ಭಯೋತ್ಪಾದಕ ಎಂದು ಕರೆದು ಶರ್ಜೀಲ್‌ ಇಮಾಮ್‌ ಮೇಲೆ ತಿಹಾರ್‌ ಜೈಲುವಾಸಿಗಳಿಂದ ಹಲ್ಲೆ: ಆರೋಪ

Update: 2022-07-04 17:13 GMT

ಹೊಸದಿಲ್ಲಿ: ಫೆಬ್ರವರಿ 2020 ರ ಈಶಾನ್ಯ ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಜೆಎನ್‌ಯು ವಿದ್ಯಾರ್ಥಿ ಶರ್ಜೀಲ್‌ ಇಮಾಮ್, ತನ್ನ ಸೆಲ್‌ನೊಳಗೆ ಶೋಧ ನಡೆಸುವಾಗ ತಿಹಾರ್ ಜೈಲಿನ  ಅಪರಾಧಿಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಭಯೋತ್ಪಾದಕ ಎಂದು ಕರೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಈಶಾನ್ಯ ದಿಲ್ಲಿ ಗಲಭೆ ಪ್ರಕರಣದ ಆರೋಪಿ ಇಮಾಮ್‌, ಜೈಲಿನೊಳಗೆ ಹಲ್ಲೆ ನಡೆದಿರುವ ಆರೋಪ ಮಾಡಿರುವುದು ಇದೇ ಮೊದಲು. ಈ ಹಿಂದೆ, ಯುಎಪಿಎ ಪ್ರಕರಣದ ಪ್ರಮುಖ ಆರೋಪಿಗಳು ಅನೇಕ ನ್ಯಾಯಾಲಯದ ವಿಚಾರಣೆಗಳಲ್ಲಿ ಜೈಲು ಸಿಬ್ಬಂದಿಯಿಂದ ತಾರತಮ್ಯವನ್ನು ಎದುರಿಸಿರುವುದಾಗಿ ಆರೋಪಿಸಿದ್ದಾರೆ.

 "ಅರ್ಜಿದಾರರ ಮೇಲೆ ಹಲ್ಲೆ ಮತ್ತು ಅಕ್ರಮವಾಗಿ ಹುಡುಕಾಟ ನಡೆಸಿದ್ದಕ್ಕಾಗಿ" ಜೈಲು ಅಧಿಕಾರಿಗಳಿಗೆ ಷೋಕಾಸ್ ನೋಟಿಸ್ ನೀಡಲು ಮತ್ತು ಯಾವುದೇ  ಸಂಭಾವ್ಯ ಆಕ್ರಮಣ/ ಕಿರುಕುಳದಿಂದ  ಅವರನ್ನು ರಕ್ಷಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿಬೇಕೆಂದು ಇಮಾಮ್ ಅವರ ವಕೀಲ ಇಬ್ರಾಹಿಂ ಅವರು ಕರ್ಕರ್ಡೂಮಾ ನ್ಯಾಯಾಲಯದ   ನ್ಯಾಯಾಧೀಶರ ಮುಂದೆ ಅರ್ಜಿ ಸಲ್ಲಿಸಿದ್ದಾರೆ.

 ಜೂನ್ 30 ರಂದು ರಾತ್ರಿ 7.15 ರಿಂದ 8.30 ರವರೆಗೆ ಜೈಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ವಿಡಿಯೋವನ್ನು ಸಂರಕ್ಷಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ನ್ಯಾಯಾಲಯವನ್ನು ಕೋರಲಾಗಿದೆ.

  ನ್ಯಾಯಾಧೀಶರು ನೋಟಿಸ್ ಜಾರಿ ಮಾಡಿದ್ಉ, ಜುಲೈ 14 ರಂದು ಜೈಲು ಅಧಿಕಾರಿಗಳು ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ.

ಕಟ್ಟುನಿಟ್ಟಾದ ಯುಎಪಿಎ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾದ ಪ್ರಮುಖ ಗಲಭೆ ಪ್ರಕರಣದಲ್ಲಿ ಸೋಮವಾರ ಇಮಾಮ್ ಅವರನ್ನು ಕರ್ಕರ್ಡೂಮಾ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಇಮಾಮ್ ಅವರನ್ನು ನ್ಯಾಯಾಲಯದಲ್ಲಿ ಭೇಟಿಯಾದಾಗ ದಾಳಿಯನ್ನು ಬಹಿರಂಗಪಡಿಸಿದರು ಎಂದು ಅವರ ವಕೀಲರು ಹೇಳಿದ್ದಾರೆ.

“ಜೂನ್ 30 ರಂದು ಸಹಾಯಕ ಅಧೀಕ್ಷಕರು  8-9 ಅಪರಾಧಿಗಳೊಂದಿಗೆ ಹುಡುಕಾಟ ನಡೆಸುವ ಹೆಸರಿನಲ್ಲಿ ಅರ್ಜಿದಾರರ (ಶರ್ಜೀಲ್‌ ಇಮಾಮ್)‌ ಸೆಲ್‌ಗೆ ಬಂದರು” ಮತ್ತು ಈ “ಅಕ್ರಮ ಹುಡುಕಾಟದ ಸಮಯದಲ್ಲಿ, ಅರ್ಜಿದಾರರ ಪುಸ್ತಕಗಳು ಮತ್ತು ಬಟ್ಟೆಗಳನ್ನು ಬಿಸಾಡಲಾಯಿತು.   ವಸ್ತುಗಳನ್ನು ಎಸೆಯದಂತೆ ತಡೆಯುವಾಗ ಅರ್ಜಿದಾರರನ್ನು ಭಯೋತ್ಪಾದಕ ಮತ್ತು ದೇಶವಿರೋಧಿ ಎಂದು ಕರೆದು ಹಲ್ಲೆ ನಡೆಸಲಾಯಿತು” ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News