ಹಿರಿಯ ರಾಜತಾಂತ್ರಿಕ ಎಸ್.ಕೆ.ಲಾಂಬಾ ನಿಧನ

Update: 2022-07-02 14:16 GMT

ಹೊಸದಿಲ್ಲಿ,ಜು.2: ಹಿರಿಯ ರಾಜತಾಂತ್ರಿಕ ಸತಿಂದರ್ ಕುಮಾರ ಲಾಂಬಾ (81) ಅವರು ದೀರ್ಘಕಾಲದ ಅಸ್ವಾಸ್ಥದ ಬಳಿಕ ಗುರುವಾರ ರಾತ್ರಿ ಇಲ್ಲಿ ನಿಧನರಾದರು. ಅವರು ಕಾಶ್ಮೀರ ಕುರಿತು ಒಪ್ಪಂದವೊಂದರ ಸನಿಹಕ್ಕೆ ಉಭಯ ದೇಶಗಳನ್ನು ಮುನ್ನಡೆಸಿದ್ದ ಪಾಕಿಸ್ತಾನದೊಂದಿಗಿನ ಭಾರತದ ಅನಧಿಕೃತ ಮಾತುಕತೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

 ಪಾಕಿಸ್ತಾನ,ಅಫ್ಘಾನಿಸ್ತಾನ ಮತ್ತು ರಶ್ಯದೊಂದಿಗೆ ಸಂಬಂಧಗಳನ್ನು ರೂಪಿಸುವಲ್ಲಿ ನೆರವಾಗಿದ್ದ ದಕ್ಷ ಅಧಿಕಾರಿಯಾಗಿದ್ದ ಲಾಂಬಾ 2002-2004ರ ಅವಧಿಯಲ್ಲಿ ಆಗಿನ ಪ್ರಧಾನಿ ಅಟಲ ಬಿಹಾರಿ ವಾಜಪೇಯಿಯವರ ಆಡಳಿತದಡಿ ಅಫ್ಘಾನಿಸ್ತಾನಕ್ಕೆ ವಿಶೇಷ ರಾಯಭಾರಿಯಾಗಿದ್ದು,2005ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತದಡಿಯೂ ಹುದ್ದೆಯಲ್ಲಿ ಮುಂದುವರಿದಿದ್ದರು. 
ಇದು ವಿಭಿನ್ನ ರಾಜಕೀಯ ವ್ಯವಸ್ಥೆಗಳೊಂದಿಗೆ ಕಾರ್ಯ ನಿರ್ವಹಿಸುವ ಅವರ ಸಾಮರ್ಥ್ಯವನ್ನು ಪ್ರತಿಬಿಂಬಿಸಿತ್ತು. 1971ರಲ್ಲಿ ಬಾಂಗ್ಲಾದೇಶವು ಸೃಷ್ಟಿಯಾದಾಗ ಲಾಂಬಾ ಢಾಕಾದಲ್ಲಿ ನೂತನ ರಾಯಭಾರಿ ಕಚೇರಿಯನ್ನು ಆರಂಭಿಸಿದ್ದ ತಂಡದ ಸದಸ್ಯರಾಗಿದ್ದರು.
 2001ರ ಉತ್ತರಾರ್ಧದಲ್ಲಿ ಅಫ್ಘಾನಿಸ್ತಾನದಲ್ಲಿಯ ತಾಲಿಬಾನ್ ಆಡಳಿತವು ಅಂತ್ಯಗೊಳಿಸಲ್ಪಟ್ಟಾಗ ಭಾರತದ ರಾಜತಾಂತ್ರಿಕ ಅಸ್ತಿತ್ವವನ್ನು ಸ್ಥಾಪಿಸಲು ಕಾಬೂಲಿಗೆ ತೆರಳಿದ್ದ ನಿಯೋಗದ ನೇತೃತ್ವವನ್ನು ವಹಿಸಿದ್ದರು. 2000ರಲ್ಲಿ ಮಾಸ್ಕೋದಲ್ಲಿ ಭಾರತದ ರಾಯಭಾರಿಯಾಗಿದ್ದಾಗ ರಶ್ಯದೊಡನೆ ವ್ಯೆಹಾತ್ಮಕ ಪಾಲುದಾರಿಕೆ ಒಪ್ಪಂದವನ್ನು ಮಾಡಿಕೊಳ್ಳುವಲ್ಲಿ ನೆರವಾಗಿದ್ದರು. 
ಲಾಂಬಾರ ಕುಟುಂಬಕ್ಕೆ ಸಂತಾಪಗಳನ್ನು ಸೂಚಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ ಅವರು,‘ಲಾಂಬಾ ನಮ್ಮ ಅತ್ಯಂತ ಗೌರವಾನ್ವಿತ ರಾಜತಾಂತ್ರಿಕರಲ್ಲಿ ಒಬ್ಬರಾಗಿದ್ದರು ಮತ್ತು ತನ್ನ ನಂತರ ಬಂದಿದ್ದ ಪೀಳಿಗೆಗಳಿಗೆ ನಿಜವಾದ ಮಾರ್ಗದರ್ಶಕರಾಗಿದ್ದರು ’ಎಂದು ಟ್ವೀಟಿಸಿದ್ದಾರೆ.
ತನ್ನ ಸಹೋದ್ಯೋಗಿಗಳು ಮತ್ತು ಪತ್ರಕರ್ತರಲ್ಲಿ ‘ಸತಿ’ಎಂದೇ ಪರಿಚಿತರಾಗಿದ್ದ ಲಾಂಬಾ ಪಾಕಿಸ್ತಾನದ ಆಗಿನ ಮಿಲಿಟರಿ ಆಡಳಿತಗಾರ ಪರ್ವೇಝ್ ಮುಷರಫ್ ಅವರಿಂದ ನೇಮಕಗೊಂಡಿದ್ದ ರಾಜತಾಂತ್ರಿಕ ತಾರಿಖ್ ಅಜೀಝ್ ಜೊತೆ ಅನಧಿಕೃತ ಮಾತುಕತೆಗಳಲ್ಲಿ ತನ್ನ ಪಾತ್ರಕ್ಕಾಗಿ ನೆನಪಿನಲ್ಲಿ ಉಳಿಯಲಿದ್ದಾರೆ.
 ಪಾಕಿಸ್ಥಾನಕ್ಕೆ ರಹಸ್ಯ ಭೇಟಿಗಳು ಮತ್ತು ತೃತೀಯ ರಾಷ್ಟ್ರಗಳಲ್ಲಿ ಮಾತುಕತೆಗಳ ಅವಧಿಯಲ್ಲಿ ಲಾಂಬಾ ಮತ್ತು ಅಜೀಝ್ ಕಾಶ್ಮೀರ ವಿವಾದವನ್ನು ಬಗೆಹರಿಸಲು ನಂತರ ‘ನಾಲ್ಕಂಶಗಳ ಸೂತ್ರ’ ಎಂದು ಹೆಸರಾಗಿದ್ದ ಕರಡು ಒಪ್ಪಂದದ ಕುರಿತು ಕೂಲಂಕಶವಾಗಿ ಚರ್ಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News