ರಾಹುಲ್ ಗಾಂಧಿ ಹೇಳಿಕೆಯನ್ನು ತಿರುಚಿ ಉದಯಪುರ್ ಹತ್ಯೆಗೆ ಥಳಕು ಹಾಕಿದ್ದಕ್ಕೆ ಕ್ಷಮೆಯಾಚಿಸಿದ ಝೀ ನ್ಯೂಸ್

Update: 2022-07-02 11:53 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆಯೊಂದಕ್ಕೂ ಉದಯಪುರ್ ಹತ್ಯೆಗೂ ಸಂಬಂಧವಿಲ್ಲದೇ ಇದ್ದರೂ ಅವರ ಹೇಳಿಕೆಯನ್ನು ಉದಯಪುರ್ ಹತ್ಯೆ ಘಟನೆಗೆ ಥಳಕು ಹಾಕಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಝೀ ನ್ಯೂಸ್ ವಾಹಿನಿ ಇಂದು ಕ್ಷಮೆಯಾಚಿಸಿದೆ.

ಕೇರಳದ ತಮ್ಮ ಸ್ವಕ್ಷೇತ್ರ ವಯನಾಡಿನಲ್ಲಿರುವ ತಮ್ಮ ಕಚೇರಿಯಲ್ಲಿ ನಡೆದ ದಾಂಧಲೆ ಕುರಿತು ರಾಹುಲ್ ಮಾತನಾಡುತ್ತಿರುವ ವೀಡಿಯೋವನ್ನು  ಝೀ ನ್ಯೂಸ್ ತನ್ನ ಪ್ರೈಮ್ ಟೈಮ್ ಶೋ ಡಿಎನ್‍ಎ ಇದರಲ್ಲಿ ಪ್ರಸಾರ ಮಾಡಿ, ರಾಹುಲ್ ಅವರು ಉದಯಪುರ್ ಹತ್ಯೆ ಘಟನೆ ಕುರಿತು ಮಾತನಾಡುತ್ತಿದ್ದಾರೆ ಎಂದು ವಿವರಿಸಿತ್ತು.

ಉದಯಪುರ್ ಹತ್ಯೆ ಕುರಿತು ರಾಹುಲ್ ಅವರು ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ರಾಹುಲ್ ಅವರ ಹೇಳಿಕೆ ಪ್ರಸಾರ ಮಾಡುವ ಮುನ್ನ ನಿರೂಪಕ ರೋಹಿತ್ ರಂಜನ್ ಹೇಳಿದ್ದರು. "ರಾಹುಲ್ ಅವರು ಉದಯಪುರ್ ಹತ್ಯೆ ಪ್ರಕರಣದ ಆರೋಪಿಗಳನ್ನು ಮಕ್ಕಳು ಎಂದು ಹೇಳುವ ಮೂಲಕ ತಾವು ಅವರ ಬಗ್ಗೆ ಆಕ್ರೋಶ ಹೊಂದಿಲ್ಲ ಎಂದು ಹೇಳಿದ್ದಾರೆ" ಎಂದು ರಂಜನ್ ವಿವರಣೆ ನೀಡಿದ್ದರು.

ವೀಡಿಯೋದಲ್ಲಿ ರಾಹುಲ್ ಆಡಿದ ಮಾತುಗಳು ಹೀಗಿದ್ದವು- "ದೇಶದಲ್ಲಿರುವ ಈಗಿನ ವಾತಾವರಣವನ್ನು ಆಡಳಿತ ಪಕ್ಷ ಸೃಷ್ಟಿಸಿದೆ" ಎಂದು ಹೇಳುವುದು ಕೇಳಿಸುತ್ತದೆ. ಇದರ ನಂತರ ಇನ್ನೊಂದು ತುಣುಕು ಪ್ರಸಾರ ಮಾಡಿದಾಗ ಅದರಲ್ಲಿ ರಾಹುಲ್ "ಇದನ್ನು ಮಾಡಿದ ಮಕ್ಕಳು... ಅವರು ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ಅವರ ಬಗ್ಗೆ ನನಗೆ ಕೋಪವಿಲ್ಲ, ಅವರು ಮಕ್ಕಳು, ಇಂತಹ ಕೃತ್ಯಗಳ ಪರಿಣಾಮಗಳ ಬಗ್ಗೆ ಅವರಿಗೆ ತಿಳಿದಿಲ್ಲ" ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News