ಝುಬೈರ್ ಗೆ ಜಾಮೀನು ನಿರಾಕರಣೆ, 14 ದಿನಗಳ ನ್ಯಾಯಾಂಗ ಬಂಧನ

Update: 2022-07-02 16:53 GMT

ಹೊಸದಿಲ್ಲಿ,ಜು.2: ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದ ‘ಆಕ್ಷೇಪಾರ್ಹ ಟ್ವೀಟ್’ಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಆಲ್ಟ್ ನ್ಯೂಸ್ ನ ಸಹಸ್ಥಾಪಕ ಹಾಗೂ ಪತ್ರಕರ್ತ ಮುಹಮ್ಮದ್ ಝುಬೈರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಶನಿವಾರ ತಿರಸ್ಕರಿಸಿದ ಇಲ್ಲಿಯ ಮುಖ್ಯ ಮಹಾನಗರ ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಝುಬೈರ್ರನ್ನು ನ್ಯಾ.ಸ್ನಿಗ್ಧಾ ಸರ್ವಾರಿಯಾ ಅವರ ಎದುರು ಹಾಜರು ಪಡಿಸಲಾಗಿತ್ತು.
ದಿಲ್ಲಿ ಪೊಲೀಸರು ಝುಬೈರ್ ವಿರುದ್ಧ ಹೊಸದಾಗಿ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯ ಕಲಂ 35ರಡಿ ಕ್ರಿಮಿನಲ್ ಒಳಸಂಚು ಮತ್ತು ಸಾಕ್ಷನಾಶದ ಆರೋಪಗಳನ್ನು ಹೊರಿಸಿದ್ದಾರೆ.

ಆಕ್ಷೇಪಾರ್ಹ ಟ್ವೀಟ್ಗೆ ಸಂಬಂಧಿಸಿದ ಪ್ರಕರಣದಲ್ಲಿ ತನಗೆ ವಿಧಿಸಲಾದ ಪೊಲೀಸ್ ಕಸ್ಟಡಿಯ ಕಾನೂನು ಬದ್ಧತೆಯನ್ನು ಪ್ರಶ್ನಿಸಿ ಝುಬೈರ್ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ದಿಲ್ಲಿ ಪೊಲೀಸರಿಗೆ ಸೂಚಿಸಿತ್ತು.

ಝುಬೈರ್ ಜಾಮೀನು ಅರ್ಜಿಯನ್ನು ವಿರೋಧಿಸಿದ ಪ್ರಾಸಿಕ್ಯೂಷನ್,ಪಾಕಿಸ್ತಾನ ಸೇರಿದಂತೆ ಹಲವಾರು ವಿದೇಶಿ ರಾಷ್ಟ್ರಗಳಿಂದ ಅವರು ಸ್ವೀಕರಿಸಿರುವ ದೇಣಿಗೆಗಳ ಕುರಿತು ತಾನು ತನಿಖೆ ನಡೆಸುತ್ತಿರುವುದಾಗಿ ದಿಲ್ಲಿ ನ್ಯಾಯಾಲಯಕ್ಕೆ ತಿಳಿಸಿದೆ.

ಝುಬೈರ್ ಕಂಪೆನಿಯ ನಿರ್ದೇಶಕರಾಗಿದ್ದಾರೆ. ಪತ್ರಕರ್ತನಾಗಿರುವುದು ಅಪರಾಧವಲ್ಲ,ಆದರೆ ಇಂತಹ ಕೃತ್ಯಗಳನ್ನು ಮಾಡುವುದು ಅಪರಾಧವಾಗಿದೆ ಮತ್ತು ಅವರು ಕಾನೂನು ಕ್ರಮಕ್ಕೆ ಅರ್ಹರಾಗಿದ್ದಾರೆ ಎಂದು ಪ್ರಾಸಿಕ್ಯೂಟರ್ ಶ್ರೀವಾಸ್ತವ ವಾದಿಸಿದರು.

ಕಂಪೆನಿಯ ನಿರ್ದೇಶಕನಾಗಿರುವುದು ಅಪರಾಧವಲ್ಲ ಮತ್ತು ಕಂಪನಿಗೆ ಯಾವುದೇ ನೋಟಿಸನ್ನು ಜಾರಿಗೊಳಿಸಲಾಗಿಲ್ಲ ಎಂದು ಝುಬೈರ್ ಪರ ನ್ಯಾಯವಾದಿ ವೃಂದಾ ಗ್ರೋವರ್ ವಾದಿಸಿದರು.

ಝುಬೈರ್ 2018ರಲ್ಲಿ ಮಾಡಿದ್ದ ಟ್ವೀಟ್ಗಾಗಿ ದಿಲ್ಲಿ ಪೊಲೀಸರು ಅವರನ್ನು ಜೂ.27ರಂದು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News