ಹೈದರಾಬಾದನ್ನು ಭಾಗ್ಯನಗರ ಎಂದು ಕರೆದ ಪ್ರಧಾನಿ ಮೋದಿ; ಮರುನಾಮಕರಣ ವದಂತಿ

Update: 2022-07-04 07:57 GMT

ಹೈದರಾಬಾದ್: ನಗರದಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಸಮಾವೇಶದಲ್ಲಿ ಹೈದರಾಬಾದ್ ನಗರವನ್ನು ಭಾಗ್ಯನಗರ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಕರೆದಿರುವುದು ಈ ಐತಿಹಾಸಿಕ ನಗರದ ಹೆಸರು ಬದಲಾವಣೆ ಕುರಿತ ವದಂತಿಗೆ ರೆಕ್ಕೆ ಪುಕ್ಕ ಹುಟ್ಟಿಕೊಳ್ಳಲು ಕಾರಣವಾಗಿದೆ.

"ಸ್ವಾತಂತ್ರ್ಯದ ಐಕಾನ್ ಸರ್ದಾರ್ ಪಟೇಲ್ ಅವರು ಏಕ ಭಾರತ ಎಂಬ ಪದಪುಂಜವನ್ನು ಮೊದಲ ಬಾರಿಗೆ ಬಳಿಸಿದ್ದು, ಭಾಗ್ಯನಗರದಿಂದ ಎಂದು ಮೋದಿ ಹೇಳಿದರು.

"ಸರ್ದಾರ್ ಪಟೇಲ್ ಅವರು ಏಕೀಕೃತ ಭಾರತದ ಪರಿಕಲ್ಪನೆಗೆ ಅಡಿಗಲ್ಲು ಹಾಕಿದ್ದು, ಇದನ್ನು ಮುಂದಕ್ಕೆ ಒಯ್ಯುವುದು ಬಿಜೆಪಿಯ ಹೊಣೆ" ಎಂದು ಮೋದಿ ಹೇಳಿದ್ದಾಗಿ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಹೈದರಾಬಾದ್‍ಗೆ ಭಾಗ್ಯನಗರ ಎಂದು ಮರುನಾಮಕರಣ ಮಾಡುವಂತೆ ಹಲವು ಮಂದಿ ಆರೆಸ್ಸೆಸ್ ಮತ್ತು ಬಿಜೆಪಿ ಮುಖಂಡರು ಆಗ್ರಹಿಸುತ್ತಿದ್ದಾರೆ.

ಹೈದರಾಬಾದ್‍ಗೆ ಭಾಗ್ಯನಗರ ಎಂದು ಮರುನಾಕರಣ ಮಾಡಲಾಗುತ್ತಿದೆಯೇ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಕೇಳಿದಾಗ, "ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ" ಎಂದು ಪ್ರತಿಕ್ರಿಯಿಸಿದರು.

ತೆಲಂಗಾಣ ಸಚಿವ ಮತ್ತು ಮುಖ್ಯಮಂತ್ರಿ ಕೆಸಿಆರ್ ಅವರ ಪುತ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸಮಾವೇಶಕ್ಕೆ ಹೈದರಾಬಾದ್ ನಗರವನ್ನು ಆಯ್ಕೆ ಮಾಡಿಕೊಂಡಿರುವುದು, ರಾಜ್ಯದಲ್ಲಿ ದುರ್ಬಲವಾಗಿರುವ ಪಕ್ಷವನ್ನು ಬಲಪಡಿಸುವುದು ಪಕ್ಷದ ಪ್ರಥಮ ಆದ್ಯತೆ ಎನ್ನುವ ಸ್ಪಷ್ಟ ಸಂದೇಶವಾಗಿದೆ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ರಾಷ್ಟ್ರೀಯ ಸಮಾವೇಶವನ್ನು ದೆಹಲಿಯ ಹೊರಗೆ ನಡೆಸುತ್ತಿರುವುದು ಇದು ನಾಲ್ಕನೇ ಬಾರಿ. ಇದಕ್ಕೂ ಮುನ್ನ 2017ರಲ್ಲಿ ಒಡಿಶಾ, 2016ರಲ್ಲಿ ಕೇರಳ ಮತ್ತು 2015ರಲ್ಲಿ ಬೆಂಗಳೂರಿನಲ್ಲಿ ಸಮಾವೇಶ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News