ಬೆಂಗಳೂರು ಉತ್ತರ ವಿವಿಯ ಪರೀಕ್ಷಾ ಶುಲ್ಕ ಪಾವತಿಗೆ ತಾಂತ್ರಿಕ ತೊಂದರೆ: ದಿನಾಂಕ ವಿಸ್ತರಿಸುವಂತೆ ವಿದ್ಯಾರ್ಥಿಗಳ ಮನವಿ

Update: 2022-07-02 15:17 GMT

ಬೆಂಗಳೂರು: ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಅಭಿವೃದ್ಧಿಪಡಿಸಿದ್ದ ಯುಯುಸಿಎಂಎಸ್ ತಂತ್ರಾಂಶದಲ್ಲಿ ತಾಂತ್ರಿಕ ದೋಷದಿಂದಾಗಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಲು ತೊಂದರೆ ಆಗುತ್ತಿದ್ದು, ಪರೀಕ್ಷಾ ಶುಲ್ಕ ಪಾವತಿ ದಿನಾಂಕವನ್ನು ವಿಸ್ತರಿಸುವಂತೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ. 

ಖಾಸಗಿ ಕಾಲೇಜುಗಳಲ್ಲಿ ಯುನಿವರ್ಸಿಟಿ ಕೋಟದಲ್ಲಿ ಸ್ನಾತಕೋತ್ತರ ಪದವಿಯನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ನೋಂದಣಿಯನ್ನು ಹಾಗೂ ಪರೀಕ್ಷಾ ವಿಷಯಗಳನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಯದ ರಿಜಿಸ್ಟ್ರಾರ್ ಯುಯುಸಿಎಂಎಸ್ ತಂತ್ರಾಂಶದಲ್ಲಿ ಅನುಮೋದಿಸಿಲ್ಲ. ಹಾಗೆಯೇ ಖಾಸಗಿ ಕಾಲೇಜಿನಲ್ಲಿಯೂ ಅನುಮೋದಿಸುತ್ತಿಲ್ಲ. ಹಾಗಾಗಿ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಲು ವಿದ್ಯಾರ್ಥಿಗಳಿಗೆ ತಾಂತ್ರಿಕ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಪರೀಕ್ಷಾ ಶುಲ್ಕ ಪಾವತಿ ಮಾಡಲು ಜು.2 ಕೊನೆಯ ದಿನವಾಗಿದ್ದು, ವಿವಿಯ ರಿಜಿಸ್ಟ್ರಾರ್ ಹಾಗೂ ಖಾಸಗಿ ಕಾಲೇಜು ಆಡಳಿತ ಮಂಡಳಿಯು ಅನುಮೋದನೆ ನೀಡುವವರೆಗೂ ದಿನಾಂಕ ವಿಸ್ತರಣೆ ಮಾಡುವಂತೆ ಒತ್ತಾಯಿಸಿದ್ದಾರೆ. 

ಬೆಂಗಳೂರು ಉತ್ತರ ವಿವಿಯ ಅಧಿಕೃತ ವೆಬ್‌ಸೈಟ್ ನಿಷ್ಕ್ರಿಯೆಯಾಗಿದ್ದು, ಇತ್ತಿಚ್ಚಿನ ಪ್ರಕಟನೆಗಳನ್ನು ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಹಾಗಯೇ ವಿವಿಯ ಹೆಲ್ಪ್ಲೈನ್‌ಗೆ ದೂರವಾಣಿಯ ಮೂಲಕ ಕರೆ ಮಾಡಿದರೆ, ಸಂಪರ್ಕಕ್ಕೆ ಸಿಗುತ್ತಿಲ್ಲ. ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿರುವ ರಿಜಿಸ್ಟ್ರಾರ್ ದೂರವಾಣಿ ಸಂಖ್ಯೆಯು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News