ದೈವಾರಾಧಕರಿಗೆ ವಿಶೇಷ ಪಿಂಚಣಿ: ಜಯನ್ ಮಲ್ಪೆ ಆಗ್ರಹ

Update: 2022-07-04 12:14 GMT

ಶಿರ್ವ, ಜು.೪: ಜೀವನವಿಡೀ ದೈವಾರಾಧನೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ದೈವಾರಾಧಕರಿಗೆ ಇಳಿ ವಯಸ್ಸಿನಲ್ಲಿ ಸರಕಾರ ವಿಶೇಷ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಒತ್ತಾಯಿಸಿದ್ದಾರೆ.

ಪಾಣಾರಾ ಯಾನೆ ನಲಿಕೆ ಸಮಾಜ ಸೇವಾ ಸಂಘ ಮೂಡುಬೆಳ್ಳೆ ಘಟಕ ಮತ್ತು ಗಾಂಧೀ ವಿಚಾರ ವೇದಿಕೆ ಉಡುಪಿ ಜಿಲ್ಲಾ ಘಟಕ ಜಂಟಿ ಆಶ್ರಯದಲ್ಲಿ ಜು.೩ರಂದು ಮೂಡುಬೆಳ್ಳೆ ಕಾಡಬೆಟ್ಟು ಪಂಜುರ್ಲಿ ದೈವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾದ ಸನ್ಮತಿ ಪ್ರೇರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಹೆಚ್ಚುತ್ತಿರುವ ಕೀಳರಿಮೆಯ ಮನಸ್ಥಿತಿಗೆ ಜನರು ಪರಸ್ಪರ ಹೋಲಿಕೆ ಮಾಡಿಕೊಳ್ಳುತ್ತಿರುವುದೇ ಕಾರಣ ವಾಗಿದ್ದು, ವ್ಯಕ್ತಿಯು ತನ್ನನ್ನು ಇರುವಂತೆ ಸ್ವೀಕರಿಸಿ ಮುನ್ನಡೆದಾಗ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹೇಳಿದರು.

ನ್ಯಾಯವಾದಿ ಸಂತೋಷ್ ಕುಮಾರ್ ಮೂಡುಬೆಳ್ಳೆ ಕಾನೂನು ಮಾಹಿತಿ ನೀಡಿದರು. ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಪಾಣಾರ ಸಂಘದ ಹಿರಿಯ ದೈವಾರಾಧಕ ಶಿವ ಪಾಣಾರ ಶಿರ್ವ ಅವರನ್ನು ಸಮ್ಮಾನಿಸಲಾಯಿತು.

ಪಾಣಾರ ಸಂಘದ ಅಧ್ಯಕ್ಷ ರಾಜು ಪಾಣಾರ ಅಧ್ಯಕ್ಷತೆ ವಹಿಸಿದ್ದರು. ಡಾ. ಗಣೇಶ ಗಂಗೊಳ್ಳಿ ಗೀತ ಗಾಯನ ನಡೆಸಿಕೊಟ್ಟರು. ಸುದೀಪ್ ಭೀಮವಾಣಿ ಮೊಳಗಿಸಿದರು.

ಪಾಣಾರ ಸಂಘದ ಗೌರವಾಧ್ಯಕ್ಷ ಸುಧಾಕರ ಪಾಣಾರ, ಪಂಜುರ್ಲಿ ದೇವಸ್ಥಾನದ ಪರಿಚಾರಕ ಶೇಖರ ಪಾಣಾರ್, ಉದ್ಯಮಿ ಎ.ಕೆ.ಆಳ್ವ, ಸಾಹಿತಿ ಆರ್.ಡಿ.ಪಾಂಬೂರು, ಗಾಂಧಿ ವಿಚಾರ ವೇದಿಕೆಯ ಕಟೀಲು ಸೀತ್ಲ ರಂಗನಾಥ ರಾವ್ ಉಪಸ್ಥಿತರಿದ್ದರು.

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಸ್ವಾಗತಿಸಿ ನಿರೂಪಿಸಿದರು. ಗಾಂಧಿ ವಿಚಾರ ವೇದಿಕೆ ಉಡುಪಿ ಘಟಕದ ಅಧ್ಯಕ್ಷೆ ಸೌಜನ್ಯಾ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News