×
Ad

ಶಿವಸೇನೆಯ ಮೂಲಕವೇ ಶಿವಸೇನೆಯನ್ನು ಬಗ್ಗು ಬಡಿಯಲು ಹೊರಟ ಬಿಜೆಪಿ

Update: 2022-07-02 00:05 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅನಿರೀಕ್ಷಿತ ತಿರುವಿನ ಜೊತೆಗೆ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಅಂತ್ಯಗೊಂಡಿದೆ. ಅಸ್ತಿತ್ವದಲ್ಲಿದ್ದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿ ಸರಕಾರವನ್ನು ಅನೈತಿಕ ದಾರಿಯಲ್ಲಿ ಬೀಳಿಸಿ, ಶಿವಸೇನೆಯ ಬಂಡಾಯ ಶಾಸಕರ ಜೊತೆಗೆ ಬಿಜೆಪಿ ಮತ್ತೆ ಮಹಾರಾಷ್ಟ್ರದ ಅಧಿಕಾರ ಹಿಡಿದಿದೆ. ಆರ್ಥಿಕವಾಗಿ ದೇಶ ನೆಲಕಚ್ಚಿ ಕೂತಿದ್ದರೂ, ಅದರ ಪರಿಣಾಮ ಬಿಜೆಪಿಯ ಬೊಕ್ಕಸದ ಮೇಲೆ ಬಿದ್ದಿಲ್ಲ ಎನ್ನುವುದನ್ನು ಈ ಯಶಸ್ವಿ ‘ಕುದುರೆ ವ್ಯಾಪಾರ’ ಸಾಬೀತು ಪಡಿಸಿದೆ. ಸರಕಾರದ ತುರ್ತು ಬದಲಾವಣೆ ಮಹಾರಾಷ್ಟ್ರದ ಪಾಲಿಗಲ್ಲದಿದ್ದರೂ, ಬಿಜೆಪಿಯ ಪಾಲಿಗೆ ಅನಿವಾರ್ಯವಿತ್ತು. ಒಂದೇ ಕಲ್ಲಲ್ಲಿ ಅದು ಹಲವು ಹಣ್ಣುಗಳನ್ನು ಏಕಕಾಲದಲ್ಲಿ ಉದುರಿಸಿದೆ. ಭವಿಷ್ಯದಲ್ಲಿ, ಮಹಾರಾಷ್ಟ್ರದಲ್ಲಿ ಶಿವಸೇನೆ ಇನ್ನಷ್ಟು ಸಂಕುಚಿತಗೊಂಡು, ಬಿಜೆಪಿ ಆ ಜಾಗವನ್ನು ವ್ಯಾಪಿಸುವ ಎಲ್ಲ ಸೂಚನೆಗಳು ಕಾಣುತ್ತಿವೆ. ಮಹಾರಾಷ್ಟ್ರದಲ್ಲಿ ಗಟ್ಟಿಯಾಗಿ ಬೇರೂರಿದ್ದ ಪ್ರಾದೇಶಿಕ ರಾಜಕಾರಣ ಅಂತ್ಯದತ್ತ ಸಾಗುತ್ತಿದೆಯೇ? ಎನ್ನುವ ಚರ್ಚೆ ಈಗ ಮುನ್ನೆಲೆಯಲ್ಲಿದೆ. ಉದ್ಧವ್ ನೇತೃತ್ವದ ಸರಕಾರವನ್ನು ಕೆಳಗುರುಳಿಸಿ, ಹೊಸ ಮೈತ್ರಿಯೊಂದಿಗೆ ಬಿಜೆಪಿ ಅಧಿಕಾರ ಹಿಡಿದು ಇನ್ನೇನು ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಬೇಕು ಎನ್ನುವ ಹೊತ್ತಿನಲ್ಲಿ, ಸ್ಕ್ರಿಪ್ಟ್ಟ್‌ಗೆ ಅನಿರೀಕ್ಷಿತ ಕ್ಲೈಮಾಕ್ಸ್‌ನ್ನು ಬಿಜೆಪಿ ವರಿಷ್ಠರು ನೀಡಿದ್ದಾರೆ. ಶಿವಸೇನೆಯ ಬಂಡಾಯ ಅಭ್ಯರ್ಥಿಗಳ ನೇತೃತ್ವ ವಹಿಸಿದ್ದ ಏಕನಾಥ್ ಶಿಂದೆಯನ್ನು ಮುಖ್ಯಮಂತ್ರಿಯಾಗಿ ಘೋಷಿಸಿದ ಬಿಜೆಪಿ, ದೇವೇಂದ್ರ ಫಡ್ನವೀಸ್‌ರನ್ನು ಉಪಮುಖ್ಯಮಂತ್ರಿಯಾಗಿಸಿದೆ. ಇದೊಂದು ದೂರದೃಷ್ಟಿಯ ಆಯ್ಕೆಯಾಗಿದೆ. ಅಧಿಕೃತ ಶಿವಸೇನೆಯನ್ನು ಮಹಾರಾಷ್ಟ್ರದಲ್ಲಿ ಮೂಲೆಗುಂಪಾಗಿಸಿ, ತನ್ನ ಕೈಗೊಂಬೆಯಾಗಿರುವ ಪರ್ಯಾಯ ಶಿವಸೇನೆಯೊಂದನ್ನು ಮಹಾರಾಷ್ಟ್ರದಲ್ಲಿ ಮುನ್ನೆಲೆಗೆ ತರುವ ಯೋಜನೆ ಬಿಜೆಪಿಯದ್ದು. ಶಿವಸೇನೆಯ ಬಂಡಾಯ ಅಭ್ಯರ್ಥಿಗಳ ಕೈಗೆ ಅಧಿಕಾರ ಕೊಟ್ಟ ಪರಿಣಾಮವಾಗಿ, ಉಭಯ ಶಿವಸೇನೆಯ ಕಾರ್ಯಕರ್ತರೊಳಗೆ ತೀವ್ರ ಗೊಂದಲಗಳು ಸೃಷ್ಟಿಯಾಗಲಿವೆ. ಕಾರ್ಯಕರ್ತರೇ ಪರಸ್ಪರ ಬೀದಿಯಲ್ಲಿ ಹೊಡೆದಾಡಿಕೊಳ್ಳುವ ಸನ್ನಿವೇಶ ಸೃಷ್ಟಿಯಾದರೆ ಅಚ್ಚರಿಯೇನಿಲ್ಲ.

   ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡುವ ಉದ್ದೇಶ ಬಿಜೆಪಿಗೆ ಇದ್ದದ್ದೇ ಆಗಿದ್ದರೆ, ಈ ಎಲ್ಲ ರಾಜಕೀಯ ಪ್ರಹಸನಗಳ ಅಗತ್ಯವೇ ಇದ್ದಿರಲಿಲ್ಲ. 2019ರಲ್ಲಿ ಕಟ್ಟಕಡೆಯವರೆಗೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಶಿವಸೇನೆಯ ನೇತಾರ ಉದ್ಧವ್ ಠಾಕ್ರೆ ಬಿಜೆಪಿಯ ಮುಂದೆ ಪಟ್ಟು ಹಿಡಿದಿದ್ದರು. ಅದಾಗಲೇ ಮೋದಿಯ ಜನಪ್ರಿಯತೆಯಿಂದ ಬೀಗುತ್ತಿದ್ದ ಬಿಜೆಪಿ ರಾಜಿಗೆ ಸಿದ್ಧವಾಗದೇ ಇದ್ದಾಗ ಅನಿವಾರ್ಯವಾಗಿ ಶಿವಸೇನೆಯು ಮೈತ್ರಿಗಾಗಿ ಕಾಂಗ್ರೆಸ್, ಎನ್‌ಸಿಪಿ ಕಡೆಗೆ ಹೊರಳಿತು. ಮಹಾರಾಷ್ಟ್ರದ ರಾಜಕೀಯ ಇತಿಹಾಸದಲ್ಲೇ ಅದೊಂದು ಮಹತ್ತರ ತಿರುವು. ಶಿವಸೇನೆ ಏಕಕಾಲದಲ್ಲಿ ಹಿಂದುತ್ವ ಮತ್ತು ಜಾತ್ಯತೀತ ಎನ್ನುವ ಎರಡು ದೋಣಿಗಳಲ್ಲಿ ಕಾಲಿಟ್ಟು ಹುಟ್ಟು ಹಾಕುತ್ತಾ ಬಂತು. ಹಿಂದುತ್ವ ಮತ್ತು ಭಾಷಾ ಪ್ರಾದೇಶಿಕತೆಗಳೆರಡನ್ನೂ ಜೊತೆಗಿಟ್ಟುಕೊಂಡು ಬಿಜೆಪಿಯೊಂದಿಗೆ ಇದ್ದೂ ತನ್ನ ಸ್ವಂತಿಕೆಯನ್ನು ಪ್ರಕಟ ಪಡಿಸುತ್ತಾ ಬಂದಿದ್ದ ಶಿವಸೇನೆ ಬಳಿಕ ಕಟು ಹಿಂದುತ್ವದ ವಿಷಯದಲ್ಲಿ ಅನಿವಾರ್ಯ ರಾಜಿಗಳನ್ನು ಮಾಡಬೇಕಾಗಿ ಬಂತು. ಪದೇ ಪದೇ ‘ಹಿಂದುತ್ವ’ದ ಕುರಿತಂತೆ ತನ್ನ ಬದ್ಧತೆಯನ್ನು ಘೋಷಿಸಲೇಬೇಕಾದ ಅನಿವಾರ್ಯ ಸ್ಥಿತಿಗೂ ತಲುಪಿತು. ತೀವ್ರವಾದಿ ಪ್ರಾದೇಶಿಕ ರಾಜಕಾರಣಕ್ಕೆ ಆದ್ಯತೆಯನ್ನು ನೀಡಿತು. ಆದರೆ ದೇಶಾದ್ಯಂತ ಹಿಂದುತ್ವದ ಫಸಲು ಕೊಯ್ಯುವ ಹೊತ್ತಿನಲ್ಲಿ, ಶಿವಸೇನೆ, ಹಿಂದುತ್ವದ ಬತ್ತಳಿಕೆಯನ್ನು ಬದಿಗಿಟ್ಟು ಮುನ್ನಡೆಯಬೇಕಾದುದು ಕಾರ್ಯಕರ್ತರನ್ನೂ ಮುಜುಗರಕ್ಕೀಡು ಮಾಡಿತ್ತು. ಹಿಂದುತ್ವಕ್ಕೆ ಪರ್ಯಾಯವಾಗಿ ಪದೇ ಪದೇ ಭಾಷೆಯ ಹೆಸರಿನಲ್ಲಿ ಕಾಲು ಕೆದರಿ ಜಗಳಕ್ಕಿಳಿಯಬೇಕಾಗಿತ್ತು. ಆದರೆ ಅದು ಹಿಂದುತ್ವದಷ್ಟು ಪರಿಣಾಮಕಾರಿಯಾಗಿ ಫಲಕೊಡೊತುತ್ತಿರಲಿಲ್ಲ. ಭವಿಷ್ಯದಲ್ಲಿ ಇದು ಶಿವಸೇನೆಯ ಮೇಲೆ ಪರಿಣಾಮವನ್ನು ಬೀರಬಹುದು ಎನ್ನುವುದನ್ನು ಹಲವು ನಾಯಕರು ಉದ್ಧವ್ ಠಾಕ್ರೆಗೆ ಎಚ್ಚರಿಸುತ್ತಿದ್ದರು. ಆದರೆ, ಉದ್ಧವ್ ಠಾಕ್ರೆ ಅದಕ್ಕೆ ಕಿವುಡಾದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರ ಮೇಲೆ ಪರಿಣಾಮಕಾರಿಯಾದ ನಿಯಂತ್ರಣವನ್ನು ಹೊಂದಿದ್ದ ಶಿಂದೆ ಪದೇ ಪದೇ ಮೂಲೆಗುಂಪಾಗ ತೊಡಗಿದ್ದರು. ಶಿಂದೆಯ ರಾಜಕೀಯ ತರ್ಕಗಳಿಗೆ ಒಂದಿಷ್ಟು ಕಿವಿಯಾಗಿದ್ದರೂ, ಉದ್ಧವ್ ಈಗಿನ ಪರಿಸ್ಥಿತಿಯನ್ನು ಎದುರಿಸಬೇಕಾಗಿರಲಿಲ್ಲ.
 
    ಸದ್ಯ ಬಿಜೆಪಿ ಉದ್ಧವ್ ನೇತೃತ್ವದ ಶಿವಸೇನೆಯನ್ನು ಒಡೆದಿರುವುದು ಮಾತ್ರವಲ್ಲ, ಮಹಾರಾಷ್ಟ್ರದಲ್ಲಿ ಶಿಂದೆ ನೇತೃತ್ವದ ಶಿವಸೇನೆಯನ್ನೇ ಮುನ್ನೆಲೆಗೆ ತರುವ ಯೋಜನೆಯೊಂದನ್ನು ಹಾಕಿಕೊಂಡಿದೆ. ಮಹಾವಿಕಾಸ್ ಅಘಾಡಿ ಸರಕಾರವನ್ನು ಉರುಳಿಸಿದರೂ ಮತ್ತೆ ಶಿವಸೇನೆಯ ಅಭ್ಯರ್ಥಿಯನ್ನೇ ಮುಖ್ಯಮಂತ್ರಿಯಾಗಿಸುವ ಮೂಲಕ ಬಂಡಾಯ ಏಳಬಹುದಾದ ತಳಸ್ತರದ ಶಿವಸೈನಿಕರ ಕೈಗಳನ್ನು ಕಟ್ಟಿ ಹಾಕಿದೆ. ಇದು ಉದ್ಧವ್ ಠಾಕ್ರೆಗೆ ಬಹುದೊಡ್ಡ ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯು ಶಿವಸೇನೆಯೊಂದಿಗೆ ತನ್ನ ಮೈತ್ರಿಯನ್ನು ಮುಂದುವರಿಸಲು ಇದು ಸಾಧ್ಯ ಮಾಡಿಕೊಟ್ಟಿದೆ. ಶಿವಸೇನೆಯ ಪ್ರಾದೇಶಿಕ ಬೆಂಬಲ ಮತ್ತು ಬಿಜೆಪಿಯ ಹಿಂದುತ್ವ ಮುಂದಿನ ದಿನಗಳಲ್ಲಿ ಸಾಂಗವಾಗಿ ಮುಂದುವರಿಯಲಿದೆ. ಇವರ ನಡುವೆ, ಉದ್ಧವ್ ಠಾಕ್ರೆ ತನ್ನ ಪಾತ್ರವೇನು ಎನ್ನುವುದನ್ನು ಹೊಸದಾಗಿಯೇ ಕಂಡುಕೊಳ್ಳಬೇಕಾಗಿದೆ. ಉದ್ಧವ್ ತಂಡ, ತನ್ನ ಕಾರ್ಯಕರ್ತರನ್ನು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳಲಿದೆ ಎನ್ನುವುದರ ಆಧಾರದ ಮೇಲೆ ಅವರ ರಾಜಕೀಯ ಭವಿಷ್ಯ ನಿಂತಿದೆ. ಯಾವೆಲ್ಲ ರಾಜ್ಯಗಳಲ್ಲಿ ತಾನು ಅನ್ಯನಾಗಿ ಗುರುತಿಸಲ್ಪಡುತ್ತೇನೆಯೋ ಅಲ್ಲೆಲ್ಲ, ಬಿಜೆಪಿ ತನ್ನ ಬಾಲ ಬಿಚ್ಚಿರುವುದು ಪ್ರಾದೇಶಿಕ ಪಕ್ಷಗಳ ಮೈತ್ರಿಯೊಂದಿಗೆ. ಬಳಿಕ ಆ ಪ್ರಾದೇಶಿಕ ಪಕ್ಷಗಳನ್ನೇ ನುಂಗಿ ಬಿಜೆಪಿ ಅಲ್ಲಿ ತನ್ನ ಬೇರನ್ನು ಇಳಿಸಿಕೊಳ್ಳುತ್ತಾ ಬಂದಿದೆ. ಮಹಾರಾಷ್ಟ್ರದಲ್ಲಿ ಅದಕ್ಕಿರುವ ಬಹುದೊಡ್ಡ ಸಮಸ್ಯೆಯೆಂದರೆ, ‘ಶಿವಸೇನೆ ಪ್ರಾದೇಶಿಕ ಪಕ್ಷವಾದರೂ, ಬಿಜೆಪಿಯ ಹಿಂದುತ್ವ ಮತಗಳಿಗೂ ಪಾಲುದಾರ. ಜೊತೆಗೆ ತೀವ್ರವಾದ ಪ್ರಾದೇಶಿಕವಾದವನ್ನೂ ಮೈಗೂಡಿಸಿಕೊಂಡಿದೆ. ನೇರವಾಗಿ ಬಾಳಾಠಾಕ್ರೆಯ ಶಿವಸೇನೆಯನ್ನು ನುಂಗಿ ಜೀರ್ಣಿಸುವುದು ಕಷ್ಟ ಎನ್ನುವುದು ಗೊತ್ತಾಗಿ, ಠಾಕ್ರೆ ಕುಟುಂಬೇತರ ಶಿವಸೇನೆಯೊಂದನ್ನು ಮುನ್ನೆಲೆಗೆ ತರುವ ಯೋಜನೆಯನ್ನು ಬಿಜೆಪಿ ರೂಪಿಸಿದೆ. ಇದರಲ್ಲಿ ಯಶಸ್ವಿಯಾದರೆ, ಶಿಂದೆ ನೇತೃತ್ವದ ಶಿವಸೇನೆಯನ್ನು ಜೀರ್ಣಿಸಿಕೊಳ್ಳುವುದು ಬಿಜೆಪಿಗೆ ಸುಲಭ. ಬಳಿಕ ಮಹಾರಾಷ್ಟ್ರವನ್ನು ಬಿಜೆಪಿ ಸಂಪೂರ್ಣ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಅದಕ್ಕಾಗಿಯೇ ಮೊದಲು ಶಿವಸೇನೆಯ ಮೂಲಕವೇ ಉದ್ದವ್ ಸೇನೆಯನ್ನು ಮುಗಿಸಲು ಮುಂದಾಗಿದೆ. ಈ ಕಾರಣದಿಂದ, ಮಹಾರಾಷ್ಟ್ರದ ಪ್ರಾದೇಶಿಕ ರಾಜಕಾರಣದ ಪಾಲಿಗೆ ಉದ್ಧವ್ ಠಾಕ್ರೆಯ ಮುಂದಿನ ನಡೆ, ಅತ್ಯಂತ ಮಹತ್ವದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಮನದೆಳೆ