೇ ರೀತಿ ಹಾಸನ, ದಕ್ಷಿಣ ಕನ್ನಡ, ಮಡಿಕೇರಿ ಮತ್ತು ಮಂಡ್ಯದಲ್ಲಿ ಸಮಗ್ರ ಕೃಷಿ ವ್ಯವಸ್ಥೆಯ ಉತ್ತೇಜನದ ಉತ್ಕೃಷ್ಟತೆಯ ನಿರ್ಮಾಣ ಮತ್ತು ಮೈಸೂರಿನಲ್ಲಿ ಕೃಷಿ ಕೇಂದ್ರದ ಕೃತಕ ಬುದ್ಧಿಮತ್ತೆ ನಿರ್ಮಾಣ, ಬಾಗಲಕೋಟ, ಗದಗ, ಚಿಕ್ಕೋಡಿ, ವಿಜಯಪುರ, ಉತ್ತರ ಕನ್ನಡ ಮತ್ತು ಹಾವೇರಿಯಲ್ಲಿ ಸಮಗ್ರ ಕೃಷಿ ಪದ್ಧತಿಯ ಉತ್ತೇಜನದ ಉತ್ಕೃಷ್ಟತೆಯ ನಿರ್ಮಾಣ, ಹಾವೇರಿಯಲ್ಲಿ ರೈತರ ವಸತಿ ನಿಲಯ, ಬಯಲು ರಂಗಮಂದಿರ ಮತ್ತು ಕೃಷಿ ವಸ್ತುಸಂಗ್ರಹಾಲಯ ನಿರ್ಮಾಣ ಪ್ಯಾಕೇಜ್ ರೂಪಿಸಲಾಗಿದೆ.

ವಿಜಯಪುರ, ರಾಯಚೂರು, ಕಲಬುರಗಿಯಲ್ಲಿ ಸಮಗ್ರ ಕೃಷಿ ವ್ಯವಸ್ಥೆಯ ಉತ್ತೇಜನದ ಉತ್ಕೃಷ್ಟತೆಯ ನಿರ್ಮಾಣ ಕಾಮಗಾರಿ ನಡೆಸಲು ಕರ್ನಾಟಕ ಗೃಹ ಮಂಡಳಿ ಮೂಲಕ ಟೆಂಡರ್ ಆಹ್ವಾನಿಸಿರುವುದು ಗೊತ್ತಾಗಿದೆ.

ಟೆಂಡರ್ ಅಧಿಸೂಚನೆ ಹಾಗೂ ಮಾಡಿರುವ ಕಾಮಗಾರಿ ಪ್ಯಾಕೇಜ್‌ಗಳನ್ನು ರದ್ದುಪಡಿಸಲು ನಿರ್ದೇಶನ ನೀಡುವಂತೆ ಮರಿಲಿಂಗೇಗೌಡ ಮಾಲಿ ಪಾಟೀಲ್ ಎಂಬವರು ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲಿ  ಮನವಿ ಮಾಡಿದ್ದಾರೆ.

‘ಜಿಲ್ಲಾ  ವ್ಯಾಪ್ತಿಯನ್ನು ಮೀರಿ ಪ್ಯಾಕೇಜ್’

ಇಲಾಖೆಯು ಜಿಲ್ಲಾ ವ್ಯಾಪ್ತಿಯನ್ನು ಮೀರಿ ಪ್ಯಾಕೇಜ್ ಮಾಡಿದೆ. ಇದು ಹಣಕಾಸು ಇಲಾಖೆಯ ಇತ್ತೀಚಿನ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರಿಂದ ತಾಲ್ಲೂಕು ಮಟ್ಟದ ಸಣ್ಣ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ರಾಜ್ಯ ಮಟ್ಟದಲ್ಲಿ ಕೆಲವು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಮರಿಲಿಂಗೇಗೌಡ ಮಾಲಿ ಪಾಟೀಲ್ ಅವರು ಆರೋಪಿಸುತ್ತಾರೆ.

ಆದರೆ ಇಲಾಖೆ ಅಧಿಕಾರಿಗಳು ಯಾವುದೇ ಪ್ಯಾಕೇಜ್ ಮಾಡಿ ಟೆಂಡರ್ ಕರೆದಿಲ್ಲ. ಕಾಮಗಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಿದ್ದು, ಯಾವುದೇ ಪ್ಯಾಕೇಜ್ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರು ರಾಜೀನಾಮೆ ನೀಡುವ ಮುನ್ನ  ಅಂದಾಜು ೬,೫೦೦ ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ನಡೆಸಲು ಕರೆದಿದ್ದ ಟೆಂಡರ್‌ನಲ್ಲಿಯೂ ಗುರುತರ ಆರೋಪಗಳು ಕೇಳಿ ಬಂದಿದ್ದನ್ನು ಸ್ಮರಿಸಬಹುದು.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News