ಇಂಗ್ಲೆಂಡ್ ವಿರುದ್ಧ ಶತಕ: ಧೋನಿ ಹೆಸರಲ್ಲಿದ್ದ 17 ವರ್ಷಗಳ ಹಳೆಯ ದಾಖಲೆ ಮುರಿದ ರಿಷಭ್ ಪಂತ್

Update: 2022-07-02 14:11 GMT
Photo:PTI

ಬರ್ಮಿಂಗ್ ಹ್ಯಾಮ್: ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 5 ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಭಾರತದ ವಿಕೆಟ್ ಕೀಪರ್-ಬ್ಯಾಟರ್  ರಿಷಭ್ ಪಂತ್ 17 ವರ್ಷಗಳ  ಹಿಂದೆ  ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ನಿರ್ಮಿಸಿದ್ದ  ದಾಖಲೆಯೊಂದನ್ನು ಮುರಿದರು.

ಕೇವಲ 89 ಎಸೆತಗಳಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ  ಐದನೇ ಶತಕವನ್ನು ಪೂರೈಸಿದ ಪಂತ್ ಅತಿ ವೇಗವಾಗಿ ಟೆಸ್ಟ್ ಶತಕವನ್ನು ಬಾರಿಸಿದ  ಭಾರತೀಯ ವಿಕೆಟ್‌ಕೀಪರ್‌ ಎಂಬ ಹಿರಿಮೆಗೆ ಪಾತ್ರರಾದರು.  2005ರಲ್ಲಿ ಫೈಸಲಾಬಾದ್‌ನಲ್ಲಿ ಪಾಕಿಸ್ತಾನದ ವಿರುದ್ಧ 93 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಎಂ.ಎಸ್. ಧೋನಿ ವೇಗವಾಗಿ ಶತಕ ಸಿಡಿಸಿದ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ನಿರ್ಮಿಸಿದ್ದರು.

ಪಂತ್ ಕೇವಲ 111 ಎಸೆತಗಳಲ್ಲಿ 146 ರನ್ ಗಳಿಸಿದರು. ಅವರ ಇನಿಂಗ್ಸ್ ನಲ್ಲಿ  19 ಬೌಂಡರಿ ಹಾಗೂ  ನಾಲ್ಕು ಸಿಕ್ಸರ್‌ಗಳಿದ್ದವು.

89 ಎಸೆತಗಳಲ್ಲಿ  ಶತಕ ಪೂರೈಸುವುದರೊಂದಿಗೆ ಪಂತ್  ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಅತ್ಯಂತ ವೇಗದ ಶತಕ ದಾಖಲಿಸಿದ ಸಾಧನೆ ಮಾಡಿದರು. ಈಮೊದಲು ಇಂಗ್ಲೆಂಡ್  ಬ್ಯಾಟರ್  ಕೆವಿನ್ ಪೀಟರ್ಸನ್ ಈ ದಾಖಲೆಯನ್ನು ನಿರ್ಮಿಸಿದ್ದರು.

24 ವರ್ಷದ ಆಟಗಾರ ಪಂತ್  ಇಂಗ್ಲೆಂಡ್‌ನಲ್ಲಿ ಎರಡನೇ ಟೆಸ್ಟ್ ಶತಕ ಹಾಗೂ  ಒಟ್ಟಾರೆ ಮೂರನೇ ಶತಕ ಸಿಡಿಸಿದರು.  ಅಹಮದಾಬಾದ್‌ನಲ್ಲಿ ನಡೆದಿದ್ದ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಗಳಿಸಿದ್ದರು.

ಪಂತ್ ಈಗ ವಿದೇಶಿ ಕ್ರೀಡಾಂಗಣದಲ್ಲಿ ಒಟ್ಟು ನಾಲ್ಕು ಟೆಸ್ಟ್  ಶತಕಗಳನ್ನು ಸಿಡಿಸಿದ್ದಾರೆ.

ರಿಷಬ್ ಪಂತ್ ಟೆಸ್ಟ್‌ನಲ್ಲಿ 2,000 ರನ್ ಗಡಿ ದಾಟಿದ ಅತ್ಯಂತ ಕಿರಿಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಮರುನಿಗದಿಪಡಿಸಲಾದ 5 ನೇ ಟೆಸ್ಟ್‌ನ  ಮೊದಲ ದಿನವಾದ ಶುಕ್ರವಾರ   ಭಾರತ ಒಂದು ಹಂತದಲ್ಲಿ   98 ರನ್ ಗೆ ಐದು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ರವೀಂದ್ರ ಜಡೇಜ ಅವರೊಂದಿಗೆ  222 ರನ್ ಜೊತೆಯಾಟವನ್ನು ನಡೆಸಿದ ಪಂತ್ ಭಾರತವು ಮೊದಲ ದಿನದಾಟದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಲು ನೆರವಾದರು. ಪಂತ್ ಹಾಗೂ ಜಡೇಜ ಅವರು  ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಪರ 6 ನೇ ವಿಕೆಟ್ ಜೊತೆಯಾಟದಲ್ಲಿ ಭಾಗಿಯಾದರು.

ಜಡೇಜ 10 ಬೌಂಡರಿಗಳ ನೆರವಿನಿಂದ ಅಜೇಯ 83 ರನ್ ಗಳಿಸಿ ದಿನದಾಟ ಮುಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News