ಝುಬೇರ್ ಬಂಧನ: ದಿಲ್ಲಿ ಪೊಲೀಸ್, ನ್ಯಾಯಾಲಯದ ಧೋರಣೆ ಕಳವಳಕಾರಿ; ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ದೀಪಕ್‌ ಗುಪ್ತ

Update: 2022-07-02 15:36 GMT
Photo: Thewire.in

ಆಲ್ಟ್ ನ್ಯೂಸ್‌ನ ಸಹಸ್ಥಾಪಕ ಹಾಗೂ ಪತ್ರಕರ್ತ ಮುಹಮ್ಮದ್ ಝುಬೈರ್ ಮತ್ತು ಪ್ರವಾದಿ ಮುಹಮ್ಮದ್ ರವರ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿಷಯದಲ್ಲಿ ದಿಲ್ಲಿ ಪೊಲೀಸರು ಎರಡು ವಿಭಿನ್ನ ಮಾನದಂಡಗಳನ್ನು ಅನುಸರಿಸಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ದೀಪಕ್ ಗುಪ್ತಾ ಅವರು ಸುದ್ದಿ ಜಾಲತಾಣ (thewire.in)ಗಾಗಿ ಕರಣ ಥಾಪರ್ ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ನಾಲ್ಕು ವರ್ಷಗಳ ಹಿಂದೆ, 2018, ಮಾ.24ರಂದು ಪೋಸ್ಟ್ ಮಾಡಿದ್ದ, ಆಕ್ಷೇಪಾರ್ಹ ಎನ್ನಲಾಗಿರುವ ಟ್ವೀಟ್‌ಗಾಗಿ ಝುಬೈರ್ ಅವರನ್ನು ದಿಲ್ಲಿ ಪೊಲೀಸರು ಜೂ.27ರಂದು ಬಂಧಿಸಿದ್ದಾರೆ. ದ್ವೇಷವನ್ನು ಉತ್ತೇಜಿಸುವ ಜೊತೆಗೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಆರೋಪಗಳನ್ನು ಝುಬೈರ್ ವಿರುದ್ಧ ಹೊರಿಸಿರುವ ದಿಲ್ಲಿ ಪೊಲೀಸರು ಐಪಿಸಿಯ ಕಲಂ 153ಎ ಮತ್ತು 295ಎ ಅಡಿ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಆದರೆ ಈ ನಾಲ್ಕು ವರ್ಷಗಳಲ್ಲಿ ಈ ಟ್ವೀಟ್ನಿಂದಾಗಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಝುಬೈರ್ ಬಂಧನವನ್ನು ವಿವಿಧ ಮಾನವ ಹಕ್ಕು ಸಂಘಟನೆಗಳು ಮತ್ತು ಮಾಧ್ಯಮ ಸಂಘಟನೆಗಳು ಕಟುವಾದ ಶಬ್ದಗಳಲ್ಲಿ ಖಂಡಿಸಿವೆ.

ದಿಲ್ಲಿ ಪೊಲೀಸರ ಕ್ರಮದಿಂದ ತಾನು ಕಳವಳಗೊಂಡಿದ್ದೇನೆ, ಆದರೆ ನ್ಯಾಯಾಲಯವು ಝುಬೈರ್ ಗೆ ಜಾಮೀನು ನೀಡಲು ನಿರಾಕರಿಸಿರುವುದು ಇನ್ನಷ್ಟು ಚಿಂತೆಯನ್ನುಂಟು ಮಾಡಿದೆ ಎಂದು ಹೇಳಿದ ನ್ಯಾ.ಗುಪ್ತಾ, ಜನರನ್ನು ತಕ್ಷಣ ಬಂಧಿಸಿದರೆ ಅನ್ಯಾಯವಾಗಿ ಬಂಧಿಸಲ್ಪಟ್ಟವರಿಗೆ ಪರಿಹಾರ ಒದಗಿಸುವುದರ ಬಗ್ಗೆ ನ್ಯಾಯಾಲಯಗಳು ಪರಿಶೀಲಿಸಬೇಕು. ವಾಕ್ ಸ್ವಾತಂತ್ರವು ಪವಿತ್ರವಾಗಿದೆ ಮತ್ತು ಅದು ಒತ್ತಡಕ್ಕೊಳಗಾದರೆ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ದಿನಗಳಲ್ಲ ಎಂದರು.

ಸಂಭಾವಿತ ವ್ಯಕ್ತಿ ಝುಬೈರ್ ಅವರನ್ನು ಬಂಧಿಸಿದ್ದಾದರೂ ಏಕೆ ಎನ್ನುವುದರ ಬಗ್ಗೆ ತನಗೆ ಕೊಂಚ ಚಿಂತೆ, ಕೊಂಚ ಗೊಂದಲವಿದೆ. ಅವರು ಟ್ವೀಟ್ ಪೋಸ್ಟ್ ಮಾಡಿ ನಾಲ್ಕು ವರ್ಷಗಳೇ ಕಳೆದಿವೆ. ಈ ಎಲ್ಲ ವರ್ಷಗಳಲ್ಲಿ ಅವರ ಟ್ವೀಟ್ ಎರಡು ಸಮುದಾಯಗಳ ಮಧ್ಯೆ ಯಾವುದೇ ವಿವಾದಕ್ಕೆ ಕಾರಣವಾಗಿತ್ತು ಎನ್ನುವುದರ ಬಗ್ಗೆ ಯಾವುದೇ ಸುಳಿವು ಸಹ ಇಲ್ಲ. ನಾಲ್ಕು ವರ್ಷಗಳ ಬಳಿಕ ಈಗ ದಿಢೀರ್ ಆಗಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದ ನ್ಯಾ.ಗುಪ್ತಾ, ‘ನಾವು ನಾಗರಿಕ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದೇವೆ. ಈ ದೇಶದ ಯಾವುದೇ ಪ್ರಜೆಯನ್ನು ಯಾವುದಾದರೂ ಕಾರಣದಿಂದ ಕಂಬಿಗಳ ಹಿಂದೆ ತಳ್ಳಲೇಬೇಕೇ? ಭಾವೋದ್ರೇಕಗಳನ್ನು ಪ್ರಚೋದಿಸುವ ಸಾಧ್ಯತೆಗಳಿವೆ ಎನ್ನುವುದು ಪೊಲೀಸರ ವಾದವಾಗಿದೆ. ಅದು ಪೊಲೀಸರ ಅತ್ಯುತ್ತಮ ವಾದವಾಗಬಹುದು. ಆದರೆ ಅಂತಹುದ್ದೇನೂ ಇಲ್ಲ,ಅಂತಹ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿಲ್ಲ ಎಂದರು.

ಝುಬೈರ್ ಗೆ ಜಾಮೀನು ನೀಡಲು ನ್ಯಾಯಾಲಯವು ನಿರಾಕರಿಸಿದ್ದು ತನಗೆ ಹೆಚ್ಚಿನ ಚಿಂತೆಯನ್ನುಂಟು ಮಾಡಿದೆ. ಇದು ಪೊಲೀಸರು ನಾಲ್ಕು ವರ್ಷಗಳ ಬಳಿಕ ಎಚ್ಚೆತ್ತುಕೊಂಡಿರುವ ನಿದರ್ಶನವಾಗಿದೆ. ‘ನೀವು ನಾಲ್ಕು ವರ್ಷಗಳಲ್ಲಿ ಅವರನ್ನು ಬಂಧಿಸಿರದಿದ್ದರೆ ಮತ್ತು ಈ ನಾಲ್ಕು ವರ್ಷಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆದಿರದಿದ್ದರೆ ನಿಮಗೆ ಅವರನ್ನು ವಶಕ್ಕೆ ತೆಗೆದುಕೊಳ್ಳುವ ಅಗತ್ಯವೇನಿದೆ?’ ಎಂದು ನ್ಯಾಯಾಧೀಶರು ಪೊಲೀಸರನ್ನು ಪ್ರಶ್ನಿಸಬೇಕಿತ್ತು ಎಂದು ನ್ಯಾ.ಗುಪ್ತಾ ಬೆಟ್ಟು ಮಾಡಿದರು.
 
