ಮೆಕ್ಸಿಕೋ: ಮೊಸಳೆಯನ್ನು ವಿವಾಹವಾದ ಮೇಯರ್

Update: 2022-07-01 17:20 GMT

ಮೆಕ್ಸಿಕೋ ಸಿಟಿ, ಜು.1: ಮೆಕ್ಸಿಕೋದಲ್ಲಿ ಶತಮಾನಗಳಷ್ಟು ಹಳೆಯ ಆಚರಣೆಯ ಪ್ರಕಾರ ಅಲ್ಲಿನ ನಗರದ ಮೇಯರ್ ಮೊಸಳೆಯನ್ನು ವಿವಾಹವಾಗಿದ್ದಾರೆ. ಈ ವಿಶಿಷ್ಟ ವಿವಾಹಕ್ಕೆ ಮಹತ್ವದ ಉದ್ದೇಶವಿದೆ. ಅಲ್ಲಿನ ಸಂಪ್ರದಾಯದ ಪ್ರಕಾರ, ನದಿಯಲ್ಲಿ ಮೀನು ಹಿಡಿಯಲು ಅನುಕೂಲವಾಗುವಂತೆ ಸಾಕಷ್ಟು ಮಳೆಯಾಗಿ, ಬೆಳೆ ಬೆಳೆಯಬೇಕಿದ್ದರೆ ಪ್ರಕೃತಿಯ ವರದಾನದ ಅಗತ್ಯವಿದೆ. ಇದಕ್ಕಾಗಿ ಮೊಸಳೆಯನ್ನು ವಿವಾಹವಾಗುವ ಆಚರಣೆಯಿದೆ.

 ಹಿಸ್ಪಾನಿಕ್ ಯುಗಕ್ಕೂ ಮೊದಲಿನ ಅವಧಿಯ ಚೊಂಟಾಲ್ ಮತ್ತು ಹುವೆ ಬುಡಕಟ್ಟು ಸಮುದಾಯದಲ್ಲಿ ಪ್ರಕೃತಿಯನ್ನು ಪೂಜಿಸಲು ಈ ಆಚರಣೆ ಚಾಲ್ತಿಯಲ್ಲಿತ್ತು. ಗುರುವಾರ ನಡೆದ ವಿವಾಹ ಕಾರ್ಯಕ್ರಮದಲ್ಲಿ ಸ್ಯಾನ್‌ಪೆಡ್ರೊ ಹ್ವಾಮೆಲುಲಾ ನಗರದ ಮೇಯರ್ ವಿಕ್ಟರ್ ಹ್ಯೂಗೊ ಸೊಸಾ ಪುಟ್ಟ ಮೊಸಳೆಯ ಮೂತಿಗೆ ಮುತ್ತಿಡುವ ಮೂಲಕ ಸಾಂಕೇತಿಕವಾಗಿ ವಿವಾಹವಾದರು.
 ಮೊಸಳೆ ಕಚ್ಚದಂತೆ ಅದರ ಬಾಯಿಯನ್ನು ಗಟ್ಟಿಯಾಗಿ ಕಟ್ಟಲಾಗಿತ್ತು. ಪುಟ್ಟ ರಾಜಕುಮಾರಿ ಎಂದು ಕರೆಯಲ್ಪಡುವ ಮೊಸಳೆ ಭೂಮಿತಾಯಿಯನ್ನು ಪ್ರತಿನಿಧಿಸುವ ದೇವತೆ ಎಂದು ನಂಬಲಾಗಿದ್ದು ಸ್ಥಳೀಯ ನಾಯಕನೊಂದಿಗೆ ಆಕೆಯ ವಿವಾಹವು ಮಾನವ-ದೈವಿಕ ಬಾಂಧವ್ಯದ ಸಂಕೇತ ಎಂಬ ನಂಬಿಕೆ ಅಲ್ಲಿದೆ.
 ತುತ್ತೂರಿ ಮೊಳಗುತ್ತಿದ್ದಂತೆ ಮತ್ತು ಡೋಲಿನ ಹಿಮ್ಮೇಳದಲ್ಲಿ ಸ್ಥಳೀಯರು ವಧು(ಮೊಸಳೆ)ವನ್ನು ತಮ್ಮ ತೋಳಿನಲ್ಲಿ ಎತ್ತಿಕೊಂಡು ನಗರದ ಬೀದಿಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು. ನನ್ನ ಸಂಸ್ಕೃತಿ ಮತ್ತು ಸಂಪ್ರದಾಯದ ಮೂಲದ ಬಗ್ಗೆ ನನಗೆ ಹೆಮ್ಮೆಯಿದೆ ಮತ್ತು ಈ ಆಚರಣೆಯಿಂದ ತುಂಬಾ ಸಂತೋಷವಾಗಿದೆ ಎಂದು ವಿವಾಹವನ್ನು ಆಯೋಜಿಸಿದ್ದ , ದೇವಮಾತೆ ಎಂದು ಕರೆಸಿಕೊಳ್ಳುವ ಎಲಿಯಾ ಎಡಿತ್ ಆಗ್ವಿಲರ್ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News