ಬಂಧನದ ಆದೇಶವಿಲ್ಲದಿದ್ದರೂ ವ್ಯಕ್ತಿಯ ಬಂಧನ ಅಚ್ಚರಿ ಮೂಡಿಸಿದೆ: ಸುಪ್ರೀಂಕೋರ್ಟ್‌

Update: 2022-07-04 15:59 GMT

ಹೊಸದಿಲ್ಲಿ,ಜು.4: ಮಹಾರಾಷ್ಟ್ರದಲ್ಲಿಯ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಬಂಧಿಸದಂತೆ ತನ್ನ ನಿರ್ದಿಷ್ಟ ಮಧ್ಯಂತರ ಆದೇಶದ ಹೊರತಾಗಿಯೂ ಪೊಲೀಸರು ಆತನ ವಿರುದ್ಧ ಜಾಮೀನುರಹಿತ ವಾರಂಟ್ ಪಡೆದುಕೊಂಡು ಆತನನ್ನು ಜೈಲಿಗೆ ತಳ್ಳಿರುವುದು ಆಶ್ಚರ್ಯಕರ ಮತ್ತು ವಿಚಿತ್ರವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಬಣ್ಣಿಸಿದೆ.

ವ್ಯಕ್ತಿಯು ಸಲ್ಲಿಸಿದ್ದ ಅರ್ಜಿಯ ಕುರಿತು ಮೇ 7ರಂದು ಸರ್ವೋಚ್ಚ ನ್ಯಾಯಾಲಯವು ನೋಟಿಸನ್ನು ಹೊರಡಿಸಿತ್ತು ಮತ್ತು ಲಾತೂರಿನಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಕೂಡದು ಎಂದು ಹೇಳಿದ್ದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ದಿನೇಶ ಮಹೇಶ್ವರಿ ಮತ್ತು ಕೃಷ್ಣ ಮುರಾರಿ ಅವರ ಪೀಠವು,ಇತರ ಯಾವುದೇ ಪ್ರಕರಣದಲ್ಲಿ ಅರ್ಜಿದಾರನ ಅಗತ್ಯವಿಲ್ಲದಿದ್ದರೆ ಆತನನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆದೇಶಿಸಿತು.

ಸರ್ವೋಚ್ಚ ನ್ಯಾಯಾಲಯವು ಮೇ 7ರಂದು ಆರು ವಾರಗಳಲ್ಲಿ ಮರಳಿಸಬಹುದಾದ ನೋಟಿಸ್ ಹೊರಡಿಸಿತ್ತು.

ವ್ಯಕ್ತಿಯು ಜೂ.24ರಂದು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರಾಗಿದ್ದಾಗ ಪೊಲೀಸರು ಆತನ ವಿರುದ್ಧ ಜಾಮೀನುರಹಿತ ವಾರಂಟ್ ಪಡೆದುಕೊಂಡಿದ್ದರು. ಸರ್ವೋಚ್ಚ ನ್ಯಾಯಾಲಯವು ನೀಡಿದ್ದ ಮಧ್ಯಂತರ ರಕ್ಷಣೆಯು ಅದರ ಆದೇಶದ ದಿನಾಂಕದಿಂದ ಆರು ವಾರಗಳಲ್ಲಿ ಅಂತ್ಯಗೊಂಡಿದೆ ಎಂದು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದ್ದರು.

ಮ್ಯಾಜಿಸ್ಟ್ರೇಟ್ ಅವರು ಆರು ತಿಂಗಳ ಅವಧಿಯನ್ನು ಈ ನ್ಯಾಯಾಲಯವು ಹೊರಡಿಸಿದ್ದ ಮರಳಿಸಬಹುದಾದ ನೋಟಿಸಿನ ದಿನಾಂಕದಿಂದ ಎರವಲು ಪಡೆದುಕೊಂಡಿರುವಂತಿದೆ ಎಂದು ಸೋಮವಾರದ ತನ್ನ ಆದೇಶದಲ್ಲಿ ಹೇಳಿರುವ ಸರ್ವೋಚ್ಚ ನ್ಯಾಯಾಲಯವು,ಪ್ರಾಸಿಕ್ಯೂಷನ್ ವಾರಂಟ್ ಅನ್ನು ಪಡೆದುಕೊಂಡಿದ್ದಕ್ಕೆ ಮತ್ತು ಮ್ಯಾಜಿಸ್ಟ್ರೇಟ್ ಅವರು ವಾರಂಟ್‌ನ್ನು ಹೊರಡಿಸಿದ್ದಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿತು. 
‘ಇದು ಆಶ್ಚರ್ಯಕಾರಿ ಮತ್ತು ಆಘಾತಕಾರಿ ಮಿತಿಗಳನ್ನು ಮೀರಿದೆ. ನಾವು ನಮ್ಮ ಮ್ಯಾಜಿಸ್ಟ್ರೇಟ್‌ಗೂ ಶಿಕ್ಷಣ ನೀಡಬೇಕಿದೆ. ಅದು ನಿಮ್ಮ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತದೆ ’ ಎಂದು ಸರ್ವೋಚ್ಚ ನ್ಯಾಯಾಲಯವು ರಾಜ್ಯದ ಪರ ವಕೀಲರನ್ನು ತರಾಟೆಗೆತ್ತಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News