‘ಝುಬೈರ್ 2018ರಲ್ಲಿ ಪೋಸ್ಟ್ ಮಾಡಿದ್ದ ಟ್ವೀಟ್ 1983ರ ‘ಕಿಸೀ ಸೆ ನಾ ಕೆಹನಾ ’ಎಂಬ ಹಿಂದಿ ಚಿತ್ರದ ದೃಶ್ಯವನ್ನು ಒಳಗೊಂಡಿತ್ತು ಎನ್ನುವುದನ್ನು ನಾನು ಗಮನಿಸಿದ್ದೇನೆ. ನಾವು ಇದ್ದಕ್ಕಿದ್ದಂತೆ ಅಸಹಿಷ್ಣು ಸಮಾಜವಾಗಿ ಬದಲಾಗುತ್ತಿದ್ದೇವೆ. ಕಳೆದ 40 ವರ್ಷಗಳಲ್ಲಿ ಈ ದೃಶ್ಯ ಯಾವುದೇ ಅನಾಹುತಕ್ಕೆ ಕಾರಣವಾಗಿರದಿದ್ದರೆ ದಿಢೀರ್ ಆಗಿ ಅದು ಅಷ್ಟೊಂದು ಆಕ್ಷೇಪಾರ್ಹವಾಗಿದ್ದು ಹೇಗೆ? ನನ್ನ ಅಭಿಪ್ರಾಯದಲ್ಲಿ,ನೀವು ನಿಮ್ಮ ಧರ್ಮದ ಬಗ್ಗೆ ತುಂಬ ಕಟ್ಟುನಿಟ್ಟಾಗಿದ್ದರೆ, ಹೆಚ್ಚೆಂದರೆ ಈ ಟ್ವೀಟ್ ‘ಸ್ವಲ್ಪ ಸರಿಯಾಗಿಲ್ಲ’ಎಂದು ಹೇಳಬಹುದು. ಅದು ಆಕ್ರಮಣಕಾರಿಯಲ್ಲ.

ʼನಾನು ಬಾಲ್ಯದಲ್ಲಿ ಶಿಮ್ಲಾದಲ್ಲಿ ರಾಮಲೀಲಾವನ್ನು ವೀಕ್ಷಿಸುತ್ತಿದ್ದೆ. ಆ ಸಮಯದಲ್ಲಿ ರಾಮಲೀಲಾ ಪ್ರದರ್ಶಿಸುತ್ತಿದ್ದ ಜನರೇ ಅತ್ಯಂತ ಕೆಟ್ಟದ್ದನ್ನು ಹೇಳುತ್ತಿದ್ದರು ಮತ್ತು ಮಾಡುತ್ತಿದ್ದರು. ನೀವು ಸ್ವಲ್ಪ ಹಾಸ್ಯಪ್ರಜ್ಞೆಯನ್ನು ಹೊಂದಿದ್ದರೆ ಈ ಟ್ವೀಟ್ನಲ್ಲಿ ಏನೂ ಇಲ್ಲ. ‘ಹನಿಮೂನ್ ಹೋಟೆಲ್’ಅನ್ನು ‘ಹನುಮಾನ್ ಹೋಟೆಲ್ ’ಆಗಿ ಬದಲಿಸಲಾಗಿದೆ. ಅದು ಅತ್ಯುತ್ತಮ ಅಭಿರುಚಿಯನ್ನು ಹೊಂದಿಲ್ಲದಿರಬಹುದು,ಆದರೆ ಅದು ಆಕ್ರಮಣಕಾರಿ ಹೇಗಾಗುತ್ತದೆ? ಅದು ಯಾವುದೇ ಕ್ರಿಮಿನಲ್ ಕಾನೂನನ್ನು ಹೇಗೆ ಉಲ್ಲಂಘಿಸುತ್ತದೆ? ನಾನು ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು ವಿಫಲನಾಗಿದ್ದೇನೆ ’ಎಂದು ನ್ಯಾ.ಗುಪ್ತಾ ಹೇಳಿದರು.

 ‘ಝುಬೈರ್ ಮಾಡಿರುವ ಇತರ ಟ್ವೀಟ್ಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ನೀವು ಹೇಳಿದಿರಿ. ಕಾನೂನು ತನ್ನದೇ ದಾರಿಯಲ್ಲಿ ಸಾಗಬೇಕು. ಕಾನೂನನ್ನು ಉಲ್ಲಂಘಿಸಿದ್ದರೆ ಝುಬೈರ್ ದೇಶದ ಪ್ರಜೆಯಾಗಿ ಕಾನೂನನ್ನು ಎದುರಿಸಬೇಕು. ಆದರೆ ಇದೇ ವೇಳೆ ಅವರನ್ನು ಗುರಿಯಾಗಿಸಿಕೊಂಡಿರುವಂತೆ ಕಾನೂನನ್ನು ಬಳಸಬಾರದು. ಹೇಗೋ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ನಾನು ಭಾವಿಸಿದ್ದೇನೆ’ ಎಂದರು.

ವಿಷಯವೊಂದಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ಅದಾಗಲೇ ಝುಬೈರ್ ಗೆ ಬಂಧನದಿಂದ ರಕ್ಷಣೆ ನೀಡಿತ್ತು ಮತ್ತು ಅದೇ ವಿಷಯದಲ್ಲಿ ತನಿಖೆಗಾಗಿ ಪೊಲೀಸರು ಅವರನ್ನು ಕರೆಸಿದ್ದರು ಎನ್ನುವುದನ್ನು ತಾನು ವೃತ್ತಪತ್ರಿಕೆಗಳಲ್ಲಿ ಓದಿದ್ದೇನೆ. ವಿಚಾರಣೆ ನಡೆಸುತ್ತಿದ್ದಾಗಲೇ ಪೊಲೀಸರು ಏಕಾಏಕಿ ನಾಲ್ಕು ವರ್ಷಗಳ ಹಿಂದಿನ ಟ್ವೀಟ್ನ ಆರೋಪವನ್ನು ಅವರ ಮೇಲೆ ಹೊರಿಸಿದ್ದಾರೆ. ಅವರ ಇತರ ಟ್ವೀಟ್ಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ಈಗ ಹೇಳುತ್ತಿದ್ದಾರೆ. ದಯವಿಟ್ಟು ಮೊದಲು ಸಾಕ್ಷಗಳನ್ನು ಸಂಗ್ರಹಿಸಿ ನಂತರ ವ್ಯಕ್ತಿಯನ್ನು ಬಂಧಿಸಿ,ವ್ಯಕ್ತಿಯನ್ನು ಮೊದಲು ಬಂಧಿಸಿ ನಂತರ ಸಾಕ್ಷಗಳನ್ನು ಹುಡುಕಬೇಡಿ ಎಂದರು.

‘ನೂಪುರ್ ಶರ್ಮಾ ಭಾವನೆಗಳನ್ನು ಕೆರಳಿಸಿದ್ದ ಮತ್ತು ಕೆಲವು ದೇಶಗಳೊಂದಿಗೆ ನಮ್ಮ ಸಂಬಂಧಗಳ ಮೇಲೆ ಪ್ರತಿಕೂಲ ಪರಿಣಾಮವ ನ್ನುಂಟು ಮಾಡಿದ್ದ ಹೇಳಿಕೆಯನ್ನು ನೀಡಿದ್ದರು. ಅದಕ್ಕಾಗಿ ಅವರನ್ನು ಬಂಧಿಸಬೇಕಿಲ್ಲ, ಏನನ್ನಾದರೂ ಹೇಳುವ ಹಕ್ಕು ಅವರಿಗೆ ಇದೆ. ಇದೇ ರೀತಿ ಝುಬೈರ್ ಅವರನ್ನೂ ಬಂಧಿಸಬಾರದಿತ್ತು. ಇಬ್ಬರಿಗೂ ನ್ಯಾಯದ ಒಂದೇ ಮಾನದಂಡವನ್ನು ಬಳಸಬೇಕು. ವಾಸ್ತವದಲ್ಲಿ ಝುಬೈರ್ ಟ್ವೀಟ್ ಗೆ ಹೋಲಿಸಿದರೆ ಶರ್ಮಾರ ಹೇಳಿಕೆ ಹೆಚ್ಚಿನ ಹಾನಿಯನ್ನುಂಟು ಮಾಡುವ ಸಾಮರ್ಥ್ಯ ಹೊಂದಿತ್ತು. ಈಗ ಪೊಲೀಸರು ಶರ್ಮಾರ ಹೇಳಿಕೆಯ ಬಗ್ಗೆ ಮೌನವಾಗಿದ್ದು ಝುಬೈರರನ್ನು ಬಂಧಿಸಿದ್ದರೆ ಅದು ಪೊಲೀಸರು ವಿಷಯವನ್ನು ನಿಭಾಯಿಸಿರುವ ರೀತಿಯಲ್ಲಿ ಎಲ್ಲಿಯೋ ಏನೋ ತಪ್ಪಿದೆ ಎಂಬ ಭಾವನೆಯನ್ನುಂಟು ಮಾಡುತ್ತದೆ. ಇದು ಪೊಲೀಸರ ವರ್ತನೆಯ ಬಗ್ಗೆ ಮೂಲಭೂತ ಪ್ರಶ್ನೆಯನ್ನು ಎತ್ತುತ್ತದೆ ಮತ್ತು ಪೊಲೀಸರ ಪೂರ್ವಾಗ್ರಹಕ್ಕೆ ಝುಬೈರ್ ಬಲಿಪಶುವಾಗಿದ್ದಾರೆ ಎಂಬ ನನ್ನ ನಿಲುವನ್ನು ಸಮರ್ಥಿಸುತ್ತದೆ. ಪೊಲೀಸರು ವಿಭಿನ್ನ ಮಾನದಂಡಗಳನ್ನು ಅನುಸರಿಸುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ’ಎಂದರು.
 
‘ನನ್ನ ದೃಷ್ಟಿಯಲ್ಲಿ ನೂಪುರ್ ಮತ್ತು ಝುಬೈರ್ ಇಬ್ಬರನ್ನೂ ಬಂಧಿಸಬಾರದು. ವಾಕ್ ಸ್ವಾತಂತ್ರವು ಪವಿತ್ರವಾದುದು. ಏನಾದರೂ ವಿವಾದವಿದ್ದರೆ ಪೊಲೀಸರು ಸಿವಿಲ್ ಪ್ರಕರಣ ದಾಖಲಿಸಲಿ. ವಾಸ್ತವದಲ್ಲಿ ನಾವು ಈ ಪ್ರಕರಣಗಳಿಗೆ ಅಷ್ಟೊಂದು ಪ್ರಚಾರವನ್ನು ನೀಡುವ ಮೂಲಕ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದೇವೆ ’ಎಂದು ನ್ಯಾ.ಗುಪ್ತಾ ನುಡಿದರು.

ಸಂದರ್ಶನದ ವೀಡಿಯೊ ಇಲ್ಲಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News